ಅತ್ತಾವರ ಮನೆ ಉಗ್ರರ ನೆಲೆ: ಸ್ಫೋಟಕ ವಶ
ಕ.ಪ್ರ.ವಾರ್ತೆ , ಮಂಗಳೂರು , ಸೆ. 12
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸೀನ್ ಭಟ್ಕಳ ಮತ್ತು ಸಹಚರ ಅಸಾದುಲ್ಲಾ ಬೇಗ್ ತಂಗಿದ್ದ ಮಂಗಳೂರು ನಗರದ ಅತ್ತಾವರದ ಅಪಾರ್ಟ್‌ಮೆಂಟ್‌ನಿಂದ ಎನ್‌ಐಎ ಅಧಿಕಾರಿಗಳು ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಂಗಳೂರಿಗೆ ಉಗ್ರನನ್ನು ಕರೆತಂದು ವಿಚಾರಣೆ ನಡೆಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಮನೀಷ್ ಕರ್ಭೀಕರ್ ಹೇಳಿದ್ದಾರೆ. ಹೀಗಿದ್ದಾಗ್ಯೂ, ಎನ್‌ಐಎ ಮಂಗಳೂರಿಗೆ ಸೆ.4ರಂದು ಬಂದು, ಅಸಾದುಲ್ಲಾ ಎಂಬ ಉಗ್ರನ ಮನೆ ಶೋಧ ನಡೆಸಿರುವುದಾಗಿ ಗುಪ್ತಚರ ಮೂಲಗಳು ಖಚಿತ ಪಡಿಸಿವೆ.
ಯಾಸೀನ್ ಆಗಮನ ವದಂತಿ: ಮಂಗಳೂರಿನ ಅತ್ತಾವರ ಝೇಪಿಯರ್ ಹೈಟ್ಸ್ ಕಟ್ಟಡದ 301ನೇ ಬಾಡಿಗೆ ಮನೆಯಲ್ಲಿ ಅಸಾದುಲ್ಲಾ ವಾಸವಾಗಿದ್ದ. ಕೆಲವು ದಿನಗಳ ಹಿಂದೆ ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಅಸಾದುಲ್ಲಾ ಬೇಗ್‌ನನ್ನು ಕರೆದುಕೊಂಡು ಬಂದಿದ್ದರು. ಆದರೆ ಯಾಸೀನ್ ಭಟ್ಕಳನನ್ನೇ ಕರೆತಂದಿರುವ ಬಗ್ಗೆ ವದಂತಿ ಹಬ್ಬಿತ್ತು. ನಾಲ್ಕು ಗಂಟೆಗಳ ಕಾಲ ತಪಾಸಣೆ ನಡೆಸಿದ ಅಧಿಕಾರಿಗಳಿಗೆ 50 ಡಿಜಿಟಲ್ ವಾಚ್, ಸರ್ಕ್ಯೂಟ್, ಡಿಟೋನೇಟರ್‌ಗಳು, ಸೆಲ್‌ಫೋನ್‌ಗಳು, ನೈಟ್ರೇಟ್ ಜೆಲ್ ಮೊದಲಾದ ಸಾಮಗ್ರಿ ವಶಕ್ಕೆ ತೆಗೆದುಕೊಂಡಿದ್ದರು.
ಅಸಾದುಲ್ಲಾ ಹೈದರಾಬಾದ್ ದಿಲ್‌ಸುಖ್ ನಗರದಲ್ಲಿನ ಸ್ಫೋಟಕ್ಕೆ ಮುನ್ನ ಮಂಗಳೂರಲ್ಲಿ 6 ತಿಂಗಳ ತಂಗಿದ್ದ ಎನ್ನಲಾಗಿದೆ. ಅಸಾದುಲ್ಲಾ ಬಾಂಬ್ ಇಡುತ್ತಿದ್ದರೆ, ವಕಾಸ್ ಮತ್ತು ಮೋಣಿ ಬಾಂಬ್‌ಗಳನ್ನು ಜೋಡಿಸುವ ವೇಳೆ ಐಇಡಿ ಸರ್ಕ್ಯೂಟ್ ಸಂಪರ್ಕಿಸುವ ಕೆಲಸ ಮಾಡುತ್ತಿದ್ದರು. ಮಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಇರುವಷ್ಟು ದಿನ ವೆಸ್ಟರ್ನ್ ಯೂನಿಯನ್ ಮೂಲಕ ವಿದೇಶದಿಂದ ದೇಣಿಗೆ ಬರುತ್ತಿತ್ತು. ಅಸಾದುಲ್ಲಾ ಬಂಧನಕ್ಕೊಳಗಾಗುವ ವೇಳೆಯೂ ಇನ್ನೊಂದು ಸ್ಫೋಟಕ್ಕೆ ಸಿದ್ಧನಾಗುತ್ತಿದ್ದ. ಅಸಾದುಲ್ಲಾ ಸಿಕ್ಕಿಬಿದ್ದರೆ ಮೋನು ವಕಾಸ್ ನಾಪತ್ತೆಯಾಗಿದ್ದಾರೆ.
2008ರಲ್ಲಿ ಮಂಗಳೂರಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ರಿಯಾಜ್ ಭಟ್ಕಳ್, ಈತನ ಅಣ್ಣ ಇಕ್ಬಾಲ್ ಭಟ್ಕಳ್ ಜತೆ ಯಾಸೀನ್ ಪರಾರಿಯಾಗಿದ್ದ. ವಿಚಿತ್ರ ಎಂದರೆ ಆಗ ಅವರು ತಂಗಿದ್ದು ಪೊಲೀಸ್ ಠಾಣೆ ಪಕ್ಕದ ಸುಭಾಷ್ ನಗರದ ಎರಡು ಮನೆಗಳಲ್ಲಿ. ಉಳ್ಳಾಲ ಮುಕ್ಕಚ್ಚೇರಿ, ಚೆಂಬುಗುಡ್ಡೆ ಪ್ರದೇಶದಲ್ಲಿ.
ಈ ಬಾರಿ ತಪಾಸಣೆ ನಡೆದಿದ್ದು ನಗರ ಮಧ್ಯದ ಅತ್ತಾವರದಲ್ಲಿ. ಅಂದು ಮಂಗಳೂರು ಸ್ಲೀಪಿಂಗ್ ಸೆಲ್ ಎಂಬುದು ಪೊಲೀಸರಿಗೆ ಗೊತ್ತಾಗಿತ್ತು. 2008ರ ವೇಳೆ ಒಟ್ಟು 8ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿದ್ದರು. ಮಂಗಳೂರಲ್ಲಿ ಪೊಲೀಸ್ ಇಲಾಖೆ ಇನ್ನೂ ಸ್ಲೀಪಿಂಗ್ ಸೆಲ್‌ನಲ್ಲಿಯೇ ಇದೆ ಎನ್ನುವುದು ಸೋಜಿಗ!
ರಾಯಚೂರಿನಲ್ಲಿ ಸ್ಫೋಟಕ ಜಪ್ತಿ
ರಾಯಚೂರು: ಆಂಧ್ರದಿಂದ ನಗರದ ಮೂಲಕ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಜಪ್ತಿ ಮಾಡಿದ ನಗರದ ಪೊಲೀಸರು ವಾಹನ ವಶಕ್ಕೆ ಪಡೆದು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ರಾಜಸ್ಥಾನ್ ಮೂಲದ ಸರವಣ್ ಗುಜ್ಜರ್(38) ಎಂದು ಗುರುತಿಸಲಾಗಿದೆ. ಈತ ಮಹೀಂದ್ರಾ ಕಂಟೇನರ್ ವಾಹನದಲ್ಲಿ ರಾತ್ರಿ ವೇಳೆ ಭಾರೀ ಪ್ರಮಾಣದ ಸ್ಫೋಟಕ ಸಾಗಿಸುತ್ತಿದ್ದಾಗ ಮಾರ್ಗದಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ 50 ಕೆಜಿಯ 10 ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಒಟ್ಟು 500 ಕೆಜಿ ಅಮೋನಿಯಂ ನೈಟ್ರೇಟ್ ಮತ್ತು 20 ರಟ್ಟಿನ ಬಾಕ್ಸ್‌ಗಳಲ್ಲಿದ್ದ 500 ಕೆಜಿ ಜಿಲೆಟಿನ್ ಕಡ್ಡಿಗಳು, 5 ರಟ್ಟಿನ ಬಾಕ್ಸ್‌ನಲ್ಲಿದ್ದ 7500 ಡೆಟೋನೆಟರ್ಸ್ ಸೇರಿ ಒಟ್ಟು 1,18,320 ಬೆಲೆಯ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಆರೋಪಿಯನ್ನು ಬಂಧಿಸಿ ವಾಹನ ಜಪ್ತಿ ಮಾಡಿದ್ದಾರೆ. ಚಾಲಕ ಸರವಣ್ ವಿಚಾರಣೆ ವೇಳೆ ಸಿಂದಗಿಯ ಕೃಷ್ಣ ಗೋಪಾಲ, ಲಕ್ಷ್ಮಣ್ ಬೇರವಾಡಗಿ ಮತ್ತು ರಾಜು ಮುಂದ್ರಾ ಸ್ಫೋಟಕ ಸಾಗಿಸಲು ಹಾಗೂ ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪುರದ ಈಶ್ವರರೆಡ್ಡಿ ಅವರಿಗೆ ತಲುಪಿಸಲು ಹೇಳಿದ್ದಾಗಿ ಮಾಹಿತಿ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.