ಹಾಲಿನ ದರ ಏರಿಕೆಗೆ ತಡೆ ಇಲ್ಲ
ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್) ಹಾಲಿನ ದರ ಹೆಚ್ಚಿಸುವ ಬಗ್ಗೆ ಕೈಗೊಂಡಿರುವ ನಿರ್ಧಾರದಲ್ಲಿ ರಾಜ್ಯ ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.10-
ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್) ಹಾಲಿನ ದರ ಹೆಚ್ಚಿಸುವ ಬಗ್ಗೆ ಕೈಗೊಂಡಿರುವ ನಿರ್ಧಾರದಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ಕೆಎಂಎಫ್ಗೆ ಹಣ ನೀಡಲು ಸಾಧ್ಯ ಇಲ್ಲ ಎಂದು ಪಶು ಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ಲೀಟರ್ ಹಾಲಿಗೆ 4 ಪ್ರೋತ್ಸಾಹ ನೀಡುವ ಯೋಜನೆ ಜಾರಿ ಬಂದಾಗಿನಿಂದ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಹಾಲಿನ ಉತ್ಪನ್ನಗಳ ಸಂಸ್ಕರಣೆಗೆ ಮೂಲ ಸೌಕರ್ಯ ಕಲ್ಪಿಸಿಕೊಳ್ಳಬೇಕಿದೆ. ಇದಕ್ಕಾಗಿ ಅವರು ಹಾಲು ದರ ಪರಿಷ್ಕರಿಸಿಕೊಳ್ಳುತ್ತಿದ್ದರೆ ಸರ್ಕಾರ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಜಯಚಂದ್ರ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಕೆಎಂಎಫ್ಗೂ ಆರ್ಥಿಕ ಹೊರೆ ಹೆಚ್ಚಾಗುತ್ತಲೆ ಇದೆ. ಈ ಕಾರಣದಿಂದ ಅವರು ದರ ಹೆಚ್ಚಿಸುವ ಕ್ರಮಕ್ಕೆ ಸರ್ಕಾರ ಅಡ್ಡಿಯಾಗುವುದಿಲ್ಲ ಎಂದು ಸಚಿವರು ಹೇಳಿದರು.
ಕೆಎಂಎಫ್ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಅಲ್ಲಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಎಲ್ಲ ಹಾಲು ಒಕ್ಕೂಟಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದರು.
ವಿದ್ಯುತ್ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ: ಮೇಕೆದಾಟು ಬಳಿ ಎರಡು ಜಲ ವಿದ್ಯುತ್ ಯೋಜನೆ ಕೈಗೊಳ್ಳುವ ನಿರ್ಧಾರದಿಂದ ಹಿಂದೆ ಸರಿಯದಿರಲು ಸರ್ಕಾರ ನಿರ್ಧರಿಸಿದೆ. ತಮಿಳುನಾಡಿಗೆ ನೀರಿನ ತೊಂದರೆಯಾಗದಂತೆ ಈ ಯೋಜನೆ ಜಾರಿಗೆ ಬರಲಿದೆ ಎಂದು ಜಯಚಂದ್ರ ತಿಳಿಸಿದ್ದಾರೆ.
