ಇನ್ನು ದೇವರ ಆಭರಣಕ್ಕೂ 'ಲಾಕ್'ರ್
ಬೆಂಗಳೂರು: ಚಿನ್ನಾಭರಣ ದೇವರಿಗೆ ಸೇರಿದ್ದಾದರೇನು, ಜನ ಸಾಮಾನ್ಯರದ್ದಾದರೆ ಏನು? ಚೋರರಿಗೆ ಎಲ್ಲವೂ ಒಂದೇ. ಹೀಗಾಗಿಯೇ ದೇವಾಲಯಗಳಿಗೆ ನುಗ್ಗಿ ದೇವರ ವಿಗ್ರಹಗಳ ಚಿನ್ನಾಭರಣಗಳನ್ನು ದೋಚುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ.
ಇದರಿಂದ ಆತಂಕಕ್ಕೆ ಒಳಗಾಗಿರುವ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ದೇವರ ಆಭರಣಗಳಿಗೆ ಲಾಕರ್ ಸೌಲಭ್ಯ ಒದಗಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಅದಕ್ಕೂ ಮುನ್ನ ಇಲಾಖೆಗೆ ಸೇರಿರುವ ದೇವಾಲಯಗಳಲ್ಲಿ ಇರುವ ಆಭರಣಗಳು ಎಷ್ಟು ಎಂಬ ಕುರಿತು ಪರಿಶೀಲನೆ ನಡೆಯಲಿದೆ. ಎಲ್ಲ ದೇವಾಲಯಗಳಲ್ಲಿ ಈ ಸಮೀಕ್ಷೆ ಶುರುವಾಗಿದೆ.
ಸರ್ವೆ ಕಾರ್ಯ ಸಂಪೂರ್ಣ ಮುಗಿದ ನಂತರ ದೇವರಿಗೆ ಪ್ರತಿನಿತ್ಯ ತೊಡಿಸುವ ಆಭರಣ ಹೊರತುಪಡಿಸಿ ಉಳಿದ ಆಭರಣಗಳನ್ನು ಸಂಬಂಧಪಟ್ಟ ತಾಲೂಕು/ಜಿಲ್ಲೆಯ ಸರ್ಕಾರಿ ಇಲಾಖೆಯ ಟ್ರೆಷರಿಯಲ್ಲಿಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಬೆಲೆ ಬಾಳುವ ಆಭರಣಗಳನ್ನು ಹೊಂದಿರುವ ದೇವಾಲಯಗಳಿಗೆ ಭದ್ರತೆ ಒದಗಿಸುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ದೇವಸ್ಥಾನಗಳಿದ್ದು, ಆ ಪೈಕಿ 35 ಸಾವಿರ ಮುಜರಾಯಿ ಇಲಾಖೆಗೆ ಸೇರಿವೆ. ದೇಗುಲಗಳಲ್ಲಿ ಕಳ್ಳತನ ಹೆಚ್ಚಾಗಲು ಭದ್ರತೆಯ ಕೊರತೆಯೂ ಪ್ರಮುಖ ಕಾರಣವಾಗಿದೆ. ಏಕೆಂದರೆ, ದೇವಾಲಯಗಳಿಗೆ ಹೊಂದಿಕೊಂಡಂತೆ ಅರ್ಚಕರ ಮನೆಗಳು ಇರುವುದಿಲ್ಲ. ಕಾವಲಿಗೆ ಭದ್ರತಾ ಸಿಬ್ಬಂದಿಯನ್ನೂನೇಮಕ ಮಾಡಿರುವುದಿಲ್ಲ.
ವಾರ್ಷಿಕ 25 ಲಕ್ಷಕ್ಕಿಂತ ಹೆಚ್ಚು ಆದಾಯ ಬರುವ ದೇವಸ್ಧಾನಗಳನ್ನು ಎ, ಗಂಪಿಗೆ ಸೇರಿಸಲಾಗಿದೆ. 5ರಿಂದ 25 ಲಕ್ಷದವರೆಗೆ ಆದಾಯ ಇರುವ ದೇವಾಲಯಗಳನ್ನು ಬಿ ಮತ್ತು ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ದೇವಸ್ಥಾನಗಳನ್ನು ಸಿ ಗುಂಪಿಗೆ ಸೇರಿಸಲಾಗಿದೆ.
ಕಾನೂನು ತಿದ್ದುಪಡಿಯಾಗಲಿ: ದೇವಸ್ಥಾನದಲ್ಲಿ ಕಳವಾದರೆ ಅದಕ್ಕೆ ಪ್ರತ್ಯೇಕ ಕಾನೂನು ಎಂಬುದಿಲ್ಲ. ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಕಾಯ್ದೆ ಅಡಿಯಲ್ಲಿಯೇ ಕೇಸು ದಾಖಲಾಗುತ್ತದೆ. ದೇವಸ್ಥಾನ ಕಳವು ಪ್ರಕರಣವೂ ಅದೇ ವ್ಯಾಪ್ತಿಗೆ ಬರುತ್ತದೆ.
ಹೀಗಾಗಿ ದೇವಾಲಯಗಳಲ್ಲಿ ಆಭರಣಗಳನ್ನು ಕದ್ದವರು ಬಂಧನಕ್ಕೆ ಒಳಗಾಗಿ ಶಿಕ್ಷೆಗೆ ಗುರಿಯಾದರೂ ಮೂರೇ ವರ್ಷದಲ್ಲಿ ಜೈಲಿನಿಂದ ಹೊರ ಬರುತ್ತಾರೆ. ಹೀಗೆ ಬಂದವರಲ್ಲಿ ಅನೇಕರು ಮತ್ತೆ ದೇವಾಲಯಗಳಿಗೇ ಕನ್ನ ಹಾಕುತ್ತಾರೆ. ಕೆಲವೊಮ್ಮೆ ಸಾಕ್ಷಿ ಸಿಗದೆ ಪ್ರಕರಣ ಖುಲಾಸೆಗೊಳ್ಳುತ್ತವೆ. ಹೀಗಾಗಿ ದೇವಾಲಯಗಳಲ್ಲಿ ಕಳವು ಮಾಡುವವರಿಗೆ ಇದಕ್ಕಿಂತ ಕಠಿಣ ಶಿಕ್ಷೆ ಆಗಬೇಕು. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಬೇಕು ಎಂಬ ಕೂಗು ಕೇಳಿ ಬಂದಿದೆ.
ಮಂಡ್ಯ, ಬೆಂಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು, ಹಾಸನ, ಬೆಂಗಳೂರು ಜಿಲ್ಲೆ, ತುಮಕೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ರಾಮನಗರ, ಉತ್ತರ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. 2012ರಲ್ಲಿ 435 ಪ್ರಕರಣಗಳು ದಾಖಲಾಗಿದ್ದು, 1.81 ಕೋಟಿಗೂ ಅಧಿಕ ಮೌಲ್ಯದ ಆಭರಣ ಚೋರರ ಪಾಲಾಗಿದೆ. ಅದೇ ರೀತಿ 2013ರಲ್ಲಿ ಈ ವರೆಗೆ 230ಕ್ಕೂ ಹೆಚ್ಚು ಕೇಸು ದಾಖಲಾಗಿದ್ದು, 90 ಲಕ್ಷಕ್ಕೂ ಹೆಚ್ಚಿನ ಮೊತ್ತದ ಅಭರಣಗಳು ಕಳವಾಗಿದೆ. ಆದರೆ, ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ ಅಂದಾಜು 250.
ಸರ್ಕಾರದ ಮಾರ್ಗಸೂಚಿ: ಕಳವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದರ ಪ್ರಕಾರ, ಮುಜರಾಯಿ ಹಾಗೂ ಖಾಸಗಿ ದೇವಸ್ಥಾನಗಳ ನಿರ್ವಾಹಕರು/ ಮಂಡಳಿಗಳು/ ಟ್ರಸ್ಟ್ಗಳು ತಮ್ಮ ದೇವಸ್ಥಾನಕ್ಕೆ ಖಾಸಗಿ ಭದ್ರತೆ ಒದಗಿಸಬೇಕು. ಈ ಸಂಬಂಧ ಆಯಾ ವ್ಯಾಪ್ತಿಯ ಠಾಣೆಗಳಿಗೆ ಮಾಹಿತಿ ನೀಡಬೇಕು. ಪ್ರತಿ ತಿಂಗಳು ನಡೆಯುವ ಪೊಲೀಸ್ ಸಭೆಯಲ್ಲಿ ಚರ್ಚಿಸಬೇಕು. ಗಸ್ತು ಪೊಲೀಸರಿಗೆ ಸೂಚಿಸಿ, ಗಸ್ತು ಮಾಡಿದ ಬಗ್ಗೆ ಸಹಿ ಪಡೆಯಬೇಕು. ಪ್ರತಿ ದೇವಸ್ಥಾನದಲ್ಲೂ ಸಿಸಿ ಟಿ.ವಿ. ಕ್ಯಾಮರಾ ಅಳವಡಿಸಬೇಕು. ವಿಗ್ರಹದ ಮೇಲೆ ರಾತ್ರಿ ಆಭರಣ ಹಾಕಬಾರದು. ರಾತ್ರಿ ವೇಳೆ ಆಭರಣ ಸುರಕ್ಷಿತವಾಗಿಡಬೇಕು.
ಗಂಧದ ಮರ ಕದ್ದವನಿಗೆ ಜಾಮೀನು ಸಿಗದು. ಅದೇ ರೀತಿ ದೇವಸ್ಥಾನದಲ್ಲಿ ಕದ್ದವನಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಶಿಕ್ಷೆ ಪ್ರಮಾಣ ಹೆಚ್ಚಿಸಬೇಕು. ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಬೇಕು.
- ಪಿ.ಪಿ.ಹೆಗಡೆ, ವಕೀಲರು, ಉಚ್ಚನ್ಯಾಯಾಲಯ
ಕಳ್ಳತನ ನಿಯಂತ್ರಣಕ್ಕೆ ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ.
- ಶ್ರೀವತ್ಸ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ, ನೌಕರರ ಸಂಘ
-ಶಾಂತ ತಮ್ಮಯ್ಯ