ಅಕ್ರಮ ಗಣಿ: ಬಳ್ಳಾರಿ ಬ್ಯಾಂಕ್‌ಗಳಿಗೆ ತಿರುಗುಣಿ!
ಬೇಲೆಕೇರಿ ಅದಿರು ಪ್ರಕರಣ ಹಾಗೂ ಅಕ್ರಮ ಗಣಿಗಾರಿಕೆಯ ಕುರಿತಾದ ಸಿಬಿಐ ತನಿಖೆ ಭೀತಿ ಕೇವಲ ಗಣಿ ಮಾಲೀಕರಿಗೆ...
ಕ.ಪ್ರ.ವಾರ್ತೆ, ಬಳ್ಳಾರಿ, ಸೆ. 29-
ಬೇಲೆಕೇರಿ ಅದಿರು ಪ್ರಕರಣ ಹಾಗೂ ಅಕ್ರಮ ಗಣಿಗಾರಿಕೆಯ ಕುರಿತಾದ ಸಿಬಿಐ ತನಿಖೆ ಭೀತಿ ಕೇವಲ ಗಣಿ ಮಾಲೀಕರಿಗೆ, ಟ್ರೇಡರ್ಸ್‌ಗಳಿಗೆ, ಎಕ್ಸ್‌ಪೋರ್ಟ್‌ಗಳಿಗೆ ಮಾತ್ರವಲ್ಲದೆ, ಇದೀಗ ನಿಯಮ ಮೀರಿ ವರ್ತಿಸಿರುವ ಬ್ಯಾಂಕ್‌ಗಳಿಗೂ ಆವರಿಸಿದೆ!
ಗಣಿ ಮಾಲೀಕರು ಹಾಗೂ ಟ್ರೇಡರ್ಸ್‌ಗಳ ವ್ಯವಹಾರಗಳಿಗೆ ಹಾಗೂ ಬೇನಾಮಿ ಖಾತೆಗಳಿಗೆ ಸಹಕರಿಸಿದ್ದ ಬ್ಯಾಂಕುಗಳಿಗೆ ಈಗ ನಡುಕ ಶುರುವಾಗಿದೆ. ಗಣಿ ಮಾಲೀಕರು, ಟ್ರೇಡರ್ಸ್‌ಗಳು ಯಾವ ಖಾತೆಗಳ ಮೂಲಕ ಹಣದ ಲೇವಾದೇವಿ ಮಾಡಿದ್ದಾರೆ? ಆ ಖಾತೆಯು ಅಗತ್ಯ ದಾಖಲೆ ತೋರಿಸಿದ್ದಾರೆಯೇ? ಸೇರಿದಂತೆ ಇತರ ವಿಷಯಗಳ ಕುರಿತಾಗಿ ಸಿಬಿಐ ಅಧಿಕಾರಿಗಳು ತೀವ್ರ ನಿಗಾವಹಿಸುವ ಸಾಧ್ಯತೆ ಇದೆ. ಬಳ್ಳಾರಿ ಗಣಿ ಧಣಿಗಳಿಗೆ ಕೆಲವು ಬ್ಯಾಂಕುಗಳಲ್ಲಿ ಲಾಕರ್ ವ್ಯವಸ್ಥೆ, ಹೊತ್ತುಗೊತ್ತಿಲ್ಲದ ಹಣದ ಲೇವಾದೇವಿ ವ್ಯವಹಾರ ಮಾಡಿಕೊಟ್ಟಿರುವ ಆರೋಪವೂ ಇದೆ. ಈಗಾಗಲೇ ಬೇಲೆಕೇರಿ ಅದಿರು ಪ್ರಕರಣ ಸೇರಿದಂತೆ ಇತರ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಾ ಬಂಧಿತರಾಗಿರುವವರು ತಮ್ಮ ಹಣದ ಲೇವಾದೇವಿ ವ್ಯವಹಾರಗಳ ಕುರಿತಾಗಿ ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಿಯಮ ಮೀರಿ ವರ್ತಿಸಿರುವ ಬ್ಯಾಂಕುಗಳ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತದೆ ಎಂಬ ಭೀತಿ ಶುರುವಾಗಿದೆ. ಈ ಹಿಂದೆ ಸಿಬಿಐ ಅಧಿಕಾರಿಗಳು ಕೆಲವು ಬ್ಯಾಂಕುಗಳಿಗೆ ಹೋಗಿ, ಬ್ಯಾಂಕಿನ ವ್ಯವಹಾರ, ಆರೋಪಿಸಿದ ಖಾತೆಗಳ ವ್ಯವಹಾರಗಳನ್ನು ಪರಿಶೀಲನೆ ನಡೆಸಿದ್ದರು. ಯಾವ ಬ್ಯಾಂಕ್‌ಗಳು ಸಿಬಿಐ ತನಿಖೆಯ ವಕ್ರದೃಷ್ಟಿಗೆ ಬೀಳುತ್ತವೆ ಎಂಬ ಕುತೂಹಲ ಜನಸಾಮಾನ್ಯರಲ್ಲಿದ್ದರೆ, ಬ್ಯಾಂಕ್‌ಗಳಿಗೆ ಆತಂಕ ಹೆಚ್ಚಿದೆ.
ಕೋಟ್ಯಂತರ ರುಪಾಯಿಗಳ ವ್ಯವಹಾರ!
ಕೆಲವು ಬ್ಯಾಂಕುಗಳಲ್ಲಿ ಅದರಲ್ಲೂ ಖಾಸಗಿ ಬ್ಯಾಂಕುಗಳಲ್ಲಿ ಗಣಿ ಮಾಲೀಕರು, ಟ್ರೇಡರ್ಸ್ ಖಾತೆಗಳು ಹೆಚ್ಚಾಗಿದ್ದು, ಇಲ್ಲಿ ಸಾವಿರಾರು ರುಪಾಯಿ ವ್ಯವಹಾರಕ್ಕಿಂತ ಲಕ್ಷಾಂತರ ರು.ಗಳು, ಕೋಟ್ಯಂತರ ರು.ಗಳ ವ್ಯವಹಾರವೇ ಹೆಚ್ಚಾಗಿತ್ತು. ಕೇವಲ ಹಣ ಮಾತ್ರವಲ್ಲದೆ, ಕೆಲವರಿಗೆ ಚಿನ್ನ, ದಾಖಲೆಗಳ ಸಂಗ್ರಹಕ್ಕೂ ಲಾಕರ್‌ಗಳನ್ನು ನೀಡಿದ್ದರು ಎಂಬ ಆರೋಪವು ಇದೆ. ಜನಸಾಮಾನ್ಯರ ವ್ಯವಹಾರಕ್ಕೆ ಕೆಲವು ಬ್ಯಾಂಕುಗಳು ಕ್ಯಾರೆ ಎನ್ನುತ್ತಿಲ್ಲ ಎಂಬ ಮಾತಿತ್ತು. ಅಲ್ಲಿ ಗಣಿ ಮಾಲೀಕರಿಗೆ, ಟ್ರೇಡರ್ಸ್‌ಗಳಿಗೆ ಕೊಟ್ಟಷ್ಟು ಮಹತ್ವ, ಜನಸಾಮಾನ್ಯರಿಗೆ ಕೊಡುತ್ತಿರಲಿಲ್ಲ ಎನ್ನುವ ಆರೋಪವು ಇತ್ತು. ಕೆಲವು ಬ್ಯಾಂಕುಗಳು ಜನಸ್ನೇಹಿ ಎನ್ನುವುದಕ್ಕಿಂತ ಗಣಿಸ್ನೇಹಿ ಎನ್ನುವಂತಿತ್ತು.
ಎಕ್ಸಿಸ್ ಬ್ಯಾಂಕ್‌ನಲ್ಲ್ಲಿ ಗಣಿ ವ್ಯವಹಾರದ ಪರಿಶೀಲನೆ
ಗಣಿ ವ್ಯವಹಾರಕ್ಕೆ ತಕ್ಕಂತೆ ತಮ್ಮ ವ್ಯಾಪಾರ ಬೆಳೆಸಿಕೊಂಡು, ಬ್ಯಾಂಕಿನ ಲೇವಾದೇವಿಯನ್ನು ಹೆಚ್ಚಿಸುವ ಕೆಲವು ಬ್ಯಾಂಕುಗಳ ವ್ಯವಹಾರದ ಮೇಲೆ ಸಿಬಿಐ ತನಿಖೆಯ ಕುಣಿಕೆ ಬಿದ್ದರೂ ಆಶ್ಚರ್ಯಪಡಬೇಕಿಲ್ಲ. ಆಂಧ್ರಪ್ರದೇಶದ ಸಿಬಿಐ ಅಧಿಕಾರಿಗಳು ಕೆಲ ತಿಂಗಳುಗಳ ಹಿಂದೆ ಓಎಂಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಅವರನ್ನು ಕರೆದುಕೊಂಡು ಬಂದು ಬಳ್ಳಾರಿಯ ಎಕ್ಸಿಸ್ ಬ್ಯಾಂಕಿನಲ್ಲಿ ಪರಿಶೀಲನೆ ನಡೆಸಿದ್ದರು. ಇನ್ನು ಈಗಲ್ ಟ್ರೇಡರ್ಸ್‌ನವರು ಎಕ್ಸಿಸ್ ಬ್ಯಾಂಕಿನಲ್ಲಿ ಲೇವಾದೇವಿ ಮಾಡಿದ್ದಾರೆ. ತನಿಖೆ ನಡೆಸಿದಾಗ ಹೆಚ್ಚಿನ ಮಾಹಿತಿ ಲಭ್ಯವಾಗುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುವ ಸಾಧ್ಯತೆ, ಇನ್ನು ಲೋಕಾಯುಕ್ತ ವರದಿಯಲ್ಲಿಯೂ ಕೆಲ ಬ್ಯಾಂಕುಗಳ ಕುರಿತಾಗಿ ಮಾಹಿತಿಯನ್ನು ನೀಡಲಾಗಿದೆ.
ಹೊತ್ತು, ಗೊತ್ತಿಲ್ಲದ ವ್ಯವಹಾರ
ಬಳ್ಳಾರಿ ಜಿಲ್ಲೆಯಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಒಂದು ದೃಷ್ಟಿಯಿಂದ ಗಣಿ ಮಾಲೀಕರ ಅಂಗೈಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಯಾವುದೇ ವ್ಯವಹಾರವು ಪ್ರಶ್ನಾತೀತವಾಗಿತ್ತು. ಕೆಲವು ಬ್ಯಾಂಕುಗಳಲ್ಲಿ ಬೇನಾಮಿ ಖಾತೆ, ಲಾಕರ್‌ಗಳ ವ್ಯವಸ್ಥೆಯ ಇರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆರ್‌ಬಿಐ ನೀತಿ, ನಿಯಮಗಳನ್ನು ಗಾಳಿಗೆ ತೂರಿ, ದಿನದ 24 ಗಂಟೆಗಳ ಕಾಲ, ಮುಖ್ಯದ್ವಾರದ ಬದಲಾಗಿ, ಇತರ ಮಾರ್ಗದ ಮೂಲಕ ಕೋಟಿ ಕೋಟಿ ರುಪಾಯಿ ಲೇವಾದೇವಿ ಮಾಡಿರುವ ಆರೋಪವು ಕೆಲವು ಬ್ಯಾಂಕ್‌ಗಳ ಮೇಲಿರುವುದರಿಂದ ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಸಾಗಿದರೂ ಆಶ್ಚರ್ಯ ಪಡಬೇಕಿಲ್ಲ.
ಏಕಾಏಕಿ ತಲೆ ಎತ್ತಿದ ಹಣಕಾಸು ಸಂಸ್ಥೆಗಳು
ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಭೂಮ್ ಇದ್ದಾಗ, ಹಣದ ಲೇವಾದೇವಿ ಲಕ್ಷ, ಕೋಟಿಗಟ್ಟಲೆ ಇತ್ತು. ಇಂಥ ಸಂದರ್ಭದಲ್ಲಿ ಜಿಲ್ಲೆಯ ಬಳ್ಳಾರಿ, ಸಂಡೂರು, ಹೊಸಪೇಟೆಗಳಲ್ಲಿ ಹಣಕಾಸು ಸಂಸ್ಥೆಗಳು ಹೆಚ್ಚಾಗಿ ಸ್ಥಾಪನೆಯಾಗಿದ್ದ ಉದಾಹರಣೆಗಳಿವೆ. ಸಂಡೂರು ತಾಲೂಕಿನಲ್ಲಿಯೇ ಅತಿಹೆಚ್ಚು ಹಣಕಾಸು ಸಂಸ್ಥೆಗಳು ಆರಂಭವಾಗಿದ್ದವು. ಅದಿರು ರಫ್ತು ನಿಷೇಧವಾದ ಮೇಲೆ ಹಾಗೂ ಎಗ್ಗಿಲ್ಲದ ಗಣಿಗಾರಿಕೆಗೆ ಕಡಿವಾಣ ಹಾಕಿದ ಮೇಲೆ ವ್ಯವಹಾರದ ಪ್ರಮಾಣ ಕಡಿಮೆಯಾಗಿ ವ್ಯವಹಾರ ಇಲ್ಲದೆ ಹಣಕಾಸು ಸಂಸ್ಥೆಗಳು ಸಪ್ಪೆ ಮೋರೆ ಹಾಕಿವೆ. ಕೆಲವೊಂದು ಸಂಸ್ಥೆಗಳು ಮುಚ್ಚುವ ಹಂತಕ್ಕೆ ಬಂದಿವೆ.
- ಶಶಿಧರ ಮೇಟಿ