ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜೀವ್‌ಗಾಂಧಿ ಸಬ್‌ಮಿಷನ್: 98 ಲಕ್ಷ ಲೂಟಿ!

Vishwanath S
Updated On : 29 Sept 2013, 12:46 pm

ಕೊಪ್ಪಳ: ಗಂಗಾವತಿ ತಾಲೂಕಿನ ನವಲಿ ಹಾಗೂ 22 ಗ್ರಾಮಗಳ ರಾಜೀವ್‌ಗಾಂಧಿ ಸಬ್ ಮಿಷನ್ ಕುಡಿಯುವ ನೀರು ಯೋಜನೆಯಲ್ಲಿ 98 ಲಕ್ಷ ಅಕ್ರಮ ನಡೆದಿದೆ. ಇದು, ಲೆಕ್ಕಪರಿಶೋಧನಾ ವರದಿಯಿಂದಲೇ ಬೆಳಕಿಗೆ ಬಂದಿದೆ.
ಈ ವರದಿಯಿಂದ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರೇ ಬೆರಗಾಗಿದ್ದಾರೆ. ಕೂಡಲೇ ಲೋಕಾಯುಕ್ತ ತನಿಖೆಗೆ ಒಳಪಡಿಸುವಂತೆಯೂ ಶಿಫಾರಸು ಮಾಡಿದ್ದಾರೆ. ಇದರಲ್ಲಿ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಶಾಮೀಲಾಗಿದ್ದಾರೆ. ನಿಯಮ ಮೀರಿ ಹಾಗೂ ಕೈಗೊಳ್ಳದ ಕಾಮಗಾರಿಗಳಿಗೆ ಹಣ ಪಾವತಿಸಲು ಸಮ್ಮತಿ ನೀಡಿದ್ದಾರೆ. ಅಷ್ಟೇ ಅಲ್ಲ, ಆಗದೆ ಇರುವ ಕಾಮಗಾರಿ ಆಗಿದೆ ಎಂದು ಅಧಿಕಾರಿಗಳು ವರದಿ ನೀಡುವ ಮೂಲಕ ಗುತ್ತಿಗೆದಾರರ ಅಕ್ರಮಕ್ಕೆ ಸಾಥ್ ನೀಡಿರುವುದನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ದಾಖಲಿಸಲಾಗಿದೆ. ಹೀಗಾಗಿ, ಈ ಪ್ರಕರಣ ನಾನಾ ತಿರುವು ಪಡೆಯುವ ಸಾಧ್ಯತೆ ಇದೆ.
ಏನಿದು ಯೋಜನೆ?: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಸೇರಿದಂತೆ 22 ಗ್ರಾಮಗಳ ಕುಡಿಯುವ ನೀರಿನ ಯೋಜನೆಗಾಗಿ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ 2009ರಲ್ಲಿ ಕಾಮಗಾರಿ ಆರಂಭಿಸಲಾಯಿತು. ಇದಕ್ಕಾಗಿ ಆಗಾಗ ಕೋಟ್ಯಂತರ ರುಪಾಯಿ ಹರಿದಿದೆ. 2012ರಲ್ಲಿ ಮಾಡಿರುವ ಕಾಮಗಾರಿಗೆ 10.63 ಕೋಟಿ ಬಿಡುಗಡೆ ಮಾಡಲಾಯಿತು. ಆದರೆ, ಹಣ ಬಿಡುಗಡೆ ಮಾಡುವ ಮುನ್ನ ಹಾಕಿರುವ ಪೈಪ್‌ಲೈನ್ ಪ್ರಮಾಣ ಹಾಗೂ ಉದ್ದವನ್ನು ಪರಿಶೀಲಿಸಲು ಮುಖ್ಯ ಅಭಿಯಂತರರು ಆದೇಶಿಸಿದ್ದರು. ಆದರೆ, ಪರಿಶೀಲಿಸಬೇಕಾದ ಸಹಾಯಕ ಅಭಿಯಂತರರು ಹೆಚ್ಚುವರಿಯಾಗಿ ಕಾಮಗಾರಿ ಆಗಿದೆಯೇ ಎಂದು ದಾಖಲೆಗಳನ್ನು ಪರಿಶೀಲಿಸಲೇ ಇರಲಿಲ್ಲ.
ವಾಸ್ತವವಾಗಿ ಹಾಕಿರುವ ಪೈಪ್‌ಲೈನ್ ಉದ್ದ 63161 ಮೀಟರ್ ಮಾತ್ರ. ಆದರೆ, ಈಗ ಬಿಲ್ ಪಾವತಿಸಿರುವುದು 71202.50 ಮೀಟರ್‌ನದ್ದು. ಇದರಿಂದ 98.15 ಲಕ್ಷ ಹೆಚ್ಚುವರಿಯಾಗಿ ಬಿಲ್ ಪಾವತಿಸಲಾಗಿದೆ ಎಂದು ವರದಿ ಹೇಳಿದೆ.
ವ್ಯಾಪಕ ಅಕ್ರಮ: ಇಂಥ ಅನೇಕ ಅಕ್ರಮಗಳು ಸುಮಾರು ವರ್ಷಗಳಿಂದ ಕುಂಟುತ್ತಲೇ ಸಾಗಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಲ್ಲಿ ನಡೆದಿವೆ. ಎಲ್ಲವುಗಳನ್ನು ತನಿಖೆ ಮಾಡಿದಲ್ಲಿ ಖಂಡಿತವಾಗಿಯೂ ಕೋಟ್ಯಂತರ ರುಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬರುತ್ತದೆ ಎನ್ನಲಾಗುತ್ತಿದೆ. ಹೀಗಾಗಿ, ನವಲಿ ಹಾಗೂ 22 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಜೊತೆಗೆ, ಉಳಿದೆಲ್ಲ ಯೋಜನೆಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎನ್ನುವ ಆಗ್ರಹ ಸಾರ್ವಜನಿಕರದ್ದು.
ಲೆಕ್ಕಪರಿಶೋಧನಾ ವರದಿಯಲ್ಲಿ 98 ಲಕ್ಷ ಹೆಚ್ಚುವರಿಯಾಗಿ ಪಾವತಿಯಾಗಿರುವ ಕುರಿತು ವರದಿಯಾಗಿರುವುದರಿಂದ ಕೂಡಲೇ ನವಲಿ ಹಾಗೂ 22 ಗ್ರಾಮಗಳ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯನ್ನು ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಲಾಗಿದೆ. ತನಿಖೆ ನಡೆದರೆ ಎಲ್ಲವೂ ಬೆಳಕಿಗೆ ಬರಲಿದೆ.
- ಶಿವರಾಜ್ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ


-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement