'ಆಸ್ಕರ್'ಗೆ ಜ್ಯೂರಿಗಳಾಗಿ ಇಬ್ಬರು ಕನ್ನಡಿಗರು!
ಬೆಂಗಳೂರು: ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರೋದ್ಯಮದಿಂದ ಪ್ರವೇಶ ಪಡೆಯುವ ಚಿತ್ರಗಳ ಆಯ್ಕೆ ಸಮಿತಿಯಲ್ಲಿ ಇಬ್ಬರು ಕನ್ನಡಿಗರು ಜ್ಯೂರಿಗಳಾಗಿ ನೇಮಕಗೊಂಡಿದ್ದಾರೆ. ಹಿರಿಯ ನಿರ್ದೇಶಕ ರಾಮದಾಸ್ ನಾಯ್ಡು ಹಾಗೂ ನಿರ್ದೇಶಕಿ ಕವಿತಾ ಲಂಕೇಶ್ ಸದಸ್ಯರಾಗಿ ಕೆಲಸ ಮಾಡಲಿದ್ದಾರೆ.
ಈಗಾಗಲೇ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ 20 ಭಾರತೀಯ ಚಿತ್ರಗಳನ್ನು ಪಟ್ಟಿಮಾಡಿದೆ. ವಿಶೇಷವೆಂದರೆ, ಈ 20 ಚಿತ್ರಗಳಲ್ಲಿ ಎರಡು ಕನ್ನಡ ಚಿತ್ರಗಳೂ ಸ್ಥಾನ ಪಡೆದುಕೊಂಡಿರುವುದು. ನಾಗಣ್ಣ ನಿರ್ದೇಶನದ, ಆನಂದ್ ಅಪ್ಪುಗೋಳ್ ನಿರ್ಮಾಣದ, ನಟ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಹಾಗೂ ಪವನ್ಕುಮಾರ್ ನಿರ್ದೇಶನದ, ಸತೀಶ್ ನಿನಾಸಂ ಅಭಿನಯದ 'ಲೂಸಿಯಾ' ಚಿತ್ರಗಳು ಕಮಿಟಿ ಮುಂದೆ ಪ್ರದರ್ಶನಗೊಳ್ಳಲಿವೆ.
ನಿರ್ದೇಶಕ ರಾಮದಾಸ್ ನಾಯ್ಡು, ಕವಿತಾ ಲಂಕೇಶ್ರನ್ನೊಳಗೊಂಡ ಜ್ಯೂರಿ ಆಯ್ಕೆಮಾಡುವ ಚಿತ್ರಗಳೇ ಅಂತಿಮವಾಗಿ ಆಸ್ಕರ್ ಪ್ರಶಸ್ತಿಗಾಗಿ ಭಾರತೀಯ ಚಿತ್ರರಂಗ ಪ್ರತಿನಿಧಿಸಲಿವೆ. ಹೈದರಾಬಾದ್ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ 'ಇಂಗ್ಲಿಷ್ ವಿಂಗ್ಲಿಷ್', 'ಭಾಗ್ ಮಿಲ್ಕಾ ಭಾಗ್', 'ಚಕ್ರವ್ಯೂಹ', 'ಶಿಪ್ ಆಫ್ ಥೀಸಿಯಸ್', 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ', 'ಕಾಯ್ ಪೋ ಚೆ', 'ದಿ ಲಂಚ್ಬಾಕ್ಸ್', 'ಮದ್ರಾಸ್ ಕೆಫೆ', 'ಲೂಟೇರಾ', 'ಶಬ್ದೋ', 'ಮುಂಬೈ ಪೊಲೀಸ್', 'ಮಿಥುನಂ', 'ಸೆಲ್ಯುಲಾಯ್ಡ್', 'ಅಮ್ಮ ನೀಕು ವಂದನಂ', 'ತಶೇರ್ ದೇಶ್', 'ದಿ ಗುಡ್ ರೋಡ್', 'ವಿಶ್ವರೂಪಂ', 'ಲೂಸಿ ಯಾ', 'ಅನುಮತಿ', 'ನೆರಪುರವೈ' ಚಿತ್ರಗಳ ವೀಕ್ಷಣೆ ನಡೆಯಲಿದೆ.
ಭಾರತೀಯ ಚಿತ್ರೋದ್ಯಮದಿಂದ ಆಸ್ಕರ್ಗೆ ಪ್ರವೇಶ ಪಡೆಯುವ ಚಿತ್ರಗಳ ಆಯ್ಕೆ ಸಮಿತಿಯ ಜ್ಯೂರಿ ಸದಸ್ಯರು ಆಯ್ಕೆಮಾಡುವ ಚಿತ್ರಗಳೇ ಹಾಲಿವುಡ್ನಲ್ಲಿ ಪ್ರದರ್ಶನಗೊಂಡು ಭಾರತವನ್ನು ಪ್ರತಿನಿಧಿಸಲಿವೆ. 'ಭಾರತೀಯ ಸಿನಿಮಾ ಎಂದಾಗ ಬಾಲಿವುಡ್ ನೆನಪಾಗುವುದೇ ಹೆಚ್ಚು. ಆದರೆ ಈ ಬಾರಿ ಎರಡು ಕನ್ನಡ ಚಿತ್ರಗಳನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಅಧಿಕೃತವಾಗಿ ಆಯ್ಕೆಮಾಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಬ್ಬರು ಕನ್ನಡಿಗರು ಭಾರತೀಯ ಸಿನಿಮಾಗಳ ಆಯ್ಕೆ ಜ್ಯೂರಿ ಸದಸ್ಯರಾಗಿದ್ದೇವೆ ಎನ್ನುವುದು ಸಂತಸದ ವಿಷಯ' ಎಂದು ನಿರ್ದೇಶಕ ರಾಮದಾಸ್ ನಾಯ್ಡು 'ಕನ್ನಡಪ್ರಭ'ಕ್ಕೆ ತಿಳಿಸಿದರು.