ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೇಗುಲ ಅನುದಾನ ಕೈ ಚೆಕ್

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳಿಗೆ ಬಿಡುಗಡೆ ಮಾಡಿದ್ದ ಕೋಟ್ಯಂತರ ರುಪಾಯಿ ಅನುದಾನ ಸದ್ಬಳಕೆಯಾಗಿದೆಯೇ...

Vishwanath S
Updated On : 12 Sept 2013, 11:00 am

ಕನ್ನಡಪ್ರಭ ವಾರ್ತೆ, ಬೆಂಗಳೂರು , ಸೆ.12
ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳಿಗೆ ಬಿಡುಗಡೆ ಮಾಡಿದ್ದ ಕೋಟ್ಯಂತರ ರುಪಾಯಿ ಅನುದಾನ ಸದ್ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಯಾಗಿರುವುದು ಮತ್ತು ಬಳಕೆಯಾಗಿರುವ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದರೆ ಮಠಗಳಿಗೆ ನೀಡಿದ ಹಣದ ಬಗ್ಗೆ ಸರ್ಕಾರ ತಟಸ್ಥವಾಗಿದೆ.
ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ, ಹಿಂದಿನ ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗೆಂದು ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿದೆ. ಆದರೆ, ಅನೇಕ ಕಡೆ ಈ ಹಣ ಸರಿಯಾದ ರೀತಿ ಬಳಕೆಯಾಗಿಲ್ಲ ಎಂಬ ಆರೋಪವಿದೆ. ಆದ್ದರಿಂದ ದೇವಸ್ಥಾನಗಳಿಗೆ ಹಂಚಿಕೆಯಾಗಿರುವ ಅನುದಾನ, ಬಿಡುಗಡೆಯಾಗಿರುವ ಮೊತ್ತ, ಖರ್ಚಾಗಿರುವ ಹಣ ಎಷ್ಟು? ಈ ಹಣ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಂದ ವರದಿ ಬಂದ ತಕ್ಷಣ ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾರ್ಗಸೂಚಿ ಇನ್ನೂ ಸಿದ್ಧವಾಗಿಲ್ಲ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಜರಾಯಿ ದೇವಸ್ಥಾನಗಳಿಗೆ ಆಡಳಿತ ಮಂಡಳಿಗಳನ್ನು ನೇಮಕ ಮಾಡಿದ್ದು, ಈ ಸಂದರ್ಭದಲ್ಲಿ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದ್ದರಿಂದ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿಗಳನ್ನು ರದ್ದುಗೊಳಿಸಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಡಳಿತ ಮಂಡಳಿ ನೇಮಕ ರದ್ದುಗೊಳಿಸಿದ ಸರ್ಕಾರಿ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಎ ದರ್ಜೆಯ 41 ದೇವಸ್ಥಾನಗಳಿವೆ.        
ಈ ಪೈಕಿ 7-8 ದೇವಸ್ಥಾನಗಳು ಮಾತ್ರ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದವು. ಹೈಕೋರ್ಟ್ ಸರ್ಕಾರದ ಆದೇಶವನ್ನು ವಜಾಗೊಳಿಸಿತ್ತು. ಈ ಕುರಿತಂತೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ದೇವಸ್ಥಾನಗಳಿಗೆ ಹೊಸ ಆಡಳಿತ ಮಂಡಳಿ ನೇಮಕ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಆಡಳಿತ ಮಂಡಳಿ ನೇಮಕ ಕುರಿತಂತೆ ಇನ್ನೂ ಮಾರ್ಗಸೂಚಿ ಸಿದ್ಧವಾಗಿಲ್ಲ.  ಸದ್ಯ ಆಡಳಿತ ಮಂಡಳಿಗಳ ಬದಲಾಗಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದ್ದು, ಅವರು ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಮಾರ್ಗಸೂಚಿ ಸಿದ್ಧವಾದ ಬಳಿಕ ಹೊಸ ಆಡಳಿತ ಮಂಡಳಿ ನೇಮಕ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಮುಜರಾಯಿ ದೇವಾಲಯಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಕುರಿತು ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ದೇವಾಲಯಗಳ ನಿರ್ವಹಣೆ ಈಗ ಇರುವಂತೆಯೇ ಮುಂದುವರಿಯಲಿದೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ದೇವಸ್ಥಾನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಈ ಕುರಿತು ಚರ್ಚಿಸಲಾಗಿದೆ. ಕಳ್ಳರನ್ನು ಪತ್ತೆಹಚ್ಚಿ ಕಳವಾಗಿರುವ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement