ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ಕುರಿತಂತೆ ಇದೀಗ ದೆಹಲಿಯಲ್ಲಿ ಲಾಬಿ ಆರಂಭವಾಗಿದೆ.
ಬಿಜೆಪಿ ಜತೆ ಕೆಜೆಪಿಯನ್ನು ವಿಲೀನಗೊಳಿಸುವ ಬಗ್ಗೆ ಚರ್ಚಿಸಲು ಬುಧವಾರ ಕೋರ್ ಕಮಿಟಿ ಸಭೆ ನಡೆಯುತ್ತಿದ್ದಂತೆ ಅತ್ತ ಯಡಿಯೂರಪ್ಪ ಅವರ ಪ್ರತಿನಿಧಿಯಾಗಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರು ದೆಹಲಿಯಲ್ಲಿ ಈ ಕುರಿತು ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿಯಿಂದ ಅಧಿಕೃತ ಆಹ್ವಾನ ಬರುವವರೆಗೆ ವಿಲೀನ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರಲು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ನಡೆದ ಕೆಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗಬೇಕು, ಸಂಸದ ಅನಂತಕುಮಾರ್ ಕೇವಲ ರಾಷ್ಟ್ರ ರಾಜಕಾರಣಕ್ಕೆ ಸೀಮಿತವಾಗಿರಬೇಕು ಎಂಬ ಬೇಡಿಕೆಗಳನ್ನು ಕೂಡ ಬಿಜೆಪಿ ರಾಷ್ಟ್ರೀಯ ನಾಯಕರ ಮುಂದೆ ಇಡಲು ಸಭೆಯಲ್ಲಿ ಚರ್ಚಿಸಲಾಗಿದೆ.
ಅಲ್ಲದೆ, ಅಧಿಕೃತ ಆಹ್ವಾನ ಬರದೇ ಇದ್ದರೆ ಮುಂಬರುವ ಚುನಾವಣೆಯಲ್ಲಿ ಎನ್‌ಡಿಎ ಜತೆ ಗುರುತಿಸಿಕೊಂಡು ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸುವ ಬಗ್ಗೆ ಚರ್ಚಿಸಲಾಗಿದೆ.
ಇದರ ಮಧ್ಯೆಯೇ ಬಿಜೆಪಿ ರಾಷ್ಟ್ರೀಯ ನಾಯಕರಿಂದ ಅಧಿಕೃತ ಆಹ್ವಾನ ಪಡೆಯಲು ದೆಹಲಿಯಲ್ಲಿ ಲಾಬಿ ಮುಂದುವರಿಸಲೂ ತೀರ್ಮಾನಿಸಲಾಗಿದೆ.
ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆಸಿಕೊಳ್ಳಲು ಅಧಿಕೃತ ಆಹ್ವಾನ ನೀಡಬೇಕು ಎಂಬ ಬಗ್ಗೆ ದೆಹಲಿಯಲ್ಲಿರುವ ಲೆಹರ್ ಸಿಂಗ್ ಅವರು ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಾಧ್ಯವಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನೂ ಭೇಟಿ ಮಾಡಲಿದ್ದಾರೆ. ಅಲ್ಲದೆ ನರೇಂದ್ರ ಮೋದಿ ಅವರನ್ನೂ ಸಂಪರ್ಕಿಸುವ ಸಾಧ್ಯತೆ ಇದೆ.
ಕೋರ್ ಕಮಿಟಿಯಲ್ಲಿ ಸುದೀರ್ಘ ಚರ್ಚೆ: ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಯಡಿಯೂರಪ್ಪ ಸೇರಿದಂತೆ ಒಂದಿಬ್ಬರು ಈ ಬಗ್ಗೆ ಆಸಕ್ತಿ ಹೊಂದಿದ್ದಾರಾದರೂ ಇನ್ನೂ ಕೆಲವು ಸದಸ್ಯರು ಸಮ್ಮತಿಸಲಿಲ್ಲ. ಬದಲಾಗಿ ಬಿಜೆಪಿಯಿಂದ ಅಧಿಕೃತ ಆಹ್ವಾನ ಬರಲಿ. ನಂತರ ನೋಡೋಣ ಎಂಬ ಸಲಹೆಯನ್ನು ಯಡಿಯೂರಪ್ಪ ಅವರ ಮುಂದಿಟ್ಟಿದ್ದಾರೆ.
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಕಾರಣದಿಂದಾಗಿ ಬಿಜೆಪಿಗೆ ಮರಳಿ ಹೋಗಲು ಯಡಿಯೂರಪ್ಪ ಅವರು ತುದಿಗಾಲಲ್ಲಿ ನಿಂತಿದ್ದರೂ ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವರು ಇದಕ್ಕೆ ಅಡ್ಡಿಯಾಗಿದ್ದಾರೆ.
ಬಿಜೆಪಿಯಿಂದ ಅಧಿಕೃತ ಆಹ್ವಾನ ಬಾರದೆ ಆ ಪಕ್ಷಕ್ಕೆ ಹೋದರೆ ಹೆಚ್ಚು ಗೌರವ ಸಿಗುವುದಿಲ್ಲ ಎಂಬುದು ಇವರ ಆತಂಕ. ಅಷ್ಟೇ ಅಲ್ಲ, ಯಡಿಯೂರಪ್ಪ ಅವರಿಗೆ ಗೌರವ ಸಿಕ್ಕಿದರೂ ಉಳಿದವರನ್ನು ಕೇವಲವಾಗಿ ಕಾಣಬಹುದು ಎಂಬ ಅನುಮಾನವೂ ಇದೆ. ಇದನ್ನು ಯಡಿಯೂರಪ್ಪ ಅವರ ಮುಂದೆಯೂ ಹೇಳಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಜತೆ ಕೆಜೆಪಿಯನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಸದ್ಯಕ್ಕೆ ಆರಂಭಿಸುವುದುಲ ಬೇಡ. ಯಡಿಯೂರಪ್ಪ ಅವರ ಪ್ರತಿನಿಧಿಯಾಗಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಲೆಹರ್ ಸಿಂಗ್ ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಯೋಚನೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯ ಕಾರ್ಯಕಾರಿಣಿಯಲ್ಲಿ ಚರ್ಚೆ: ಹೀಗಾಗಿ ರಾಜ್ಯದಲ್ಲಿ ಕೆಜೆಪಿ ಅಸ್ತಿತ್ವ ಉಳಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಭಾಗವಾಗಿ ಲೋಕಸಭೆ ಚುನಾವಣೆ ಎದುರಿಸಬೇಕು. ಜತೆಗೆ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂಬುದು ಕೆಜೆಪಿಯ ಸದ್ಯದ ನಿರ್ಧಾರ.
ಇದೇ ವಿಚಾರವನ್ನು ಗುರುವಾರ ನಡೆಯಲಿರುವ ಕೆಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಇದರ ಜತೆಗೆ ಮುಂದೆ ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪ ಅವರು ಕೈಗೊಳ್ಳುವ ನಿರ್ಧಾರಗಳನ್ನು ಎಲ್ಲರೂ ಒಪ್ಪಬೇಕು ಎಂಬ ನಿರ್ಣಯವನ್ನೂ ಕಾರ್ಯಕಾರಿಣಿಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದು ಮತ್ತು ಎನ್‌ಡಿಎ ಭಾಗವಾಗಿ ಮುಂದುವರಿಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
-ಧನಂಜಯಕುಮಾರ್, ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