ವೈದ್ಯ ಸೀಟಿಗಾಗಿ ಜಾತಿಯೇ ಬದಲು
ವೈದ್ಯ ಸೀಟಿಗಾಗಿ ರಾತ್ರೋರಾತ್ರಿ ಜಾತಿಯೇ ಬದಲಾದರೆ ಹೇಗೆ? ಇಂಥದೊಂದು ಕರಾಮತ್ತು ನಡೆದಿದೆ. ಎಂಬಿಬಿಎಸ್ ಸೀಟಿಗಾಗಿ 'ವ್ಯವಹಾರ' ಕುದುರಿಸಿ 'ರೆಡ್ಡಿ'
ಕ.ಪ್ರ.ವಾರ್ತೆ, ಬೆಂಗಳೂರು, ಸೆ. 10-
ವೈದ್ಯ ಸೀಟಿಗಾಗಿ ರಾತ್ರೋರಾತ್ರಿ ಜಾತಿಯೇ ಬದಲಾದರೆ ಹೇಗೆ?
ಇಂಥದೊಂದು ಕರಾಮತ್ತು ನಡೆದಿದೆ. ಎಂಬಿಬಿಎಸ್ ಸೀಟಿಗಾಗಿ 'ವ್ಯವಹಾರ' ಕುದುರಿಸಿ 'ರೆಡ್ಡಿ' ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ 'ತಿಗಳ' ಜನಾಂಗದವಳಾಗಿ ಪರಿವರ್ತನೆ ಆಗಿದ್ದಾಳೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಈ ಶೈಕ್ಷಣಕ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದ ಕೌನ್ಸೆಲಿಂಗ್ ಸಂದರ್ಭದಲ್ಲಿ ಆಗಿರುವ ಅಕ್ರಮವಿದು. ಮೂರು ಹಂತದ ಕೌನ್ಸೆಲಿಂಗ್ ಅಂತ್ಯವಾದ ಬಳಿಕ '3-ಎ' ಪ್ರವರ್ಗದಿಂದ '2-ಎ' ಪ್ರವರ್ಗಕ್ಕೆ ವಿದ್ಯಾರ್ಥಿನಿಯ ಜಾತಿಯನ್ನು ಬದಲಾಯಿಸಲಾಗಿದೆ. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯ ಸಮ್ಮತವಿರುವುದು 'ಶಿಫಾರಸು' ಪತ್ರದ ಮೂಲಕ ಬಹಿರಂಗವಾಗಿದೆ.
ಕೆಇಎನಲ್ಲಿ 'ವ್ಯವಹಾರ' ನಡೆಸಿದರೆ ಕೌನ್ಸೆಲಿಂಗ್ನಲ್ಲಿ 'ಎಲ್ಲವೂ' ಸಾಧ್ಯ ಎನ್ನುವ ಆರೋಪಗಳಿಗೆ ಇಂಬು ದೊರತಂತಾಗಿದೆ. ಈ ಸಂಬಂಧ ಸಂಪೂರ್ಣ ದಾಖಲೆಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ.
ಪತ್ರಿಕೆಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಆ.8ರಂದು ದಾಖಲೆಗಳನ್ನು ತಿರುಚಲಾಗಿದೆ. ಪ್ರಾಧಿಕಾರದ ನಿಯಮಗಳ ಪ್ರಕಾರ ದಾಖಲೆ ಪರಿಶೀಲನೆಯ ಬಳಿಕ ಯಾವುದೆ ವಿದ್ಯಾರ್ಥಿಯ ಜಾತಿ ಅಥವಾ ಅಂಕಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮೂರು ಹಂತದ ಕೌನ್ಸೆಲಿಂಗ್ ಮುಗಿದು ಶೇ.80ರಷ್ಟು ಸೀಟು ಹಂಚಿಕೆಯಾದ ಬಳಿಕ ಜಾತಿ ಬದಲಾವಣೆಯಾಗಿದೆ. ಆ ಸಂದರ್ಭದಲ್ಲಿ ಸರ್ಕಾರಿ ಕೋಟಾದ 61 ವೈದ್ಯ ಸೀಟುಗಳು ಖಾಲಿ ಉಳಿದಿದ್ದವು.
ಜಾತಿ ಬದಲಾಗಿದ್ದು ಹೇಗೆ?: ಬೆಂಗಳೂರಿನ ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಓದಿದ ಕೀರ್ತನಾ (ಹೆಸರು ಬದಲಿಸಲಾಗಿದೆ) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಸಿಇಟಿಯಲ್ಲಿ 3000 ಆಸುಪಾಸಿನ ರ್ಯಾಂಕ್ ಪಡೆದಿದ್ದಾಳೆ. ಜೂನ್ ತಿಂಗಳಲ್ಲಿ ನಡೆದ ದಾಖಲೆ ಪರಿಶೀಲನೆಯಲ್ಲಿ ಆಕೆ 'ರೆಡ್ಡಿ' ಜನಾಂಗ ಹಾಗೂ '3-ಎ' ಪ್ರವರ್ಗಕ್ಕೆ ಸೇರಿದ್ದೇನೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಳು. ಇದಲ್ಲದೇ 2011ರಲ್ಲಿ ಸಿಬಿಎಸ್ಇ ನೀಡಿರುವ ಪ್ರಮಾಣಪತ್ರ ಹಾಗೂ ಖಾಸಗಿ ಶಾಲೆಯ 'ಅಧ್ಯಯನ ಪ್ರಮಾಣಪತ್ರ'ದಲ್ಲಿಯೂ 'ರೆಡ್ಡಿ' ಜನಾಂಗವೆಂದೇ ದಾಖಲೆ ಇದೆ.
ಕಳೆದ ಮಾರ್ಚ್ನಲ್ಲಿ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಅವರಿಂದ ಪಡೆದ 'ರೆಡ್ಡಿ, 3-ಎ ಪ್ರವರ್ಗ ಹಾಗೂ 3 ಲಕ್ಷ ವಾರ್ಷಿಕ ಆದಾಯ' ಎಂದು ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಆಕೆ ಲಗತ್ತಿಸಿದ್ದಳು.
ಆದರೆ 3 ಹಂತದ ಕೌನ್ಸೆಲಿಂಗ್ ಅಂತ್ಯವಾದ ಬಳಿಕ ವಿದ್ಯಾರ್ಥಿನಿಗೆ ಜ್ಞಾನೋದಯವಾಗಿ ತಾನು 'ತಿಗಳ' ಜನಾಂಗಕ್ಕೆ ಸೇರಿದ್ದು, '2-ಎ' ಪ್ರವರ್ಗಕ್ಕೆ ಬರುತ್ತೇನೆ ಎಂದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಆ.8ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಗೆ ಪತ್ರ ಬರೆದು ಅರ್ಜಿ ಸಲ್ಲಿಸುವಾಗ ಪ್ರಮಾದದಿಂದ '2-ಎ' ಪ್ರವರ್ಗ ಹಾಗೂ 'ರೆಡ್ಡಿ' ಜನಾಂಗ ಎಂದು ದಾಖಲಿಸಿದ್ದೇನೆ, ಇದನ್ನು ಬದಲಾಯಿಸಿಕೊಡಬೇಕು ಎಂದು ಮನವಿ ಮಾಡುತ್ತಾಳೆ. ಇದಕ್ಕೆ ಒಪ್ಪಿಗೆ ಸೂಚಿಸುವ ಆಡಳಿತಾಧಿಕಾರಿ, 'ದಯವಿಟ್ಟು ಪರಿಶೀಲಿಸಿ ಮತ್ತು ಸರಿಪಡಿಸಿ' ಎಂದು ರವಿ ಎನ್ನುವ ಅಧಿಕಾರಿಗೆ ಶಿಫಾರಸು ಮಾಡುತ್ತಾರೆ. ಅಂತಿಮವಾಗಿ ಬಾಗಲಕೋಟೆಯ ವೈದ್ಯಕೀಯ ಕಾಲೇಜಿನಲ್ಲಿ '2-ಎ' ಪ್ರವರ್ಗದ ಮೂಲಕವೇ ಕೀರ್ತನಾ ಸೀಟು ಪಡೆಯುತ್ತಾಳೆ.
