ಶಾಸಕರ ಮೊಸರನ್ನದಲಿ ಮರಳು ನೀತಿ 'ಕಲ್ಲು'!
ಕ.ಪ್ರ.ವಾರ್ತೆ ಬೆಂಗಳೂರು ಸೆ. 13-
ನದಿ, ನಾಲೆ ಲೆಕ್ಕಿಸದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಸರ್ಕಾರ ಮರಳು ನೀತಿ ಜಾರಿಗೆ ತರಲು ಮುಂದಾಗಿದೆ. ಆದರೆ, ಯಾವ ಪಕ್ಷದ ಶಾಸಕರಿಗೂ ಈ ನೀತಿ ಸುತಾರಾಂ ಬೇಡವಾಗಿದೆ.
ಹೀಗಾಗಿ ಮರಳು ನೀತಿ ವಿಚಾರದಲ್ಲಿ ಶಾಸಕರ ಒತ್ತಡಕ್ಕೆ ಮಣಿದಿರುವ ಸರ್ಕಾರ ಇಂದು, ನಾಳೆ ನಿಲುವು ಅನುಸರಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮರಳು ನೀತಿ ಜಾರಿಗೆ ತರುವುದಾಗಿ ಘೋಷಿಸಿತ್ತು. ಮಾತ್ರವಲ್ಲ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ನೇತೃತ್ವದಲ್ಲಿ ಈ ಸಂಬಂಧ ಸಚಿವ ಸಂಪುಟ ಉಪಸಮಿತಿಯನ್ನೂ ರಚಿಸಿತ್ತು.
ಆದರೆ ಮರಳು ನೀತಿ ಜಾರಿಯಾಗುವುದಕ್ಕೆ ಪಕ್ಷಾತೀತವಾಗಿ ಶಾಸಕರ ವಿರೋಧ ವ್ಯಕ್ತವಾಗಿದೆ. ಮೂಲಗಳ ಪ್ರಕಾರ 40ಕ್ಕೂ ಹೆಚ್ಚು ಶಾಸಕರು ನೀತಿ ಜಾರಿಗೆ ವಿರುದ್ಧವಾಗಿದ್ದಾರೆ. ಈ ಪೈಕಿ ಹಳೆ ಮೈಸೂರು ಹಾಗೂ ಕರಾವಳಿ ಭಾಗದ ಕಾಂಗ್ರೆಸ್ ಶಾಸಕರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಈ ಒತ್ತಡಕ್ಕೆ ಮಣಿದಿರುವ ಸರ್ಕಾರ ಸಲ್ಲದ ಕಾರಣ ನೀಡಿ ನೀತಿ ರಚನೆ ಪ್ರಕ್ರಿಯೆಯನ್ನು ಮುಂದೂಡುತ್ತಿದೆ. ಆದರೆ ಇನ್ನೊಂದೆಡೆ ಅಧಿಕಾರಿಗಳ ಮೇಲೆ ಸಲ್ಲದ ಒತ್ತಡ ಹೆಚ್ಚುತ್ತಿದೆ. ಮರಳು ನೀತಿ ಜಾರಿಯಾಗುವವರೆಗೆ ಅಕ್ರಮ ಮರಳು ಸಾಗಣೆ ಹಾಗೂ ಗಣಿಗಾರಿಕೆಗೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಎಚ್ಚರಿಕೆ ನೀಡಿದ್ದು, ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಿಎಂ ಒಲವಿಗೆ ಅಡ್ಡಿ: ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮರಳು ನೀತಿ ಜಾರಿಗೆ ಒಲವು ವ್ಯಕ್ತಪಡಿಸಿದ್ದರು. ಮಾತ್ರವಲ್ಲ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ದೇಶನವನ್ನೂ ನೀಡಿದ್ದರು. ಜತೆಗೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಲೋಕೋಪಯೋಗಿ, ಕಾನೂನು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿ ತಾತ್ಕಾಲಿಕ ನೀತಿಯನ್ನು ರೂಪಿಸುವಂತೆ ಸಲಹೆ ನೀಡಿದ್ದರು. ಆದರೆ ಸಚಿವ ಸಂಪುಟದಲ್ಲಿರುವ ಹಿರಿಯ ಸಚಿವರೊಬ್ಬರು ಹಾಗೂ ಕೆಲ ಶಾಸಕರ ಒತ್ತಡದಿಂದ ತಾತ್ಕಾಲಿಕ ನೀತಿ ಜಾರಿಗೆ ತರುವುದಕ್ಕೂ ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಪದೇ ಪದೇ ಸಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಲಾಭ- ಲಾಬಿ: ಅಕ್ರಮ ಮರಳು ದಂಧೆಯಿಂದ ಭಾರಿ ಲಾಭವಿದೆ. ಮಾತ್ರವಲ್ಲ ಅದಕ್ಕಿಂತಲೂ ಪ್ರಬಲವಾದ ಲಾಬಿಯಿದೆ. ಈ ಕಾರಣಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ವಿಳಂಬ ಮಾಡಲು ಸರ್ಕಾರ ಮುಂದಾಗಿದೆ. ಈ ಲಾಬಿ ಎಷ್ಟು ಪ್ರಬಲವಾಗಿದೆಯೆಂದರೇ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯದ ಕರಾವಳಿ ಭಾಗದ ಪ್ರಮುಖ ನದಿಗಳಿಂದ ಮರಳು ತೆಗೆದು ಅವುಗಳನ್ನು ಗೋವಾ ಹಾಗೂ ಲಕ್ಷದ್ವೀಪಕ್ಕೆ ಮಾರಾಟ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಇದನ್ನು ಪ್ರಬಲವಾಗಿ ವಿರೋಧಿಸಿದ್ದರು.
ಈಗ ಅವರದ್ದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬಿಜೆಪಿ ಸರ್ಕಾರ ಸಂಪುಟ ಸಭೆಯಲ್ಲಿ ನೀಡಿದ ಒಪ್ಪಿಗೆಯನ್ನು ರದ್ದುಗೊಳಿಸಲು ಸಾಧ್ಯವಾಗಿಲ್ಲ. ಆ ಮಟ್ಟದಲ್ಲಿ ಮರಳು ಮಾಫಿಯಾ ಸರ್ಕಾರದ ಮೇಲೆ ಹಿಡಿತ ಸಾಧಿಸಿದೆ ಎಂಬ ಆರೋಪ ವ್ಯಕ್ತವಾಗಿದೆ.
ಇದೆಲ್ಲದರ ಹಿನ್ನೆಲೆಯಲ್ಲಿ ಸಚಿವ ಮಹಾದೇವಪ್ಪ ಅಧ್ಯಕ್ಷತೆಯಲ್ಲಿನ ಸಂಪುಟ ಉಪಸಮಿತಿ ನಾಮ್ ಕೇ ವಾಸ್ತೆ ಮಾತ್ರ ಸಭೆ ನಡೆಸುತ್ತಿದೆ. ಮಾತ್ರವಲ್ಲ ಸಮಿತಿ ರಚನೆಯಾದ ದಿನದಿಂದಲೂ ಇನ್ನೆರಡು ತಿಂಗಳಲ್ಲಿ ಮರಳು ನೀತಿ ಜಾರಿಗೆ ತರಲಾಗುವುದು ಎಂಬ ಹೇಳಿಕೆಯನ್ನು ಅವರು ಪುನರುಚ್ಚರಿಸುತ್ತಲೇ ಇದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ.
ಮರಳು ನೀತಿ ರಚನೆ ತುಂಬಾ ವಿಸ್ತಾರವಾದ ವಿಚಾರ. ನಾವು ಈಗ ಲಭ್ಯವಿರುವ ಕಾನೂನು ಅಧ್ಯಯನ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ, ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ಕಾನೂನು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಗಳ ಪರಿಶೀಲನೆ ನಡೆಸುತ್ತಿದ್ದೇವೆ. ಪರಿಸರದ ಮೇಲೆ ಹೊರೆಯಾಗುವ ರೀತಿ ಮರಳು ತೆಗೆಯುವುದಕ್ಕೆ ಸದ್ಯದಲ್ಲೇ ನಿಯಂತ್ರಣ ಹೇರುತ್ತೇವೆ.
- ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ
- ರಾಘವೇಂದ್ರ ಭಟ್