ಕೆಪಿಎಸ್ಸಿ ಅಕ್ರಮ: ಸರ್ಕಾರಕ್ಕೆ ಸಿಐಡಿಯಿಂದ ವರದಿ ಸಲ್ಲಿಕೆ
ಬೆಂಗಳೂರು : ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ನಡೆಸಿದ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳ ಕುರಿತು ತನಿಖೆ ಪೂರ್ಣಗೊಳಿಸಿರುವ ಸಿಐಡಿ ಸರ್ಕಾರಕ್ಕೆ ಬುಧವಾರ ತವರದಿ ಸಲ್ಲಿಸಿದೆ. ವರದಿಯನ್ನು ಮುಖ್ಯಮಂತ್ರಿ, ಗೃಹ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವೋ ಅವರಿಗೆ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವೋ ಅವರಿಗೆ ಸಿಐಡಿ ಮುಖ್ಯಸ್ಥ ಬಿಪಿನ್ ಗೋಪಾಲಕೃಷ್ಣ ವರದಿಯನ್ನು ಖುದ್ದಾಗಿ ಸಲ್ಲಿಸಿದ್ದಾರೆ. ಅಕ್ರಮ ನೇಮಕಾತಿ, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಹೆಸರುಗಳು, ಅಕ್ರಮ ನೇಮಕ ನಡೆದಿದ್ದು ಹೇಗೆ ಎಂಬುದು ಸೇರಿದಂತೆ ಎಲ್ಲ ವಿವರಗಳನ್ನು 200 ಪುಟಗಳಲ್ಲಿ ವಿಸ್ತೃತವಾಗಿ ವಿವರಿಸಿ ವರದಿ ಸಲ್ಲಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಕೆಪಿಎಸ್ಸಿ ಎ ಮತ್ತು ಬಿ ದರ್ಜೆ ಹುದ್ದೆಗಳ ನೇಮಕದಲ್ಲಿ ನಡೆಸಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ 6 ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಮುಖ್ಯಮಂತ್ರಿಗಳ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಆಯೋಗದ ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೆಪಿಎಸ್ಸಿ ಸದಸ್ಯೆ ಮಂಗಳಾ ಶ್ರೀಧರ್ ಹಾಗೂ ಅವರ ಆಪ್ತ ಸಹಾಯಕ, ಕೆಪಿಎಸ್ಸಿ ಅಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಸೇರಿದಂತೆ ಇತರರು ಉದ್ಯೋಗಾಕಾಂಕ್ಷಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಬಳಿಕ ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಮೌಖಿಕ ಸಂದರ್ಶನದಲ್ಲಿ ಅತಿ ಕಡಿಮೆ ಅಂಕ ನೀಡಲಾಗಿತ್ತು. ರು. 70 ಲಕ್ಷ ಲಂಚ ನೀಡಿದರೆ ಮಾತ್ರ ಕಂದಾಯ ಇಲಾಖೆ ಸಹಾಯಕ ಆಯುಕ್ತರ ಹುದ್ದೆ ನೀಡುವುದಾಗಿ ಕೆಪಿಎಸ್ಸಿ ಸದಸ್ಯರೊಬ್ಬರು ಬೇಡಿಕೆ ಇಟ್ಟಿದ್ದರು. ಆದರೆ ಲಂಚ ನೀಡಲು ನಿರಾಕರಿಸಿದ ಕಾರಣ ತಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಅಭ್ಯರ್ಥಿ ದೂರಿದ್ದರು.