ಅಡಕೆ, ದಾಳಿಂಬೆ ಬೆಳಗಾರರ ನೆರವಿಗೆ ಧಾವಿಸುವಂತೆ ಆಗ್ರಹ
ನವದೆಹಲಿ: ಅಡಕೆ ಮತ್ತು ದಾಳಿಂಬೆ ಬೆಳೆಗಾರರ ನೆರವಿಗೆ ಬರುವಂತೆ ರಾಜ್ಯ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗಾರರರು ತೀವ್ರ ನಷ್ಟಕ್ಕೀಡಾಗಿದ್ದಾರೆ. ಅಡಕೆ ಬೆಳೆಗೆ ರೋಗ ತಗುಲಿ ಬೆಳೆಗೆ ಹಾನಿಯಾಗಿದೆ. ನಷ್ಟಕ್ಕೀಡಾದ ರೈತರಿಗೆ ಕೇಂದ್ರ ಸರ್ಕಾರ ಕೂಡಲೇ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು. ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ವಿವರಿಸಿರುವ ಸಚಿವರು ಕೂಡಲೇ ಬೆಳೆಗಾರರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಡಕೆ ದಾಳಿಂಬೆ ಬೆಳೆಗೆ ತಗುಲುತ್ತಿರುವ ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಸಲು ಕೇಂದ್ರ ಅನುದಾನ ಒದಗಿಸಬೇಕು ಎಂದು ಅವರು ಕೋರಿದರು. ಸಂಸದರಾದ ಜಯಪ್ರಕಾಶ್ ಹೆಗ್ಡೆ, ಪ್ರಭಾಕರ ಕೋರೆ, ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಖಂಡ್ರೆ, ಕೆ.ಸಿ.ಕೊಂಡಯ್ಯ, ಆರ್.ಎಸ್.ಪಾಟೀಲ್, ಈಶ್ವರ ಖಂಡ್ರೆ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ ಅವರು ಇದ್ದರು.