ಲೈಟ್ಗೆ ವಿಮಾನ ಡಿಕ್ಕಿ; 2 ಗಂಟೆ ಹಾರಾಟ ವ್ಯತ್ಯಯ
ಬೆಂಗಳೂರು: ಭೂಸ್ಪರ್ಶ ಮಾಡುತ್ತಿದ್ದ ವಿಮಾನ ರನ್ವೇ ಬಳಿ ಸಿಗ್ನಲ್ ಲೈಟ್ಗಳಿಗೆ (ಎಡ್ಜ್ ಲೈಟ್ಸ್) ಡಿಕ್ಕಿ ಹೊಡೆದಿರುವ ಘಟನೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು. ಜೊತೆಗೆ ವಿಮಾನಗಳ ಹಾರಾಟದ ಸಮಯದಲ್ಲೂ ವ್ಯತ್ಯವಾಗಿತ್ತು.
ಆಗಿದ್ದೇನು?: ದೆಹಲಿಯಿಂದ ಬಂದ ಇಂಡಿಗೋ ವಿಮಾನ ರನ್ವೇನಲ್ಲಿ ರಾತ್ರಿ 8.45ರ ಸಮಯದಲ್ಲಿ ಇಳಿಯುತ್ತಿತ್ತು. ಆಗ ಭಾರಿ ಮಳೆಯಾಗುತ್ತಿತ್ತು. ಮಂದ ಬೆಳಕಿನ ಪರಿಣಾಮ ಮತ್ತು ಮಳೆಯಿಂದಾಗಿ ರನ್ವೇ ಸ್ಪಷ್ಟವಾಗಿ ಪೈಲಟ್ಗೆ ಗೋಚರಿಸುತ್ತಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ರನ್ವೇಗೆ ಇಳಿಯುವಾಗ ವಿಮಾನ ಸಿಗ್ನಲ್ ಲೈಟ್ಗಳಿಗೆ ತಾಕಿತು. ಆದರೂ ವಿಮಾನ ಸುರಕ್ಷಿತವಾಗಿ ನಿಗದಿತ ಸ್ಥಳದಲ್ಲಿ ನಿಂತಿತು.
ಈ ಘಟನೆಯಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದಲ್ಲಿದ್ದವರು ಗಲಿಬಿಲಿಗೊಂಡರು. ರಕ್ಷಣಾ ಸಿಬ್ಬಂದಿ ಕೂಡಲೇ ವಿಮಾನದ ಬಳಿಗೆ ಧಾವಿಸಿದರು. ಘಟನೆಯಲ್ಲಿ ವಿಮಾನಕ್ಕೂ ಯಾವುದೇ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ಕಡೆಗೆ ಬರಬೇಕಿದ್ದ ವಿಮಾನಗಳ ಮಾರ್ಗವನ್ನು ಚೆನ್ನೈ ಕಡೆಗೆ ಬದಲಿಸಲಾಗಿತ್ತು.