ತಡೆ ನಡುವೆಯೂ ಅಧ್ಯಕ್ಷ-ಉಪಾಧ್ಯಕ್ಷರ ನಡೆ
ಬೆಂಗಳೂರು: ಹೈಕೋರ್ಟ್ನ ತಡೆಯಾಜ್ಞೆ ನಡುವೆಯೂ ರಾಜ್ಯದ ಹಲವಾರು ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿದ್ದು, ಪರಿಸ್ಥಿತಿ ಈಗ ಆಯೋವುಯವಾಗಿದೆ.
ಹೈಕೋರ್ಟ್ನಿಂದ ತಡೆ ಆದೇಶ ಹೊರಬಿದ್ದ ಬಳಿಕವೂ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಮನಸೋಯಿಚ್ಛೆ ಚುನಾವಣೆ ನಡೆದು ಹೋಗಿದೆ. ಚುನಾವಣೆ ನಡೆಸಿದವರು ನ್ಯಾಯಾಲಯದಿಂದ ತಡೆಯಾಜ್ಞೆ ಹೊರ ಬೀಳುವ ಮೊದಲೇ ಕೆಲಸ ಮಾಡಿ ಮುಗಿಸಿದ್ದೇವೆ ಎನ್ನುತ್ತಿದ್ದಾರೆ. ಚುನಾವಣೆ ನಡೆಸದವರು ನಾವು ಯಾಮಾರಿದೆವು ಎಂದು ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಅನೇಕ ಸ್ಥಳೀಯ ಸಂಸ್ಥೆಗಳು ತಡೆಯಾಜ್ಞೆ ನಂತರವೂ ವೇಳಾ ಪಟ್ಟಿ ಪ್ರಕಟಿಸಿ ಚುನಾವಣೆ ನಡೆಸಿದ್ದರೂ ಈ ವಿಚಾರ ಪೌರಾಡಳಿತ ಇಲಾಖೆಗೆ ಗೊತ್ತೇ ಆಗಿಲ್ಲ. ಏಕೆಂದರೆ, ಸ್ಥಳೀಯ ಸಂಸ್ಥೆಗಳು ಸ್ಥಳೀಯ ರಾಜಕೀಯ ಪ್ರಭಾವದಿಂದಾಗಿ ಹಿಂದಿನ ದಿನಾಂಕ ನಮೂದಿಸಿ ಚುನಾವಣೆ ನಡೆಸಿರುವುದೂ ಉಂಟು ಎಂಬ ದೂರುಗಳಿವೆ.
ಅಷ್ಟೇ ಅಲ್ಲ. ತಡೆಯಾಜ್ಞೆ ಬಗ್ಗೆ ಮಾಹಿತಿ ಇದ್ದರೂ ತೀರ್ಪು ಅಸ್ಪಷ್ಟ. ಅದು ನಮಗೆ ಅನ್ವಯಿಸುವುದಿಲ್ಲ. ನಮಗೆ ಸಂಬಂಧಿಸಿದಂತೆ ತೀರ್ಪು ಬಂದಾಗ ನೋಡೋಣ ಎಂದು ಚಿತ್ರದುರ್ಗ, ಹಾಸನ, ಉತ್ತರಕನ್ನಡ ಕನ್ನಡ ಜಿಲ್ಲೆಗಳಲ್ಲಿ ಚುನಾವಣೆ ನಡೆಸಲಾಗಿದೆ.
ಇದಕ್ಕೆಲ್ಲಾ ಮೀಸಲು ವಿಳಂಬವೇ ಕಾರಣ: ರಾಜ್ಯದ 7 ಮಹಾನಗರ ಪಾಲಿಕೆಗಳು, 43 ನಗರಸಭೆಗಳು, 65 ಪುರಸಭೆಗಳು ಹಾಗೂ 92 ಪಟ್ಟಣಪಂಚಾಯಿತಿಗಳೂ ಸೇರಿದಂತೆ ಒಟ್ಟು 207 ಸ್ಥಳೀಯ ಸಂಸ್ಥೆಗಳಿಗೆ ಮಾಚ್ 7ರಂದು ಚುನಾವಣೆ ನಡೆದಿತ್ತು. ಈ ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಚ್ ತಿಂಗಳ ಸಭೆ ನಡೆದು ಪಾಲಿಕೆಗಳಲ್ಲಿ ಮೇಯರ್, ಉಪ ಮೇಯರ್ ಆಯ್ಕೆ ನಡೆಯಬೇಕಿತ್ತು. ಇತರ ಸ್ಥಳೀಯ ಸಂಸ್ಥೆಗಳಲ್ಲಿಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಬೇಕಿತ್ತು. ಆದರೆ, ಹಿಂದಿನ ಸರ್ಕಾರ ತನ್ನದೇ ರಾಜಕೀಯ ಉದ್ದೇಶಕ್ಕೆ ಮೀಸಲು ಪಟ್ಟಿ ಪ್ರಕಟಿಸಲಿಲ್ಲ. ಆನಂತರ ಬಂದ ಹೊಸ ಸರ್ಕಾರ ಕೂಡ ಸಕಾಲಕ್ಕೆ ಮೀಸಲು ಪಟ್ಟಿ ನೀಡದೆ ಮೂರು ತಿಂಗಳ ನಂತರ ಪ್ರಕಟಿಸಿತು. ಆದರೆ, ಅದರಲ್ಲಿ ದೋಷಗಳು ನೂರಾರಿತ್ತು.
ಅಂದರೆ, ಕಳೆದ ಸಾಲಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಯಾವ ವರ್ಗಕ್ಕೆ ಮೀಸಲಿರಿಸಲಾಗುತ್ತೋ ಈ ಅವಧಿಗೂ ಅದೇ ವರ್ಗಕ್ಕೆ ನೀಡಲಾಗಿದೆ. ಇಂಥ ದೂರುಗಳು ಮಂಗಳೂರು, ದೇವನಹಳ್ಳಿ, ಗುಂಡ್ಲುಪೇಟೆ, ಕನಕಪುರ, ಮುಧೋಳ, ಸಕಲೇಶಪುರ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಿಂದ ಕೇಳಿಬಂದಿತ್ತು. ಇದು ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾ.ರವಿಮಳಿಮಠ್ ಅವರಿದ್ದ ಏಕಸದಸ್ಯ ಪೀಠ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ 2013ರ ಆಗಸ್ಟ್ 21ರಂದು ಹೊರಡಿಸಿದ್ದ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತು.
ತಡೆಯಾಜ್ಞೆ ಗೊತ್ತಿದ್ದರೂ ಚುನಾವಣೆ?
ಮೀಸಲು ಸೌಲಭ್ಯದಲ್ಲಿ ಅನ್ಯಾಯವಾಗಿದೆ ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕೋರ್ಟ್ ಕಳೆದ ಬುಧವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ (ಸೆ.4)ವೇ ತಡೆಯಾಜ್ಞೆ ನೀಡಿತ್ತು. ಆದರೆ, ಅದರ ಪ್ರತಿ ಪೌರಾಡಳಿತ ಇಲಾಖೆಗೆ ಸಿಕ್ಕಿದ್ದು ಶನಿವಾರ. ಆದರೆ, ಆ ಪ್ರತಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಸಂಸ್ಥೆಗೆ ತಡೆಯಾಜ್ಞೆ ಇದೆಯೇ ಅಥವಾ ಇಡೀ ರಾಜ್ಯದ ಎಲ್ಲಾ ಸಂಸ್ಥೆಗಳ ಚುನಾವಣೆಗೂ ತಡೆಯಾಜ್ಞೆ ಇದೆಯೋ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಇಲಾಖೆ ಅಡ್ವೊಕೇಟ್ ಜನರಲ್ ಅವರ ಬಳಿ ಸಮಸ್ಯೆ ಹೇಳಿತ್ತು. ಆನಂತರ ಭಾನುವಾರ, ಸೋಮವಾರ (ಹಬ್ಬ) ಸರ್ಕಾರಿ ರಜೆಯಾಗಿದ್ದ ಕಾರಣ ಈ ಮಾಹಿತಿಯನ್ನು ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಲಿಲ್ಲ. ನಂತರ ಮಂಗಳವಾರ ಅಡ್ವೋಕೇಟ್ ಜನರಲ್ ಅವರಿಂದ ಸ್ಪಷ್ಟ ಮಾಹಿತಿ ಸಿಕ್ಕಿತು. ಕೋರ್ಟ್ ನೀಡಿದ ತಡೆಯಾಜ್ಞೆ ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎನ್ನುವುದು ಗೊತ್ತಾಯಿತು. ಆದರೆ, ಕೋರ್ಟ್ ತೀರ್ಪು ನಮಗೆ ಅನ್ವಯಿಸುವುದಿಲ್ಲ ಎಂದು ಅನೇಕ ಸಂಸ್ಥೆಗಳು ಚುನಾವಣೆ ನಡೆಸಿ ಮುಗಿಸಿವೆ. ಆದರೆ ಇದ್ಯಾವುದೂ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಅವರಿಗೆ ಗೊತ್ತಾಗಿಲ್ಲ.
ಕೋರ್ಟ್ ತಡೆಯಾಜ್ಞೆ ನಂತರ ಚುನಾವಣೆ ನಡೆಸಿರುವ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ. ಹಾಗೇನಾದರೂ ಆಗಿದ್ದರೆ ಮತ್ತು ಹಿಂದಿನ ದಿನಾಂಕ ನಮೂದಿಸಿ ಚುನಾವಣೆ ನಡೆಸಿದ್ದರೆ ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೇವೆ.
- ಟಿ.ಕೆ. ಅನಿಲ್ಕುಮಾರ್, ಪೌರಾಡಳಿತ ಇಲಾಖೆ ಕಾರ್ಯದರ್ಶಿ
-ಶಿವಕುಮಾರ್ ಬೆಳ್ಳಿತಟ್ಟೆ