ನಡೆದಿರುವ ಅಕ್ರಮವೇನು?: ಆಕೆ ನಿಜವಾಗಿಯೂ2ಎ ಪ್ರವರ್ಗಕ್ಕೆ ಸೇರಿದ್ದರೆ ಮಾರ್ಚ್ನಲ್ಲಿ ಅರ್ಜಿ ಸಲ್ಲಿಸುವಾಗ ರೆಡ್ಡಿ ಹಾಗೂ 3-ಎ ಪ್ರವರ್ಗ ಎಂದು ತಹಶೀಲ್ದಾರ್ರಿಂದ ಪ್ರಮಾಣಪತ್ರ ಲಗತ್ತಿಸುತ್ತಿರಲಿಲ್ಲ. 3 ಹಂತದ ಕೌನ್ಸೆಲಿಂಗ್ ಬಳಿಕವೂ 3-ಎ ಪ್ರವರ್ಗದ ಮೀಸಲಿನಲ್ಲಿ ಸೀಟು ಸಿಗದಿರುವುದರಿಂದ ದಾಖಲೆ ತಿದ್ದಲಾಗಿದೆ. ಒಂದೊಮ್ಮೆ ಜಾತಿ ಪ್ರಮಾಣಪತ್ರ ಅಥವಾ ಅರ್ಜಿಯಲ್ಲಿ ಪ್ರಮಾದವಾಗಿದ್ದರೆ ದಾಖಲೆ ಪರಿಶೀಲನೆ ಸಂದರ್ಭದಲ್ಲಿಯೇ ಬದಲಿಸಬೇಕಿತ್ತು. ಪ್ರಮಾದವಾಗಿದ್ದರೂ ಸತತ 3 ಹಂತದ ಕೌನ್ಸೆಲಿಂಗ್ಗೆ ಹಾಜರಾಗುವ ಅನಿವಾರ್ಯತೆಯಿರಲಿಲ್ಲ.
ಮತ್ತೊಂದೆಡೆ ದ್ವಿತೀಯ ಪಿಯುಸಿಯ ಫಲಿತಾಂಶ ಬರುವವರೆಗೂ ಎಲ್ಲ ಪ್ರಮಾಣಪತ್ರ ಹಾಗೂ ದಾಖಲೆಗಳಲ್ಲಿ ರೆಡ್ಡಿ ಎಂದು ದಾಖಲಾಗಿ ಇದ್ದಕ್ಕಿದ್ದಂತೆ ತಿಗಳ ಎಂದು ಬದಲಾಗಲು ಮ್ಯಾಜಿಕ್ ನಡೆಯಬೇಕಷ್ಟೆ.
ಇದಲ್ಲದೇ ಆಕೆ ಕಣ್ತಪ್ಪಿನಿಂದ ಯಾವುದೆ ಪ್ರಮಾದ ಮಾಡಿಲ್ಲ. ಎಲ್ಲ ವಿಚಾರ ತಿಳಿದೆ ಅರ್ಜಿ ಸಲ್ಲಿಸಿರುವುದು ಖಾತ್ರಿಯಾಗಿದೆ. ಏಕೆಂದರೆ ಅರ್ಜಿಯಲ್ಲಿ ರೆಡ್ಡಿ, 3-ಎ ಎಂದು ದಾಖಲಿಸಿ ಅದಕ್ಕೆ ಅಗತ್ಯವಿರುವ ಜಾತಿ ಪ್ರಮಾಣಪತ್ರ, ಅಧ್ಯಯನ ಪ್ರಮಾಣಪತ್ರವನ್ನು ನೀಡಿದ್ದಾಳೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಇಂತಹ ಅಕ್ರಮ ನಡೆದಿರಲು ಸಾಧ್ಯವಿಲ್ಲ. ಏಕೆಂದರೆ ಜಾತಿ ಬದಲಾಯಿಸಲು ಖುದ್ದು ಆಡಳಿತಾಧಿಕಾರಿಯ ಶಿಫಾರಸು ಪತ್ರವಿದೆ.
