ಬಯೋವುಟ್ರಿಕ್ ಒತ್ತಿದ್ರೆ ಮುಖ ಸಹಿತ ಸ್ಕ್ಯಾನ್!
ಮಂಗಳೂರು: ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಾತಿಗೆ ಬಯೋ ಮೆಟ್ರಿಕ್ ಅಳವಡಿಕೆ ನಿರ್ಧಾರದಿಂದ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕಾಲೇಜು ಶಿಕ್ಷಣ ಇಲಾಖೆ, ಮುಖ ಪತ್ತೆ(ಫೇಸ್ ರೆಕಗ್ನಿಷನ್) ಬಯೋವುಟ್ರಿಕ್ ವ್ಯವಸ್ಥೆ ಜಾರಿಗೆ ತರುತ್ತಿದೆ.
ತನ್ನ ಆರು ಉಪ ನಿರ್ದೇಶಕರ ಕಚೇರಿಗಳಲ್ಲಿ ಇದನ್ನು ಈಗಾಗಲೇ ಅನುಷ್ಠಾನಕ್ಕೆ ತಂದಿದೆ. ಇನ್ನು ಮುಂದೆ ಕಾಲೇಜುಗಳಲ್ಲಿ ಉಪನ್ಯಾಸಕರ ಹಾಗೂ ಸಿಬ್ಬಂದಿ ಹಾಜರಾತಿ ವಿಚಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯೇ ನೇರ ಹದ್ದುಗಣ್ಣು ಇಡಲಿದೆ. ಲೋಕಾಯುಕ್ತ ಭೇಟಿ ವೇಳೆ ಕೋಲಾರದ ಕಾಲೇಜೊಂದರಲ್ಲಿ ಕಾಲೇಜು ಉಪನ್ಯಾಸಕರ ದಿಢೀರ್ ಗೈರು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳಿಗೆ ಬಯೋವುಟ್ರಿಕ್ನಂಥ ವ್ಯವಸ್ಥೆ ಜಾರಿಗೆ ಸಲಹೆ ಮಾಡಿದ್ದರು. ಲೋಕಾಯುಕ್ತ ಸಲಹೆಯನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿದ ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಕಾಲೇಜುಗಳಲ್ಲಿ ಬಯೋವುಟ್ರಿಕ್ ಅನುಷ್ಠಾನಕ್ಕೆ ತರಲು ತೀರ್ಮಾನಿಸಿತ್ತು. ಆದರೆ ಇದರಲ್ಲೂ ನ್ಯೂನತೆಗಳು ಇರುವ ಕಾರಣ ಮುಖ ಗುರುತಿಸುವಿಕೆಯ ಬಯೋವುಟ್ರಿಕ್ ಹಾಜರಾತಿ ವ್ಯವಸ್ಥೆಗೆ ಮುಂದಾಗಿದೆ.
ಬೆಂಗಳೂರಲ್ಲಿ ನಿಯಂತ್ರಣ: ಕೇವಲ ಬಯೋವುಟ್ರಿಕ್ ವ್ಯವಸ್ಥೆಯಲ್ಲಿ ದೈನಂದಿನ ಹಾಜರಾತಿ ವಿವರವನ್ನು ಮಷಿನ್ನಿಂದ ಪಡೆದು ನಂತರ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸಬೇಕು. ಬಯೋವುಟ್ರಿಕ್ನಲ್ಲಿ ಕಾಣಿಸುವ ತಾಂತ್ರಿಕ ತೊಂದರೆ, ಅಪ್ಲೋಡ್ನಲ್ಲಿನ ಸಮಸ್ಯೆಯನ್ನು ದುರ್ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೇವಲ ಬಯೋವುಟ್ರಿಕ್ ಉಸಾಬರಿ ಬೇಡ ಎಂದು ಅದಕ್ಕೆ ಫೇಸ್ ರೆಕಗ್ನಿಷನ್ನ್ನು ಸೇರಿಸಲಾಗಿದೆ.
ಇದರ ಸಂಪೂರ್ಣ ನಿಯಂತ್ರಣ ಬೆಂಗಳೂರಿನಲ್ಲೇ ಇರುತ್ತದೆ. ಫೇಸ್ ರೆಕಗ್ನಿಷನ್ ಬಯೋವುಟ್ರಿಕ್ ನಿಯಂತ್ರಣಕ್ಕೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ತಾಂತ್ರಿಕ ವಿಭಾಗ ತೆರೆಯಲಾಗಿದೆ. ಎಲ್ಲ ಕಾಲೇಜುಗಳ ಹಾಗೂ ಉಪನಿರ್ದೇಶಕ ಕಚೇರಿಗಳ ಈ ಬಯೋವುಟ್ರಿಕ್ ವ್ಯವಸ್ಥೆಯ ನೇರ ನಿಯಂತ್ರಣ ಹೊಂದಲಿದೆ. ತನಗೆ ಬೇಕಾದಾಗ, ಬೇಕಾದವರ ಹಾಜರಾತಿ ವಿವರವನ್ನು ಸುಲಭದಲ್ಲಿ ಪಡೆಯಲಿದೆ.
