ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜ.7ರಿಂದ ಕನ್ನಡ ಸಾಹಿತ್ಯ ಜಾತ್ರೆ

Vishwanath S
Updated On : 12 Sept 2013, 11:04 am

ಮಡಿಕೇರಿ: ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನ ನಿಗದಿಯಾಗಿದ್ದು, ಜ.7ರಿಂದ 9ರವರೆಗೆ 3 ದಿನಗಳ ಕಾಲ ಮಡಿಕೇರಿಯಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಸ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ಗುರುವಾರ ನಡೆದ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಅಲ್ಲದೇ ಸಮ್ಮೇಳನಕ್ಕೆ ಸರ್ಕಾರದಿಂದ 3 ಕೋಟಿ ಅನುದಾನ ಕೋರುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.  ಇದೇ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳು ಅಧ್ಯಕ್ಷರಾಗಿ ಸಾರ್ವಜನಿಕ ಪ್ರಮುಖರು ಸಂಚಾಲಕರಾಗಿರುವ 27 ಉಪಸಮಿತಿಗಳಿಗೆ ಸದಸ್ಯರನ್ನು ನೇಮಿಸಲಾಯಿತು.
ಹೆಚ್ಚು ಅನುದಾನ ಬೇಡಿಕೆ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ತನ್ನ ಬಜೆಟ್‌ನಲ್ಲಿ 1 ಕೋಟಿ ಅನುದಾನ ನೀಡಿದೆ. ಆದರೆ, ಕೈಗಾರಿಕೆಗಳು, ವಾಣಿಜ್ಯ ಉದ್ದಿಮೆಗಳು ಹೆಚ್ಚಾಗಿಲ್ಲದ ಕೊಡಗಿನಲ್ಲಿ ಈ ಅಲ್ಪ ಅನುದಾನದಲ್ಲಿ ಸಮ್ಮೇಳನ ನಡೆಸಲು ಕಷ್ಟಸಾಧ್ಯವಾಗಬಹುದು. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 2 ಕೋಟಿ ಸರ್ಕಾರದಿಂದ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜ್ ಮೈದಾನದಲ್ಲಿ ಮುಖ್ಯ ಸಮ್ಮೇಳನ ನಡೆಸಿ, ಪೊಲೀಸ್ ಮೈದಾನ ಮತ್ತು ಮೈತ್ರಿ ಸಭಾಂಗಣದಲ್ಲಿ ಊಟೋಪಾಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅತಿಥಿ ಸತ್ಕಾರಕ್ಕೆ ಹೆಸರಾದ ಕೊಡಗಿನಲ್ಲಿ ನಡೆಯುವ ಸಮ್ಮೇಳನ ಕೊಡಗಿನವರು ಆತಿಥ್ಯ ಪ್ರಿಯರು ಎಂಬ ಹೆಸರನ್ನು ಉಳಿಸುವ ರೀತಿಯಲ್ಲಿ ನಡೆಯಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, 'ಸಮ್ಮೇಳನದಲ್ಲಿ ಸಣ್ಣ ಪುಟ್ಟ ಲೋಪಗಳು ದೊಡ್ಡದಾಗದಂತೆ ಗಮನ ಹರಿಸಿ, ಸಮ್ಮೇಳನದ ಮೂಲ ಉದ್ದೇಶಕ್ಕೆ ಚ್ಯುತಿ ಬಾರದಂತೆ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿ. ಸಮ್ಮೇಳನದ ಸಂದರ್ಭದಲ್ಲಿ ಸಾಹಿತ್ಯದ ರಸದೌತಣ ಸಮಸ್ತ ಕನ್ನಡಿಗರಿಗೂ ದೊರಕುವಂತಾಗಬೇಕು' ಎಂದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ 80 ನೇ ಕನ್ನಡಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement