ರಿವಾಜ್ ಮರೆತ ನವಾಜ್
ನಮ್ಮ ದೇಶದ ಪ್ರಧಾನಿಯನ್ನು ನಮ್ಮದೇ ಪತ್ರಕರ್ತರ ಎದುರು ಹಗುರವಾಗಿ ಮಾತನಾಡುವ ದುಸ್ಸಾಹಸವನ್ನು ಪಾಕ್ ಪ್ರಧಾನಿ...
ನವದೆಹಲಿ: ನಮ್ಮ ದೇಶದ ಪ್ರಧಾನಿಯನ್ನು ನಮ್ಮದೇ ಪತ್ರಕರ್ತರ ಎದುರು ಹಗುರವಾಗಿ ಮಾತನಾಡುವ ದುಸ್ಸಾಹಸವನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಮಾಡಿದ್ದಾರೆ. ಮನಮೋಹನ ಸಿಂಗ್‌ರನ್ನು ಹಳ್ಳಿಹೆಂಗಸು (ದೆಹಾತಿ ಔರತ್) ಎಂದು ಲೇವಡಿ ಮೂಲಕ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಷರೀಫ್ ಅವರ ವರ್ತನೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಾರತದ ಪ್ರಧಾನಿಯೊಬ್ಬರನ್ನು ಈ ರೀತಿ ಲೇವಡಿ ಮಾಡಲು ಷರೀಫ್‌ರಿಗೆಷ್ಟು ಧೈರ್ಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಪ್ರಶ್ನಿಸಿದ್ದಾರೆ.
ಏನಿದು ವಿವಾದ? 'ಹಳ್ಳಿಹೆಂಸಗು' ವಿವಾದ ಸೃಷ್ಟಿಯಾದದ್ದು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮೀರ್ ಅವರು ಜಿಯೋ ಟಿವಿಗೆ ನೀಡಿದ ಹೇಳಿಕೆಯಿಂದ. ಭಾರತದ ಪತ್ರಕರ್ತೆ ಬರ್ಖಾದತ್ ಹಾಗೂ ತಮ್ಮ ಜತೆಗೆ ಶನಿವಾರ ನಡೆದ ಮಾತುಕತೆ ವೇಳೆ ಷರೀಫ್ 'ಹಳ್ಳಿ ಹೆಂಗಸು' ವಿಚಾರ ಪ್ರಸ್ತಾಪಿಸಿದ್ದರು.
ಪ್ರಧಾನಿ ಸಿಂಗ್ ಕಾಶ್ಮೀರ ವಿವಾದ ಕುರಿತು ಬರಾಕ್ ಒಬಾಮರಿಗೆ ದೂರು ನೀಡಿದ್ದು ಷರೀಫ್‌ರಲ್ಲಿ ಅಸಮಾಧಾನ ತರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಈ ಹಳ್ಳಿಹೆಂಗಸು ವಿಚಾರ ಪ್ರಸ್ತಾಪ ಮಾಡಿದ್ದರು. ಆದರೆ, ಬರ್ಖಾದತ್ ಮಾತ್ರ ಮೀರ್ ಅವರು ಪಾಕಿಸ್ತಾನದ ಪ್ರಧಾನಿ ಮಾತನ್ನು ವಿರೂಪಗೊಳಿಸಿದ್ದಾರೆ. ಷರೀಫ್ ಆ ರೀತಿ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಬರ್ಖಾ, ಷರೀಫ್ ಅವರ ಜತೆಗಿನ ಮಾತುಕತೆ ಆಫ್ ದಿ ರೆಕಾರ್ಡ್ ಆಗಿತ್ತು. ಅವರು ಭಾರತದ ಪ್ರಧಾನಿ ಕುರಿತು ಯಾವುದೇ ಮಾನಹಾನಿಕರ ಹೇಳಿಕೆ ನೀಡಿಲ್ಲ. ಷರೀಫ್ ಅವರು ಹಳ್ಳಿ ಹೆಂಗಸೊಬ್ಬಳ ಕುರಿತ ಈ ಕಥೆ ಜಗಳವನ್ನು ಹೇಗೆ ಇತ್ಯರ್ಥಪಡಿಸಬೇಕು ಎನ್ನುವ ನೀತಿಯೊಂದಿಗೆ ಅಂತ್ಯಗೊಳ್ಳುತ್ತದೆ. ಈ ಕಥೆ ಪ್ರಸ್ತಾಪಿಸಿದ ಉದ್ದೇಶ ವಿವಾದದ ನಡುವೆ ಮೂರನೇ ವ್ಯಕ್ತಿಯನ್ನು ಯಾಕೆ ಎಳೆದುತರಬಾರದು ಎನ್ನುವುದನ್ನು ವಿವರಿಸುವುದಷ್ಟೇ ಆಗಿತ್ತು ಎಂದು ಬರ್ಖಾ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ, ವಿವಾದಕ್ಕೆ ಸಂಬಂಧಿಸಿ ಮಿರ್ ಕೂಡ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸಿಂಗ್ ವಿರುದ್ಧ ಷರೀಫ್ ಯಾವುದೇ ಮಾನ ಹಾನಿಕಾರಕ ಹೇಳಿಕೆ ನೀಡಿಲ್ಲ ಎಂದು ತಿಪ್ಪೆಸಾರಿದ್ದಾರೆ.
ಮೋದಿ ಟೀಕೆ: ಪ್ರಧಾನಿ ಕುರಿತ ಷರೀಫ್ ಹೇಳಿಕೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಇದು ನಮ್ಮ ಪ್ರಧಾನಿಗೆ ಮಾಡಿದ ಅತಿದೊಡ್ಡ ಅವಮಾನ. ನಮ್ಮ ದೇಶದ ಪ್ರಧಾನಿಯೊಬ್ಬರ ಬಗ್ಗೆ ಈ ರೀತಿ ಟೀಕೆ ಮಾಡಲು ಷರೀಫ್‌ರಿಗೆ ಎಷ್ಟು ಧೈರ್ಯ? 1.2 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತ ಈ ರೀತಿಯ ಟೀಕೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಮೋದಿ ದೆಹಲಿಯ ವಿಕಾಸ್ ರ್ಯಾಲಿಯಲ್ಲಿ ಹೇಳಿದ್ದಾರೆ.
ಪ್ರಧಾನಿ ಸಿಂಗ್‌ರನ್ನು ಹಳ್ಳಿಯ ಹೆಂಗಸು ಎಂದು ಲೇವಡಿ ಮಾಡುತ್ತಿದ್ದಾಗ ನಮ್ಮ ಪತ್ರಕರ್ತರು ಏನು ಮಾಡುತ್ತಿದ್ದರು? ಷರೀಫ್ ಕೊಟ್ಟ ಮಿಠಾಯಿ ಮೆಲ್ಲುತ್ತಿದ್ದ ನಮ್ಮ ಪತ್ರಕರ್ತರು ಔತಣಕೂಟದಿಂದ ಎದ್ದು ಹೊರನಡೆಯಬೇಕಿತ್ತು.
- ನರೇಂದ್ರ ಮೋದಿಗುಜರಾತ್ ಮುಖ್ಯಮಂತ್ರಿ