ಕೆಎಸ್ಸಾರ್ಟಿಸಿ 1,788 ಹುದ್ದೆ ಭರ್ತಿ ಪ್ರಕ್ರಿಯೆ ಆರಂಭ: ರಾಮಲಿಂಗಾರೆಡ್ಡಿ
ಬಿಜಾಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 1,788 ಚಾಲಕರು, ನಿರ್ವಾಹಕರು, ವರ್ಕ್ ಶಾಪ್ ಅಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಪ್ರಸಕ್ತ ವರ್ಷ ಭರ್ತಿ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಿಜಾಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ 14 ಹೊಸ ನಗರ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಸಾರಿಗೆ ಬಲಪಡಿಸಲು ರಾಜ್ಯದ 28 ನಗರಗಳಿಗೆ ನಗರ ಸಾರಿಗೆ ಬಸ್‌ಗಳನ್ನು ಒದಗಿಸಲಾಗುವುದು. ಕೇಂದ್ರ ಸರ್ಕಾರದ ನರ್ಮ್ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 2,100 ಹೊಸ ಬಸ್‌ಗಳು ಬರಲಿವೆ. ಅವುಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಳ್ಳಾರಿ, ಹೊಸಪೇಟೆ, ತುಮಕೂರು, ಬಿಜಾಪುರ ಸೇರಿದಂತೆ ರಾಜ್ಯದ 28 ನಗರಗಳಲ್ಲಿ ಹೊಸ ಬಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಂತರ್ ವಿಭಾಗಗಳಿಗೆ ಚಾಲಕರು, ನಿರ್ವಾಹಕರನ್ನು ವರ್ಗಾವಣೆ ಮಾಡಲು ನೀತಿ ರೂಪಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ವರದಿ ಬಂದ ತಕ್ಷಣ ಮಾನವೀಯ ನೆಲೆಯಲ್ಲಿ ಅಂತರ್ ವಿಭಾಗಗಳಿಗೆ ವರ್ಗಾಯಿಸಲಾಗುವುದು ಎಂದರು.
330 ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ: ರಾಜ್ಯದಲ್ಲಿ ಸುಮಾರು 300 ಹಳ್ಳಿಗಳಿಗೆ ಬಸ್ ಸಂಚಾರವಿಲ್ಲ. ರಸ್ತೆ ಸರಿಯಾಗಿ ಇಲ್ಲದ ಕಾರಣ ಬಸ್ ಓಡಿಸಲಾಗುತ್ತಿಲ್ಲ. ರಸ್ತೆ ನಿರ್ಮಿಸಿಕೊಟ್ಟರೆ ಗ್ರಾಮಗಳಿಗೂ ಬಸ್ ಬಿಡಲಾಗುವುದು ಎಂದರು.
ಮೇಲಧಿಕಾರಿಗಳಿಂದ ಚಾಲಕರು, ನಿರ್ವಾಹಕರಿಗೆ ರಜೆ ಸಂಬಂಧ ನೀಡುವ ಕಿರುಕುಳ ತಪ್ಪಿಸಲು ಈಗಾಗಲೇ ಸಂಸ್ಥೆಯ 38 ಬಸ್ ನಿಲ್ದಾಣಗಳಲ್ಲಿ ಗಣಕೀಕೃತ ರಜೆ ಮಂಜೂರಾತಿ, ನಿರ್ವಹಣಾ ವ್ಯವಸ್ಥೆ ಅಳವಡಿಸಲಾಗಿದ್ದು, ಈ ತೆರನಾದ ವ್ಯವಸ್ಥೆಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ರಾಜ್ಯದ ಸಾರಿಗೆ ಸಂಸ್ಥೆ ಅಳವಡಿಸಿದೆ. ತಮ್ಮ ಖಾತೆಯಲ್ಲಿ ಇರುವ ರಜೆಯ ವಿವರಗಳನ್ನು ಬೇಕೆನಿಸಿದಾಗ ತಿಳಿದುಕೊಳ್ಳಬಹುದು. ಯಾರ ಮಧ್ಯಸ್ಥಿಕೆ, ಸಹಾಯವಿಲ್ಲದೆ ಪಡೆದುಕೊಳ್ಳಬಹುದಾಗಿದೆ. ಇನ್ನುಳಿದ 8 ಘಟಕಗಳಿಗೂ ಇದನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಲಾಗುವುದು ಎಂದರು.