ತುತ್ತು ಅನ್ನಕ್ಕೆ ಪರದಾಡುತ್ತಿರುವ ಮಾಜಿ ಸೈನಿಕ
ಕ.ಪ್ರ.ವಾರ್ತೆ ಬಿಜಾಪುರ ಸೆ. 13-
ದೇಶದ ಗಡಿ ಕಾಯುವ ಸೈನಿಕರನ್ನು ಜಮ್ಮು ಕಾಶ್ಮೀರದಂಥ ಪ್ರತಿಕೂಲ ವಾತಾವರಣ ಇರುವ ಪ್ರದೇಶಗಳಿಗೂ ಸುರಕ್ಷಿತವಾಗಿ ಕರೆದೊಯ್ದು, ಅವರಲ್ಲಿ ಆತ್ಮಸ್ಥೈರ್ಯ ತುಂಬಿ, ಸೇನೆಯಲ್ಲಿ ಚಾಲಕನಾಗಿ ಸೇವೆಗೈದ ಮಾಜಿ ಯೋಧನ ಕುಟುಂಬವೀಗ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯವೂ ಹೋರಾಡಬೇಕಿದೆ. ಅನ್ನ ಸಿಗದಿದ್ದರೆ ಈ ಮಾಜಿ ಯೋಧ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ಈ ಯೋಧನ ಕುಟುಂಬವಿದೆ.
ಬಿಜಾಪುರದ ಬಬಲೇಶ್ವರ ನಾಕಾ ಬಡಾವಣೆಯ ಬಂದಗಿಸಾಬ ಇನಾಮದಾರ 1957ರಲ್ಲಿ ಸೈನ್ಯ ಸೇರಿ 9 ವರ್ಷಗಳಿಗೂ ಹೆಚ್ಚು ಕಾಲ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಪಟಿಯಾಲಾ, ಉದಂಪುರ, ಕಾಶ್ಮೀರ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಂದಗಿಸಾಬನಿಗೆ ಇಬ್ಬರು ಪುತ್ರರು, ಪುತ್ರಿಯರಿದ್ದಾರೆ. ಎಲ್ಲರಿಗೂ ಮದುವೆಯಾಗಿದ್ದು, ಪ್ರತ್ಯೇಕವಾಗಿ ಸಂಸಾರ ಮಾಡುತ್ತಿದ್ದಾರೆ. ಒಬ್ಬ ಪುತ್ರ ಬೆಳಗಾವಿ ಕೆಎಸ್ಆರ್ಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಮತ್ತೊಬ್ಬರು ಬಿಜಾಪುರದಲ್ಲಿಯೇ ಪ್ರತ್ಯೇಕ ಮನೆ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ತಂದೆ, ತಾಯಿಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ. ಮದುವೆಯಾಗಿ ಬೇರೆ ಊರಲ್ಲಿ ಇರುವ ಇಬ್ಬರು ಪುತ್ರಿಯರಿಗೆ ತಮ್ಮ ಸಂಸಾರದ ನೊಗ ಜಗ್ಗುವುದೇ ಕಷ್ಟವಾಗಿದೆ.
ದುಡಿಯಲು ಕೈಯಲ್ಲಿ ತಾಕತ್ತಿಲ್ಲ: ಬಂದಗಿಸಾಬ ಹಾಗೂ ಆಶಾಬಿ ದಂಪತಿಗೆ ದುಡಿದು ತಿನ್ನಲು ಮೈಯಲ್ಲಿ ಶಕ್ತಿಯಿಲ್ಲ. ತುತ್ತು ಅನ್ನವಿದ್ದರೆ ಸಾಕು. ಇಬ್ಬರೂ ಹಂಚಿಕೊಂಡು ಊಟ ಮಾಡುತ್ತಾರೆ.
1962ರಲ್ಲಿಯೇ ಸೇನೆ ಸೇರಿದ ಸ್ವಲ್ಪ ಅವಧಿಯಲ್ಲಿಯೇ ಸೇವೆಯಿಂದ ಬಿಡುಗಡೆ ಹೊಂದಲು ಬಂದಗಿಸಾಬ ಅರ್ಜಿ ಸಲ್ಲಿಸಿದ್ದರು. ಆಗ ಅವರ ಅರ್ಜಿ ಪರಿಗಣನೆಗೆ ಬಂದಿರಲಿಲ್ಲ. ಪಾಕಿಸ್ತಾನ ಯುದ್ಧ ನಡೆದಾಗ ಸೇನೆಗೆ ಸಾಕಷ್ಟು ಜನರನ್ನು ಭರ್ತಿ ಮಾಡಿಕೊಂಡಿದ್ದರಿಂದ ಹಿಂದಿನ ಅರ್ಜಿಯ ಆಧಾರದ ಮೇಲೆಯೇ 1967ರಲ್ಲಿ ಬಂದಗಿಸಾಬನನ್ನು ಸೇನೆಯಿಂದ ಬಿಡುಗಡೆ ಮಾಡಲಾಯಿತು.
ಇನ್ನೂ ಸೇವಾವಧಿ ಇರುವಾಗಲೇ ಬಂದಗಿಸಾಬನಿಗೆ ಸೇನೆಯಿಂದ ಬಿಡುಗಡೆಗೊಳಿಸಿದ್ದರಿಂದಾಗಿ ಸೈನಿಕ ಕಲ್ಯಾಣ ಇಲಾಖೆಯಿಂದ ಪಿಂಚಣಿ, ಪರಿಹಾರ ಧನ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. 1967ರಲ್ಲಿ ಸೇನೆಯಿಂದ ಬಿಡುಗಡೆ ಹೊಂದಿದ ಇವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನಾಗಿ ಜಮಖಂಡಿಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1994ರಲ್ಲಿ ಆ ವೃತ್ತಿಯಿಂದಲೂ ನಿವೃತ್ತಿಯಾದರು. ಆದರೆ, ಆಗ ಕೆಎಸ್ಆರ್ಟಿಸಿಯಲ್ಲಿ ಯಾವುದೇ ನಿವೃತ್ತಿ ವೇತನ ನೀಡುವ ವ್ಯವಸ್ಥೆ ಇಲ್ಲದ ಕಾರಣ ಈ ಯೋಧನಿಗೆ ಯಾವುದೇ ಪರಿಹಾರ ಸಿಗಲಿಲ್ಲ.
ಈ ಮೊದಲು ಇವರಿಗೆ ಪಡಿತರ ಚೀಟಿ ಇತ್ತು. ನವೀಕರಿಸುವ ಸಂದರ್ಭದಲ್ಲಿ ಸೂಕ್ತ ದಾಖಲೆ ನೀಡದ ಕಾರಣ ಇದೀಗ ಅದೂ ರದ್ದಾಗಿದೆ. ಹೀಗಾಗಿ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲೂ ಈ ವೃದ್ಧ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.
ಕೈಯಲ್ಲಿ ತಾಕತ್ತಿರುವಾಗ ಬಂದಗಿಸಾಬನು ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕರ ಟಿಕೆಟ್ ಬಾಕ್ಸ್ಗಳಿಗೆ ರೆಗ್ಝಿನ್ ಕವರ್ ತಯಾರಿಸಿಕೊಡುತ್ತಿದ್ದರು. ಇವರು ಸಿದ್ಧಪಡಿಸಿದ ಕವರ್ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಸಾರಿಗೆ ಬಸ್ಗಳಲ್ಲೂ ಬಳಸುತ್ತಿದ್ದರು. ಹೀಗಾಗಿ ಬಂದಗಿಸಾಬನಿಗೆ ನಿವೃತ್ತಿಯಾದರೂ ಜೀವನ ಹೊರೆಯಾಗಿರಲಿಲ್ಲ. ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ಇವರ ಎಡಗೈ, ಎಡಗಾಲು ಪಾರ್ಶ್ವ ವಾಯುವಿನಿಂದ ಸ್ವಾಧೀನ ಕಳೆದುಕೊಂಡಿದೆ. ಕುಳಿತಲ್ಲಿಯೇ ಕುಳಿತುಕೊಳ್ಳಬೇಕು. ಏಳಲೂ, ಕೂರಲೂ ಆಗುವುದಿಲ್ಲ. ಇಂಥ ಕುಟುಂಬದ ಸಹಾಯಕ್ಕೆ ಬಾರದ ಸರ್ಕಾರ ಯಾವ ಯೋಜನೆಗಳನ್ನು ಜಾರಿಗೊಳಿಸಿದರೇನು ಫಲ?
- ರುದ್ರಪ್ಪ ಆಸಂಗಿ