ಪ್ರಥಮ ಹಂತದಲ್ಲಿ 183 ಕಾಲೇಜು: ರಾಜ್ಯದಲ್ಲಿ 362 ಸರ್ಕಾರಿ ಪ್ರಥಮ ದರ್ಜೆ ಹಾಗೂ 315 ಖಾಸಗಿ ಪದವಿ ಕಾಲೇಜುಗಳಿವೆ. ಈ ವ್ಯವಸ್ಥೆ ಪ್ರಥಮ ಹಂತದಲ್ಲಿ 183 ಕಾಲೇಜುಗಳಲ್ಲಿ ಸೆ.30ರೊಳಗೆ ಅನುಷ್ಠಾನಗೊಳಿಸುವಂತೆ ಇಲಾಖೆ ಸೂಚಿಸಿದೆ.
ಈಗಾಗಲೇ ಫೇಸ್ ರೆಕಗ್ನಿಷನ್ ಬಯೋವುಟ್ರಿಕ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಒಪ್ಪಿಗೆಯಾದ ಕೂಡಲೇ ಏಕಕಾಲಕ್ಕೆ ಕಾಲೇಜುಗಳಲ್ಲಿ ಅಳವಡಿಸಲಾಗುವುದು. ಹಾಗಾಗಿ ಒಂದೇ ರೀತಿಯ ಫೇಸ್ ರೆಕಗ್ನಿಷನ್ ಬಯೋವುಟ್ರಿಕ್ ಅಳವಡಿಕೆಯಾಗಲಿದೆ. ಈಗಾಗಲೇ ಕಾಲೇಜುಗಳಲ್ಲಿ ಬಯೋವುಟ್ರಿಕ್ ಮಾತ್ರ ಇರುವ ಯಂತ್ರ ಇದ್ದರೆ ಅದನ್ನು ಗ್ರಂಥಾಲಯಕ್ಕೆ ಅಳವಡಿಸುವಂತೆ ಸೂಚಿಸಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರದ 27, ಮೈಸೂರು ನಗರದಲ್ಲಿ 5, ಮಂಗಳೂರು 32, ಧಾರವಾಡ 81 ಹಾಗೂ ಗುಲ್ಬರ್ಗಾದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ 38 ಕಾಲೇಜುಗಳಲ್ಲಿ ಅಳವಡಿಕೆಗೆ ಇಲಾಖೆ ಒಪ್ಪಿಗೆ ನೀಡಿದೆ.
ಉಪನ್ಯಾಸಕರ ನಿಗಾಕ್ಕೆ ಸಾಫ್ಟ್ವೇರ್: ತರಗತಿಯಲ್ಲಿ ಪಾಠಪ್ರವಚನ ನಡೆಸುವ ಉಪನ್ಯಾಸಕರಿಗೂ ಪ್ರತ್ಯೇಕ ಸಾಫ್ಟ್ವೇರ್ ಸಿದ್ಧಪಡಿಸಲಾಗುತ್ತಿದೆ. ತರಗತಿಯಲ್ಲಿ ಏನೇನು ಪಾಠ ಮಾಡುತ್ತಾರೆ. ಎಷ್ಟು ಹೊತ್ತಿಗೆ ಬಂದುಹೋಗುತ್ತಾರೆ, ಮಕ್ಕಳಿಗೆ ಏನಾದರೂ ಪಾಠದ ಬಗ್ಗೆ ತೊಂದರೆ ಇದೆಯೇ? ಮಕ್ಕಳ ದಾಖಲಾತಿ, ಫಲಿತಾಂಶ, ಕಾಲೇಜು ಚಟುವಟಿಕೆ, ಕಾಲೇಜು ಬಜೆಟ್ ಹೀಗೆ ವಿವಿಧ ಹಂತದ ಮಾಹಿತಿ ಇದರಲ್ಲಿ ಸಿಗಲಿದೆ. ಈಗ ಕೈಬರಹದಲ್ಲಿ ಇದ್ದರೆ, ಮುಂದೆ ಎಲ್ಲವೂ ಸಾಫ್ಟ್ವೇರ್ನಲ್ಲಿ ದಾಖಲಾಗಲಿದೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹೊಸ ಬದಲಾವಣೆಗೆ ಇದು ಕಾರಣವಾಗಲಿದ್ದು, ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ ಶಿಸ್ತಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು.
-ಆತ್ಮಭೂಷಣ್