ವಸತಿ ಯೋಜನೆ ಅಡಿಪಾಯವೇ ಸಿದ್ಧವಿಲ್ಲ
ರಾಜ್ಯ ಸರ್ಕಾರವೇನೋ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ.
ಕ.ಪ್ರ.ವಾರ್ತೆ, ಬೆಂಗಳೂರು, ಸೆ. 10-
ರಾಜ್ಯ ಸರ್ಕಾರವೇನೋ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಈ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವುದೇ ಸಮಸ್ಯೆಯಾಗಿ ಪರಿಣಮಿಸಿದೆ.
ಫಲಾನುಭವಿಗಳ ಆಯ್ಕೆಗೆ ಸೆ.30ರ ಗಡುವು ನಿಗದಿಯಾಗಿದೆ. ಅಷ್ಟೇ ಅಲ್ಲ, ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣಕಾಸಿನ ನೆರವು ಪಡೆದ ಫಲಾನುಭವಿಗಳು ಅಕ್ಟೋಬರ್ 30ಕ್ಕೆ ಅಡಿಪಾಯ ಸಿದ್ಧಪಡಿಸಬೇಕು. ನವೆಂಬರ್ 28ಕ್ಕೆ ಗೋಡೆ ನಿರ್ಮಿಸಿರಬೇಕು ಮತ್ತು ಡಿಸೆಂಬರ್ 31ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿರಬೇಕು ಎಂದು ವಸತಿ ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಗ್ರಾಮಸಭೆಗಳೇ ನಡೆಯದೇ ಫಲಾನುಭವಿ ಆಯ್ಕೆಯೇ ಆಗಿಲ್ಲ. ಇನ್ನು ಪಾಯ, ಗೋಡೆ ಯಾವಾಗ? ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ.
ಹೊಸ ಯೋಜನೆಗಳ ಜಾರಿಗೆ ಕಟ್ಟುನಿಟ್ಟಿನ ಗಡುವು ನೀಡಿರುವ ಇಲಾಖೆ, ಹಿಂದಿನ ವರ್ಷದ ಫಲಾನುಭವಿಗಳಿಗೆ ಇನ್ನೂ ಹಣವನ್ನೇ ನೀಡಿಲ್ಲ. ಹೀಗಾಗಿ ಹಳೆಯ ಫಲಾನುಭವಿಗಳು ಹಣಕ್ಕಾಗಿ ಕಚೇರಿಗಳಿಗೆ ಅಲೆಯುತ್ತಿದ್ದರೆ, ಹೊಸ ಯೋಜನೆಗಳಿಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ.
ಸದಸ್ಯರಿಂದಲೇ ಸಮಸ್ಯೆ: ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಹಾಗೂ ಕೇಂದ್ರ ಸರ್ಕಾರದ ಇಂದಿರಾ ಆವಾಜ್ ಯೋಜನೆಯಡಿ ಒಟ್ಟು 2.20ಲಕ್ಷ ಮನೆಗಳನ್ನು ನಿರ್ಮಿಸಲು ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ 2.440ಕೋಟಿ ಮೀಸಲಿಡಲಾಗಿದೆ.
ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಇಲಾಖೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿ ಎರಡು ತಿಂಗಳೇ ಕಳೆದಿದ್ದು, ಪಂಚಾಯಿತಿಗಳು ಇನ್ನು 22 ದಿನಗಳ ಒಳಗೆ ಪಟ್ಟಿ ಕಳುಹಿಸಬೇಕಿದೆ. ಆದರೆ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಹುತೇಕ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳು ಫಲಾನುಭವಿಗಳನ್ನೇ ಆಯ್ಕೆ ಮಾಡಿಲ್ಲ.
ಹೀಗಾಗಿ ಸರ್ಕಾರ ಬಜೆಟ್ ಮಂಡಿಸಿ ಎರಡು ತಿಂಗಳೇ ಕಳೆದರೂ ಯೋಜನೆಗಳಿಗೆ ಚಾಲನೆ ಸಿಗದಂತಾಗಿದೆ. ಅದರಲ್ಲೂ ಈ ಬಾರಿ ಪೈಪೋಟಿ ಹೆಚ್ಚಾಗಿದೆ. ಪಂಚಾಯಿತಿ ಸದಸ್ಯರು ತಮ್ಮವರನ್ನು ಫಲಾನುಭವಿ ಮಾಡಲು ಸ್ಥಳೀಯ ರಾಜಕಾರಣಕ್ಕಿಳಿದ ಕಾರಣ ಅನೇಕ ಕಡೆ ಗ್ರಾಮಸಭೆಗಳೇ ನಡೆಯದಂತಾಗಿವೆ.
ಯಾರಿಗೆ ಎಷ್ಟು ನೆರವು ಸಿಗುತ್ತೆ?: ಬಸವ ವಸತಿ ಯೋಜನೆ ಹಾಗೂ ಕೇಂದ್ರ ಸರ್ಕಾರದ ಇಂದಿರಾ ಆವಾಜ್ ಯೋಜನೆಯಲ್ಲಿ ಫಲಾನುಭವಿಗೆ 1.20ಲಕ್ಷ ನೀಡಲಾಗುತ್ತದೆ. ಇಂಥ ಮನೆಗಳು ಪ್ರತಿ ಗ್ರಾಮಕ್ಕೆ 20 ಮಾತ್ರ ಇರುತ್ತವೆ. ನಗರ ಸ್ಥಳೀಯ ಸಂಸ್ಥೆಗಳಾದರೆ 50 ಮನೆಗಳು. ನಗರ ಸಭೆಗಳಲ್ಲಿ 250 ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ.
ಇದರಲ್ಲಿ ಶೇ.50ರಷ್ಟು ಮನೆಗಳು ಪರಿಶಿಷ್ಟಜಾತಿ,ವರ್ಗಕ್ಕೆ. ಉಳಿದ ಶೇ.50ರಷ್ಟು ಮನೆ ಸಾಮಾನ್ಯ ವರ್ಗಕ್ಕೆ ಮೀಸಲು. ಇನ್ನು ಇಂದಿರಾ ಆವಾಜ್ ಯೋಜನೆಯಲ್ಲಿ ಶೇ.22.75 ಪರಿಶಿಷ್ಟಜಾತಿ ಮತ್ತು ವರ್ಗಕ್ಕೆ, ಶೇ.15ರಷ್ಟು ಅಲ್ಪಸಂಖ್ಯಾತರಿಗೆ. ಇನ್ನುಳಿದ ಮನೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುತ್ತದೆ.
ಫಲಾನುಭವಿಗಳನ್ನು ಗ್ರಾಮಪಂಚಾಯಿತಿಗಳು ಆಯ್ಕೆ ಮಾಡಿದ ನಂತರ ಅದನ್ನು ಶಾಸಕರ ನೇತೃತ್ವತ್ವ ಸಮಿತಿ, ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ, ಆನಂತರ ವಸತಿ ಇಲಾಖೆಯ ಸಂಬಂಧಿಸಿದ ವಸತಿ ನಿಗಮ ಅನುಮೋದಿಸುತ್ತದೆ. ಆದರೆ, ಫಲಾನುಭವಿಗಳ ಆಯ್ಕೆಯಲ್ಲಿ ಆಗುತ್ತಿರುವ ವಿಳಂಬ ನೋಡಿದರೆ, ಈ ಎಲ್ಲಾ ಪ್ರಕ್ರಿಯೆ ಮುಗಿಯಲು ಇನ್ನೂ 3 ತಿಂಗಳಾದರೂ ಬೇಕು ಎನ್ನುತ್ತಾರೆ ಅಧಿಕಾರಿಗಳು.
ಫಲವಿಲ್ಲದೆ ಫಲಾನುಭವಿಗಳ ಪರದಾಟ
ಈವರೆಗೆ ಇದ್ದ ವ್ಯವಸ್ಥೆಯಲ್ಲಿ ತಾಲೂಕು ಮಟ್ಟದ ಒಬ್ಬ ನೋಡಲ್ ಅಧಿಕಾರಿ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಮನೆ ನಿರ್ಮಾಣದ ಕಾಮಗಾರಿ ಪರಿಶೀಲಿಸಿ ಅದನ್ನು ಜಿಪಿಎಸ್ ಮಾಡಿಸಿ ಇಲಾಖೆಯಿಂದ ಅನುಮೋದನೆ ಪಡೆಯಬೇಕಿತ್ತು. ಇದರಿಂದಾಗಿ 176 ತಾಲೂಕುಗಳ ನೋಡಲ್ ಅಧಿಕಾರಿಗಳು 23000 ಗ್ರಾಮಗಳಿಗೆ ಹೋಗಿ ಕಾಮಗಾರಿ ಪರಿಶೀಲಿಸಿ ಪಟ್ಟಿ ಕಳುಹಿಸುವುದು ಕಷ್ಟವಾಗಿತ್ತು. ಇದರೊಂದಿಗೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುಂಠಿತವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ನೆಲಕಚ್ಚಿತು. ಸುಮಾರು 2.5ಲಕ್ಷ ಮಂದಿ ಫಲಾನುಭವಿಗಳಾಗಿದ್ದರೂ ಸರ್ಕಾರದಿಂದ ಸಕಾಲಕ್ಕೆ ನೆರವು ಸಿಗಲಿಲ್ಲ. ಸರ್ಕಾರದ ಹಣ ನೆಚ್ಚಿಕೊಂಡು ಅವರು ಇದ್ದ ಮನೆಯನ್ನೂ ಕೆಡವಿ ಈಗ ನಿರಾಶ್ರಿತರಾಗಿದ್ದಾರೆ. ನಂತರ ಬಂದ ಹೊಸ ಸರ್ಕಾರ ಫಲಾನುಭವಿಗಳ ಆಯ್ಕೆಗೆ ನೀಡಿದ್ದ ಗಡುವನ್ನು ಮತ್ತೊಂದು ತಿಂಗಳು ವಿಸ್ತರಿಸಿದ್ದರಿಂದ 62,000 ಮಂದಿ ಯೋಜನೆ ವ್ಯಾಪ್ತಿಗೆ ಬಂದರು. ಆದರೆ, ಇಲಾಖೆ ಅವರಿಗೆ ಇನ್ನೂ ಹಣವನ್ನೇ ನೀಡಿಲ್ಲ. ಕಾರಣ ಹಣಕಾಸಿನ ಮುಗ್ಗಟ್ಟು ಎನ್ನುತ್ತಿದ್ದಾರೆ.
ಈ ವರ್ಷ 2,440ಕೋಟಿ ವೆಚ್ಚದಲ್ಲಿ 2.20ಲಕ್ಷ ಮನೆಗಳನ್ನು ನಿರ್ಮಿಸಬೇಕೆನ್ನುವುದು ಇಲಾಖೆ ಗುರಿಯಾಗಿದೆ. ಇದರೊಂದಿಗೆ ಹಿಂದಿನ ವರ್ಷದ 62,000 ಮನೆಗಳನ್ನೂ ನಿರ್ಮಿಸಲು ನೆರವು ನೀಡಲಾಗುತ್ತಿದೆ. ಈ ವರ್ಷ ಯೋಜನೆ ಮತ್ತು ಅದರ ನಿಯಮಗಳನ್ನು ತ್ವರಿತವಾಗಿ, ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುತ್ತೇವೆ.
- ಡಾ.ಕೆ.ಜಿ. ಜಗದೀಶ್, ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
- ಶಿವಕುಮಾರ್ ಬೆಳ್ಳಿತಟ್ಟೆ