ಎರಡು ಪ್ರಮಾಣಪತ್ರ!
ಮಾ.1ರಂದು ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಅವರು ರೆಡ್ಡಿ, 3-ಎ ಪ್ರವರ್ಗ ಹಾಗೂ 3 ಲಕ್ಷ ಆದಾಯ ಎಂದು ಆದಾಯ ಮತ್ತು ಜಾತಿ ಪ್ರಮಾಣಪತ್ರ ನೀಡುತ್ತಾರೆ. ಇದಾಗಿ 8 ತಿಂಗಳ ಬಳಿಕ ಆ.8ರಂದು ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರ್ ಅವರು ತಿಗಳ, 2-ಎ ಪ್ರವರ್ಗ ಹಾಗೂ 36 ಸಾವಿರ ಆದಾಯ ಎಂದು ಪ್ರಮಾಣಪತ್ರ ನೀಡುತ್ತಾರೆ. ಎಂಟು ತಿಂಗಳಲ್ಲಿ ಜಾತಿ ಮಾತ್ರ ಬದಲಾಗದೇ ಸುಮಾರು 2.64 ಲಕ್ಷ ಆದಾಯವು ಕುಸಿದಿದೆ.
ಅಕ್ರಮಕ್ಕೆ ಅಧಿಕಾರಿಗಳೇ ಕಾರಣ...
ಈ ಅಕ್ರಮಕ್ಕೆ ಅಧಿಕಾರಿಗಳೇ ಕಾರಣ. ಪ್ರಾಧಿಕಾರ ನೀಡುವ ಮೀಸಲು ಸೀಟಿನಲ್ಲಿ ಇಂತಹ ಅಕ್ರಮಗಳು ನಡೆಯುವ ಆರೋಪ ಈ ಹಿಂದೆಯೂ ಕೇಳಿಬಂದಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಇನ್ನೆಷ್ಟು ಇಂತಹ ಸುಳ್ಳು ಪ್ರಮಾಣಪತ್ರದ 'ವ್ಯವಹಾರ' ನಡೆದಿದೆ ಎನ್ನುವುದು ಸರ್ಕಾರ ನಡೆಸಬೇಕಿರುವ ತನಿಖೆಯಿಂದ ಮಾತ್ರ ತಿಳಿದು ಬರುತ್ತದೆ. ಈ ವಿದ್ಯಾರ್ಥಿನಿಯ ಸೀಟು ರದ್ದು ಪಡಿಸುವುದರಿಂದ ಒಂದು ವೈದ್ಯರ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸದಿದ್ದರೇ ಪ್ರತಿ ವರ್ಷ ಇಂತಹ ಅಕ್ರಮಗಳು ನಡೆಯುತ್ತವೆ. ಈ ಹಿಂದೆ ಇಂತಹ ಎಷ್ಟು ಪ್ರಕರಣಗಳು ನಡೆದಿವೆಯೋ..?
ವೇಳಾಪಟ್ಟಿ
- ದಾಖಲೆ ಪರಿಶೀಲನೆ- ಜೂ.5- ಜೂ.23
- ಮೊದಲ ಹಂತದ ಕೌನ್ಸೆಲಿಂಗ್- ಜು.2-ಜು.10
- 2ನೇ ಹಂತದ ಕೌನ್ಸೆಲಿಂಗ್- ಜು.17- ಜು.28
- 2ನೇ ಹಂತದ ಹೆಚ್ಚುವರಿ ಕೌನ್ಸೆಲಿಂಗ್- ಜು.30-ಆ.1
- ಅಂತಿಮ ಹಂತದ ಕೌನ್ಸೆಲಿಂಗ್- ಆ.6-ಆ.13