ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಂಶಾಡಳಿತವೋ ಪ್ರಜಾಪ್ರಭುತ್ವವೋ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಹುಚ್ಚಾಟಿಕೆಯಿಂದ ದೇಶವನ್ನು ಮುನ್ನಡೆಸಲಾಗದು ಎಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ...

Vishwanath S
Updated On : 30 Sept 2013, 11:41 am

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಹುಚ್ಚಾಟಿಕೆಯಿಂದ ದೇಶವನ್ನು ಮುನ್ನಡೆಸಲಾಗದು ಎಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಭಾರತವನ್ನು ವಂಶಪಾರಂಪರ್ಯ ಆಡಳಿತಕ್ಕೆ ಒಪ್ಪಿಸಬೇಕೇ ಅಥವಾ ಪ್ರಜಾಪ್ರಭುತ್ವಕ್ಕೆ ನೀಡಬೇಕೇ ಎಂಬುದನ್ನು ಜನರೇ ನಿರ್ಧರಿಸುವಂತೆ ಕರೆ ನೀಡಿದ್ದಾರೆ.
ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಬಿಜೆಪಿ ವಿಕಾಸ ರ್ಯಾಲಿಯಲ್ಲಿ ಭಾನುವಾರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದೊಳಗೇ ಅನೇಕ ಸರ್ಕಾರಗಳಿವೆ. ಅದರಲ್ಲಿ ಒಂದು ತಾಯಿಯದು, ಇನ್ನೊಂದು ಮಗನದು, ಮಗದೊಂದು ಅಳಿಯನ ಸರ್ಕಾರ. ಇನ್ನು ಯುಪಿಎ ಮಿತ್ರ ಪಕ್ಷಗಳ ನಡುವೆಯಾದರೂ ಹೊಂದಾಣಿಕೆ ಇದೆಯಾ? ಅದೂ ಇಲ್ಲ. ಅವು ತಮ್ಮದೇ ಆದ ಸ್ವತಂತ್ರ ಸರ್ಕಾರ ನಡೆಸುತ್ತಿವೆ. ಇದರಿಂದ ದೇಶದ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನೋಟಿನ ಭಕ್ತಿ: ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗಾಂಧಿ ಭಕ್ತಿ(ನೋಟು)ಯ ಹುಕಿಗೆ ಬಿದ್ದಿದೆ. ಈ ಸರ್ಕಾರ ಲೂಟಿ ಮಾಡಿರುವ ಹಣವನ್ನು ಎಣಿಸಲು ಸಾಧ್ಯವಿಲ್ಲ, ಅದನ್ನು ತೂಗಿಯೇ ನೋಡಬೇಕು.

ಪ್ರಧಾನಿಗೆ  ರಾಹುಲ್ ಅವಮಾನ

ದೇಶದ ಪ್ರಧಾನಿಯ ಗೌರವವನ್ನು ಕಾಂಗ್ರೆಸ್ ಪಕ್ಷವೇ ಮಣ್ಣುಪಾಲು ಮಾಡಿದೆ. ಸಿಂಗ್ ನಿರ್ಧಾರವನ್ನು ಅವಿವೇಕತನದ್ದು ಎನ್ನುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಿಗೆ ಅಗೌರವ ತೋರಿದ್ದಾರೆ. ಇದೊಂದು ಪಾಪದ ಕೆಲಸ. ತಾವು ಪ್ರತಿನಿಧಿಸುವ ಪಕ್ಷದಿಂದಲೇ ಗೌರವ ಸಿಗದ ವ್ಯಕ್ತಿ ಇತರರಿಂದ ಹೇಗೆ ಗೌರವ ನಿರೀಕ್ಷಿಸಲು ಸಾಧ್ಯ. ನವಾಜ್ ಷರೀಫ್ ಅವರಿಂದ ಪ್ರಧಾನಿ ಲೇವಡಿಗೊಳಗಾಗಲು ಕಾಂಗ್ರೆಸ್ ಕಾರಣ.

ಮೋದಿ ಝಲಕ್
ರಿಬ್ಬನ್ ಕತ್ತರಿಸುವುದು, ಆರೋಪ ಮಾಡುವುದನ್ನು ಬಿಟ್ಟರೆ ದೆಹಲಿ ಸಿಎಂ  ಮತ್ತಿನ್ಯಾವ ಕೆಲಸವನ್ನೂ ಮಾಡುತ್ತಿಲ್ಲ. ದೆಹಲಿ ಗ್ಯಾಂಗ್‌ರೇಪ್ ವೇಳೆ ತಾಯಿಯಾಗಿ ಹೆಣ್ಣುಮಕ್ಕಳು ಬೇಗನೆ ಮನೆ ಸೇರಿಕೊಳ್ಳಬೇಕೆಂದು ಸಲಹೆ ನೀಡಿದರು. ಘಟನೆಗೆ ಅವರೂ ಕಾರಣವಲ್ಲವೇ?
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಕೋರ್ಟ್ ಯುಪಿಎ ಸರ್ಕಾರವನ್ನು ವಿಚಾರಣೆಗೆ ಕರೆಯುತ್ತಿದೆ. ಆದರೆ, ಮದ್ಯಪಾನದ ವ್ಯಸನಕ್ಕೆ ಬಿದ್ದವರಂತೆ ಕಾಂಗ್ರೆಸ್,   ಮಿತ್ರಪಕ್ಷಗಳು ಭ್ರಷ್ಚಾಚಾರವನ್ನು ಅಪ್ಪಿಕೊಂಡಿವೆ.
ಪ್ರಧಾನಿ ಸಿಂಗ್  ಅಧ್ಯಕ್ಷ ಒಬಾಮ  ಮುಂದೆ ಭಾರತವನ್ನು ಬಡದೇಶ ಎಂಬುದಾಗಿ ಬಿಂಬಿಸಿದ್ದಾರೆ. ಇದರ ಬದಲು  65 ಕೋಟಿ ಯುವಕರ ದೇಶ ಅನ್ನಬಹುದಿತ್ತಲ್ಲವೇ? ಇದೊಂದು ನಾಚಿಕೆ ಗೇಡಿನ ವಿಚಾರ.
ಪ್ರಧಾನಿ ಸಿಂಗ್ ಅವರು ತಾವು ಯುವರಾಜನ ಅಡಿ ಕೆಲಸ ಮಾಡಲು ಸಿದ್ಧ ಎಂದಿದ್ದಾರೆ. ಆದರೆ, ನಾನು ಯುಪಿಎಯ ಹಿರಿಯ ನಾಯಕರಲ್ಲಿ ಕೇಳುತ್ತಿದ್ದೇನೆ ನೀವು ಸಂವಿಧಾನಬದ್ಧವಾಗಿ ಕೆಲಸ ಮಾಡಬಯಸುತ್ತೀರಾ ಅಥವಾ ಯುವರಾಜನ ಕೈಕೆಳಗೆ ಕೆಲಸ ಮಾಡಬಯಸುತ್ತೀರಾ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement