ಉಗ್ರರ ಅವಳಿ ದಾಳಿ
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ 'ಶಾಂತಿ' ಮಾತುಕತೆಗೆ ಇನ್ನು ಮೂರು...
ಜಮ್ಮು: ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ 'ಶಾಂತಿ' ಮಾತುಕತೆಗೆ ಇನ್ನು ಮೂರು ದಿನ ಬಾಕಿ ಇರುವಂತೆಯೇ ಪಾಕ್ ಉಗ್ರರು ಜಮ್ಮುವಿನಲ್ಲಿ ಅವಳಿ ಆತ್ಮಹತ್ಯಾ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸೇನಾ ಅಧಿಕಾರಿ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ.
ಸೇನಾ ಸಮವಸ್ತ್ರದಲ್ಲೇ ಪೊಲೀಸ್ ಠಾಣೆ, ಸೇನಾ ನೆಲೆಗಳಿಗೆ ನುಗ್ಗಿರುವ ಮೂರು ಮಂದಿ ಉಗ್ರರು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಎಲ್ಇಟಿಗೆ ಸೇರಿದ ಉಗ್ರರು ಎಂದು ಶಂಕಿಸಲಾಗಿತ್ತಾದರೂ, ಶೋಹದಾ ಬ್ರಿಗೇಡ್ ಎಂಬ ಹೊಸ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತಿದೆ.
ಬೆಳಗ್ಗೆ 6.45 ರಿಂದ ಆರಂಭವಾದ ಉಗ್ರರ ಈ ಕಾರ್ಯಾಚರಣೆ ಮುಗಿದದ್ದು ಮಧ್ಯಾಹ್ನದ ಹೊತ್ತಿಗೆ. ಅಲ್ಲಿವರೆಗೆ ಜಮ್ಮು ವಲಯದಲ್ಲಿ ಅವರು ಆತಂಕದ ಪರಿಸ್ಥಿತಿ ಸೃಷ್ಟಿಸಿದ್ದರು.
ಉಗ್ರರ ಕಾರ್ಯಾಚರಣೆ: ಬುಧವಾರ ರಾತ್ರಿಯೇ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಈ ಉಗ್ರರು ರಾತ್ರಿಯಿಡಿ ಸೇನಾ ಕ್ಯಾಂಪ್ಗಾಗಿ ಶೋಧ ನಡೆಸಿದ್ದಾರೆ. ಬೆಳಗ್ಗೆ ಆಟೋವೊಂದನ್ನು ಹಿಡಿದ ಅವರು ಝಾಂಡಿ ಎಂಬ ಹಳ್ಳಿಯ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ಅಲ್ಲಿ ಎಎಸ್ಐ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಗುಂಡಿನ ಮಳೆಗರೆದು ಹತ್ಯೆ ಮಾಡಿದ್ದಾರೆ.
ಬಳಿಕ ಸಾಂಬಾದಲ್ಲಿನ ಸೇನಾ ನೆಲೆಗೆ ಹೋಗಿ ಅಲ್ಲಿ ದಾಳಿ ನಡೆಸಿದ್ದಾರೆ. ಅಲ್ಲಿ ಜಿಹಾದಿ ಘೋಷಣೆ ಮಾಡುತ್ತಾ ಸೇನಾಧಿಕಾರಿ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾರೆ. ಈ ನಡುವೆಯೇ ಇಬ್ಬರು ನಾಗರಿಕರನ್ನೂ ಅವರು ಬಲಿ ತೆಗೆದುಕೊಂಡಿದ್ದಾರೆ. ಸಂಜೆ ವೇಳೆಗೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನಾ ಪಡೆ ನಿಟ್ಟುಸಿರು ಬಿಟ್ಟಿತು.
ಶಾಂತಿ ಪ್ರಕ್ರಿಯೆಗೆ ಭಂಗವಿಲ್ಲ: ಉಗ್ರರ ಈ ಕ್ರಮ ಭಾರತ - ಪಾಕ್ ನಡುವಿನ ಶಾಂತಿ ಪ್ರಕ್ರಿಯೆಗೆ ಭಂಗ ತರುವ ಕ್ರಮ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. 29 ರಂದು ಪಾಕ್ ಪ್ರಧಾನಿ ಜೊತೆ ಮಾತುಕತೆ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೂಡ ಮಾತುಕತೆ ಪ್ರಕ್ರಿಯೆ ನಿಲ್ಲಬಾರದು ಎಂದಿದ್ದಾರೆ. ಒಂದು ವೇಳೆ ಮಾತುಕತೆ ಸ್ಥಗಿತಗೊಳಿಸಿದರೆ ಉಗ್ರರಿಗೆ ಜಯ ಸಿಕ್ಕಂತಾಗುತ್ತದೆ ಎಂದಿದ್ದಾರೆ.
