ಮಳೆ ಅಬ್ಬರಕ್ಕೆ ಒಂಬತ್ತು ಸಾವು
ರಾಜ್ಯದ ಹಲವೆಡೆ ವರುಣ ತನ್ನ ಆರ್ಭಟ ಮುಂದುವರಿಸಿದ್ದು, ಮಳೆಗೆ ಸಂಬಂಧಿಸಿದ ದುರಂತಗಳಲ್ಲಿ ಮಂಗಳವಾರದಿಂದೀಚೆಗೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.11
ರಾಜ್ಯದ ಹಲವೆಡೆ ವರುಣ ತನ್ನ ಆರ್ಭಟ ಮುಂದುವರಿಸಿದ್ದು, ಮಳೆಗೆ ಸಂಬಂಧಿಸಿದ ದುರಂತಗಳಲ್ಲಿ ಮಂಗಳವಾರದಿಂದೀಚೆಗೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಗುಲ್ಬರ್ಗ ಜಿಲ್ಲೆಯಲ್ಲಿ ಮಳೆಯಬ್ಬರ ವಿಪರೀತವಾಗಿದ್ದು, ಅನಾಹುತಗಳ ಸರಣಿಯನ್ನೇ ಸೃಷ್ಟಿಸಿ ಐವರನ್ನು ಬಲಿ ತೆಗೆದುಕೊಂಡಿದೆ. ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದಲ್ಲಿ ಸಿಡಿಲಿಗೆ ಅಂಬಯ್ಯ ಹಾಗೂ ಪರಶುರಾಮ್ ಮೃತಪಟ್ಟರೆ, ಸೇಡಂನಲ್ಲಿರುವ ಊಡಗಿ ನಾಲಾ ತುಂಬಿ ಹರಿದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಖಯೂಮ್ ಪಟೇಲ್ (55) ಹಾಗೂ ಮರೆಪ್ಪ (43) ದಾರುಣ ಅಂತ್ಯ ಕಂಡಿದ್ದಾರೆ. ಹೊಲಕ್ಕೆ ಹೋಗಿದ್ದ ತಾಯಿಯನ್ನು ಕರೆಯಲು ಹೋಗುತ್ತಿದ್ದಾಗ ಸೇಡಂ ತಾಲೂಕಿನ ಕಾನಗಡ್ಡಾ ಗ್ರಾಮದ ವೆಂಕಟಪ್ಪ ಸಾಯಿಬಣ್ಣ ಎಂಬಾತ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ಗುಡಿಸಲು ಕುಸಿದು ಕೊಪ್ಪಳ ಜಿಲ್ಲೆಯ ಮೆಹಬೂಬನಗರದಲ್ಲಿ ಬುಧವಾರ ಬೆಳಗಿನ ಜಾವ ಶ್ಯಾಮೀದಸಾಬ (70), ದಾವಲ್‌ಸಾಬ (41) ಮತ್ತು ಬೇಬಿಜಾನ್ (55) ಮೃತಪಟ್ಟರೆ, ಘಟನೆಯಲ್ಲಿ 10 ವರ್ಷದ ಬಾಲಕನೊಬ್ಬನನ್ನು ನೆರೆಹೊರೆ ಯುವಕರು ರಕ್ಷಿಸಿದ್ದಾರೆ.
ಚಾವಣಿ ಕುಸಿದು ರಾಯಚೂರು ತಾಲೂಕಿನ ಜೆ.ಮಲ್ಲಾಪುರ ಗ್ರಾಮದ ನಾಗಪ್ಪ ಕಬ್ಬೇರ್ (35) ಎಂಬವರು ಅಸುನೀಗಿದ್ದಾನೆ.
ಚಿತ್ತಾಪುರದಲ್ಲಿ ಜನ ತತ್ತರ: ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದಲ್ಲಿ ಮಂಗಳವಾರ ಸಂಜೆಯಿಂದ ಗುಡುಗು ಮಿಂಚಿನಿಂದ ಕೂಡಿದ ಮಳೆಗೆ ಜನರು ತತ್ತರಿಸಿದ್ದಾರೆ. ನಿರಂತರವಾಗಿ ಸುರಿದ ಮಳೆಗೆ ಪಟ್ಟಣದ ವಿವಿಧ ಭಾಗಗಳ ಹಲವಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ರಸ್ತೆಯಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ಉರುಳಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ.
ರಾಯಚೂರಲ್ಲಿ ರಭಸದ ಮಳೆ: ರಾಯಚೂರು ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯ ಆರ್ಭಟ ವಿಪರೀತವಾಗಿದ್ದು, ಚರಂಡಿ ನೀರು ರಸ್ತೆಗೆ ನುಗ್ಗಿದ್ದರಿಂದ ಬಹುತೇಕ ಕಡೆ ರಸ್ತೆ ಸಂಚಾರ ವ್ಯತ್ಯಯವಾಗಿದೆ. ಮಾನವಿ ತಾಲೂಕಿನ ಲಕ್ಕಂದಿನ್ನಿ ಗ್ರಾಮದ ಸಂಪರ್ಕ ಸೇತುವೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿದುಕೊಂಡಿದೆ.
ಮೈಸೂರು ಭಾಗದಲ್ಲಿಯೂ ವರುಣನ ಅಬ್ಬರ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮರದ ಕೊಂಬೆಗಳು ಅಲ್ಲಲ್ಲಿ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ಚಿಕ್ಕಬಳ್ಳಾಪುರ ನಗರಸಭೆಯ ಕಟ್ಟಡದಿಂದ ನೀರು ಸೋರಿಕೆಯಾಗಿ ಕಚೇರಿಯಲ್ಲಿರುವ ಕಡತಗಳು ನೆನೆದು ಹಾಳಾಗಿವೆ. ಧಾರವಾಡ, ಕಾರವಾರ ಜಿಲ್ಲಾದ್ಯಂತ ಜಿಟಿ ಜಿಟಿ ಮಳೆಯಾದರೆ, ಬೆಳಗಾವಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.