ಈ ವಿದ್ಯುತ್ ಯೋಜನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ನಂತರ ಯೋಜನೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ, ಒಪ್ಪಿಗೆ ಪಡೆದು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ತಮಿಳುನಾಡಿಗೆ ಜೂನ್ನಿಂದ ಸೆಪ್ಟೆಂಬರ್ವರೆಗೆ 134 ಟಿಎಂಸಿ ನೀರು ಹರಿಸಬೇಕು. ಈ ಪ್ರಮಾಣ ತಿಂಗಳನ್ವಯ ನಿಗದಿಯಾಗಿದೆ. ಪ್ರತಿ ವರ್ಷವೂ ಮಳೆ ಪ್ರಮಾಣದಲ್ಲಿ ಬದಲಾವಣೆಯಾಗುತ್ತದೆ. ಆದರೆ ತಮಿಳುನಾಡಿಗೆ ಆ ಪ್ರಮಾಣದ ನೀರು ಬಿಟ್ಟು ಹೆಚ್ಚಿನ ನೀರನ್ನು ವಿದ್ಯುತ್ ಯೋಜನೆಗೆ ಬಳಸಿಕೊಳ್ಳಲು ಅಡ್ಡಿ ಇಲ್ಲ. ಇದನ್ನು ಕಾವೇರಿ ನ್ಯಾಯಾಧಿಕರಣದ ಅಂತಿಮ ವರದಿಯ ಪುಟ ಸಂಖ್ಯೆ 13 ಷೆಡ್ಯೂಲ್ 9ರಲ್ಲೂ ಉಲ್ಲೇಖಿಸಲಾಗಿದೆ. ತೀರ್ಪಿಗೆ ವಿರುದ್ಧವಾಗಿ ನಾವು ಏನೂ ಮಾಡುವುದಿಲ್ಲ. ಮಳೆ ಕೊರತೆಯಾದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆ ನಿವಾರಣೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ತಮಿಳುನಾಡಿಗೆ ನೀರು ಹರಿಸಿದ ಮೇಲೂ ಉಳಿಯುವ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಹೀಗೆ ಹಿಡಿದಿಟ್ಟುಕೊಂಡ ನೀರಿನಿಂದ ನಾವು ವಿದ್ಯುತ್ ತಯಾರಿಸಬಹುದೇ ಹೊರತು ಕೃಷಿ ಮಾಡಲು ಸಾಧ್ಯ ಇಲ್ಲ. ಕಾವೇರಿ 'ಹೈ' ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಸಹ ಪ್ರಶ್ನಿಸಿದೆ. ಇದು ಇತ್ಯರ್ಥವಾಗಬೇಕಿದೆ. ಜಲ ವಿದ್ಯುತ್ ಯೋಜನೆ ಪ್ರಶ್ನಿಸಿಯೂ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೊಕ್ಕಿದೆ. ಕಾನೂನು ತಜ್ಞರ ಸಲಹೆಯಂತೆ ನಾವು ಮುಂದಿನ ಹೆಜ್ಜೆ ಇರಿಸಲಿದ್ದೇವೆ ಎಂದು ತಿಳಿಸಿದರು.
ಹಾಲು ದರ ಪರಿಷ್ಕರಣೆ ವಿವರ (ಪ್ರತಿ ಲೀಟರ್ಗೆ)
ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕಶ್ರೀ
ವರ್ಗ ಪ್ರಸ್ತುತ ದರ ಪರಿಷ್ಕೃತ ಪ್ರಸ್ತುತ ದರ ಪರಿಷ್ಕೃತ
ಟೋನ್ಡ್ ಹಾಲು 27 29 28 30
ಡಬಲ್ ಟೋನ್ಡ್ ಹಾಲು 26 28 - -
ಹೋಮೊಜೈನ್ಡ್ ಟೋನ್ಡ್ ಹಾಲು 28 30 29 31
ಹೋಮೊಜೈನ್ಡ್ ಹಸು ಹಾಲು 31 33 32 34
ಶುಭಂ (ಸ್ಟ್ಯಾಂಡರ್ಡೈಸ್ಡ್ ಹಾಲು) 33 35 34 36
ಶುಭಂ (ಸ್ಟ್ಯಾಂಡರ್ಡೈಸ್ಡ್
ಹೋಮೊಜೈನ್ಡ್ ಹಾಲು) 34 36 34 36
ಸಮೃದ್ಧಿ (ಎಫ್ಸಿಎಂ) 36 38 36 38
ಮೊಸರು (500 ಎಂಎಲ್) 17 18 17 18
ಧಾರವಾಡ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಗುಲ್ಬರ್ಗಾ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟ
ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಕೆಎಂಎಫ್ಗೂ ಆರ್ಥಿಕ ಹೊರೆ ಹೆಚ್ಚಾಗುತ್ತಲೆ ಇದೆ. ಈ ಕಾರಣದಿಂದ ಅವರು ದರ ಹೆಚ್ಚಿಸುವ ಕ್ರಮಕ್ಕೆ ಸರ್ಕಾರ ಅಡ್ಡಿಯಾಗುವುದಿಲ್ಲ.
- ಟಿ.ಬಿ. ಜಯಚಂದ್ರ,
ಪಶು ಸಂಗೋಪನೆ ಸಚಿವ