ಆದರೆ ಬಿಜೆಪಿ ಮಾತ್ರ ಯಾವುದೇ ಕಾರಣಕ್ಕೂ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬಾರದು ಎಂದು ಆಗ್ರಹಿಸಿದೆ. ಪ್ರಧಾನಿ ಸಿಂಗ್ ಅವರು ಈ ವಿಚಾರದಲ್ಲಿ ಅವಸರ ಮಾಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ.
ದಾಳಿ ನಡೆದದ್ದು ಹೇಗೆ?
1. ಟ್ರಕ್ ಅಪಹರಣ
ಬೆಳಗ್ಗೆ ಪಾಕಿಸ್ತಾನ ಗಡಿಯಲ್ಲಿರುವ ಝಾಂಡಿಯಲ್ಲಿ ಸೇನಾ ವಸ್ತ್ರ ಧಾರಿಗಳಾಗಿದ್ದ ಮೂವರು ಉಗ್ರರಿಂದ ಟ್ರಕ್ ಅಪಹರಣ.
2. ಠಾಣೆ ಮೇಲೆ ದಾಳಿ
ಕಥುವಾ ಜಿಲ್ಲೆಯ ಹೀರಾನಗರ ಪೊಲೀಸ್ ಠಾಣೆ ಮೇಲೆ ಉಗ್ರರಿಂದ ದಾಳಿ. ನಾಲ್ವರು ಪೊಲೀಸರ ಹತ್ಯೆ. ಒಬ್ಬ ನಾಗರಿಕ ಸಾವು.
3. ಸಾಂಬಾ ಕ್ಯಾಂಪ್ ಮೇಲೆ ದಾಳಿ
ಸಾಂಬಾ ಕ್ಯಾಂಪ್ಗಿಂತ ಒಂದು ಕಿ.ಮೀ. ಮೊದಲೇ ಟ್ರಕ್ ಬಿಟ್ಟ ಉಗ್ರರು. ಕ್ಯಾಂಪ್ಗೆ ಉಗ್ರರ ಪ್ರವೇಶ.
4. ಅಧಿಕಾರಿಗಳ ಮೆಸ್ಗೆ ಪ್ರವೇಶ
ಜಿಹಾದಿ ಘೋಷಣೆಯೊಂದಿಗೆ ಪ್ರವೇಶಿಸಿ ಗುಂಡಿನ ದಾಳಿ. ಲೆ.ಜ. ಬಿ.ಜೆ. ಸಿಂಗ್ ಹೊಟ್ಟೆಗೆ ಗುಂಡು. ಸೇನಾಧಿಕಾರಿ ಸೇರಿ ನಾಲ್ವರ ಹತ್ಯೆ.
5. ಕಾರ್ಯಾಚರಣೆ ಆರಂಭ
ಎರಡು ಸಿಖ್ ಮತ್ತು 14 ಅಸ್ಸೋಂ ಕ್ಷಿಪ್ರ ಪಡೆಯಿಂದ ಕಾರ್ಯಾಚರಣೆ ಆರಂಭ. ಸಂಜೆ ವೇಳೆಗೆ ಮೂರು ಉಗ್ರರ ಹತ್ಯೆ.
ಈ ಹಿಂದೆ ಪಾಕಿಗಳು ನಮ್ಮ ಸೈನಿಕರ ತಲೆ ಕಡಿದು ತೆಗೆದುಕೊಂಡು ಹೋಗಿದ್ದರು. ಇದೀಗ ಮತ್ತೆ ಸೇನಾ ನೆಲೆ ಮೇಲೆ ದಾಳಿ ನಡೆದಿದೆ. ಈಗ ಪಾಕ್ ಪ್ರಧಾನಿ ಜತೆ ಮಾತುಕತೆಯ ಔಚಿತ್ಯವೇನು?
- ನರೇಂದ್ರ ಮೋದಿ, ಗುಜರಾತ್ ಸಿಎಂ