ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜೈಲು ಪ್ರಸಾದ

ಹದಿನೇಳು ವರ್ಷಗಳಷ್ಟು ಹಳೆಯದಾದ ಮೇವು ಹಗರಣದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ದೋಷಿ....

Vishwanath S
Updated On : 30 Sept 2013, 11:37 am

ಪಿಟಿಐ ,  ರಾಂಚಿ ,  ಸೆ.30
ಹದಿನೇಳು ವರ್ಷಗಳಷ್ಟು ಹಳೆಯದಾದ ಮೇವು ಹಗರಣದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ದೋಷಿ. ಹೀಗೆಂದು ರಾಂಚಿಯಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಲಾಲು ಜತೆಗೆ ಕಾಂಗ್ರೆಸ್ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಡಾ.ಜಗನ್ನಾಥ್ ಮಿಶ್ರಾ ಅವರನ್ನು ಕೂಡ ಕೋರ್ಟ್ ದೋಷಿ ಎಂದು ಘೋಷಿಸಿದೆ.
ಇವರ ಜತೆಗೆ ಆರು ಮಂದಿ ರಾಜಕಾರಣಿಗಳು, ನಾಲ್ವರು ಐಎಎಸ್ ಅಧಿಕಾರಿಗಳು ಸೇರಿದಂತೆ 43 ಮಂದಿ ತಪ್ಪಿತಸ್ಥರು. ಅವರಿಗೆ ಅ.3ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದೆಂದು ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಪ್ರವಾಸ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇದು ಪ್ರಮುಖ ತೀರ್ಪು ಆಗಿದೆ. 1996ರಲ್ಲಿ ಹಗರಣ  ಬೆಳಕಿಗೆ ಬಂದಾಗ ಲಾಲು ಪ್ರಸಾದ್ ಯಾದವ್ ಬಿಹಾರ ಮುಖ್ಯಮಂತ್ರಿಯಾಗಿದ್ದರು. 1997ರಲ್ಲಿ ರಾಜಿನಾಮೆ ನೀಡಿದ ಬಳಿಕ ತಮ್ಮ ಪತ್ನಿ ರಾಬ್ಡಿ ದೇವಿ ಅವರನ್ನೇ ಸಿಎಂ ಸ್ಥಾನಕ್ಕೆ ನೇಮಿಸಿ, ಜೈಲಿನಿಂದಲೇ ಅಧಿಕಾರ ನಿರ್ವಹಿಸಿದ್ದರು.
ಎಷ್ಟು ವರ್ಷ ಶಿಕ್ಷೆಯಾಗಬಹುದು?: ಹಗರಣದಲ್ಲಿ ಲಾಲು ಯಾದವ್ ಅವರಿಗೆ ಕನಿಷ್ಠ 3ರಿಂದ7 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎನ್ನುವುದು ಕಾನೂನು ತಜ್ಞರ ಅಂಬೋಣ. ಇನ್ನು ಎಂಟು ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯುವುದರಿಂದ ಈ ಪ್ರಕರಣ ಆರ್‌ಜೆಡಿಗೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಬಿಐ ಪರ ವಕೀಲ ಅರವಿಂದ ಕುಮಾರ್ ಸಿಂಗ್ ಪ್ರಕಾರ ಲಾಲು ಅವರಿಗೆ ಕನಿಷ್ಠ 4, ಜಗನ್ನಾಥ್ ಮಿಶ್ರಾಗೆ 4 ವರ್ಷ ಕಾರಾಗೃಹ ವಾಸ ಶಿಕ್ಷೆ ಆಗಬಹುದು.
ಅನರ್ಹತೆ ಭೀತಿ: ಗುರುವಾರ ಸಿಬಿಐನ ವಿಶೇಷ ಕೋರ್ಟ್ ಲಾಲು ಯಾದವ್ ಸೇರಿದಂತೆ ಇತರರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಈ ಸಂದರ್ಭದಲ್ಲಿ ಆರ್‌ಜೆಡಿ ಮುಖ್ಯಸ್ಥರಿಗೆ 3 ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಯಾದರೆ, ಅವರು ಲೋಕಸಭೆ ಸದಸ್ಯರಾಗಿ ಮುಂದುವರಿಯುವಂತಿಲ್ಲ. ಜತೆಗೆ ಕನಿಷ್ಠ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಸದ್ಯ ಅವರು ಬಿಹಾರ ಸರಣ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟ ಶಾಸಕ ಅಥವಾ ಸಂಸದ ತನ್ನ ಸ್ಥಾನವನ್ನು ಕಳೆದಕೊಳ್ಳುತ್ತಾನೆ. ಈ ಹಿನ್ನೆಲೆಯಲ್ಲಿ ಲಾಲು ಯಾದವ್ ಸಂಸತ್ ಸದಸ್ಯತ್ವದಿಂದ ಅನರ್ಹತೆಗೆ ಒಳಗಾಗುವ ಭೀತಿಯಲ್ಲಿದ್ದಾರೆ.
ಪ್ರಾಮುಖ್ಯ ಏಕೆ?
ಲೋಕಸಭೆಗೆ ಚುನಾವಣೆ ನಡೆಯಲು ಇನ್ನು ಕೇವಲ ಎಂಟು ತಿಂಗಳು ಬಾಕಿ ಇದೆ. ಬಿಹಾರದಲ್ಲಿ ಹೇಗಾದರೂ ಮಾಡಿ ನಿತೀಶ್‌ಕುಮಾರ್ ನೇತೃತ್ವದ ಜೆಡಿಯು ಸರ್ಕಾರವನ್ನು ಮಣಿಸಿ ಹೆಚ್ಚಿನ ಸ್ಥಾನ ಗೆದ್ದುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿದ್ದ ಆರ್‌ಜೆಡಿಗೆ ನಿಜಕ್ಕೂ ತೀರ್ಪು ಹಿನ್ನಡೆಯಾಗಿದೆ.
ಕೋರ್ಟಿಂದ ಜೈಲಿಗೆ
ರಾಂಚಿಯ ಕೋರ್ಟ್‌ಗೆ ಆಗಮಿಸಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರನ್ನು ಸಿಬಿಐನ ಅಧಿಕಾರಿಗಳು ವಶಕ್ಕೆ ಪಡೆದರು. ನಂತರ ಅವರನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋದರು.
ಕೂಲಾಗಿದ್ದ ಆರ್‌ಜೆಡಿ ವರಿಷ್ಠ
ತೀರ್ಪು ಪ್ರಕಟವಾಗಿ ಕೋರ್ಟ್ ಹಾಲ್‌ನಿಂದ ಹೊರಗೆ ಬಂದ ಲಾಲು ಯಾದವ್ ಪ್ರಸನ್ನಚಿತ್ತರಾಗಿದ್ದರು. ತಮ್ಮ ಅಭಿಮಾನಿಗಳ ಕೈಬೀಸಿದರು. ಪತ್ರಕರ್ತರ ಯಾವುದೇ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ತೀರ್ಪು ಪ್ರಕಟವಾಗುವುದಕ್ಕೆ ಮುನ್ನ ಮಾತನಾಡಿದ್ದ ಅವರು 'ತೀರ್ಪು ನನ್ನ ಪರವಾಗಿಯೇ ಪ್ರಕಟವಾಗುವ ನಿರೀಕ್ಷೆ ಇದೆ' ಎಂದಿದ್ದರು.  
 ಸುಗ್ರೀವಾಜ್ಞೆ ಕನಸು ಭಗ್ನ
ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ದೋಷಿ ಸಂಸದರನ್ನು ರಕ್ಷಿಸುವ ಸಲುವಾಗಿ ಜಾರಿಗೆ ತರಲು ಉದ್ದೇಶಿಸಿದ್ದ ಸುಗ್ರೀವಾಜ್ಞೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ರಾಷ್ಟ್ರಪತಿ ಕೂಡ ಸ್ಪಷ್ಟೀಕರಣ ಕೇಳಿದ್ದರಿಂದ ಸುಗ್ರೀವಾಜ್ಞೆ ಮೂಲಕ ಶಿಕ್ಷೆಯಿಂದ ಪಾರಾಗುವ ಲಾಲು ಕನಸು ಭಗ್ನಗೊಂಡಿತ್ತು.
ಲಾಲು ವಿರುದ್ಧ ಏನು ಆರೋಪ?
ಈಗಿನ ಜಾರ್ಖಂಡ್‌ನಲ್ಲಿರುವ ಚೈಬಾಸಾದ ಖಜಾನೆಯಿಂದ ಅಕ್ರಮವಾಗಿ 37.7 ಕೋಟಿಯನ್ನು ಹಿಂಪಡೆದುಕೊಂಡಿರುವುದು ಲಾಲು, ಡಾ.ಮಿಶ್ರಾ ಮತ್ತು ಇತರರ ಮೇಲಿರುವ ಆರೋಪ. ಜಾನುವಾರುಗಳಿಗೆ ಮೇವು, ಔಷಧಿ ಮತ್ತು ಇತರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಖಜಾನೆಯಿಂದ ಹಣ ಪಡೆದುಕೊಳ್ಳುವುದಕ್ಕೆ ಎಂದು ಹಣ ಪಡೆಯಲಾಗಿತ್ತು. ಲಾಲು ಯಾದವ್ ವಿರುದ್ಧ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಂದು ರಾಂಚಿಯಲ್ಲಿ ಮತ್ತೊಂದು ಬಿಹಾರದಲ್ಲಿ ನಡೆಯುತ್ತಿದೆ.

ಮೂರನೇ ಸಂಸದ
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಅನರ್ಹಗೊಳ್ಳಲಿರುವ ಮೊದಲ ಸಂಸದ ರಶೀದ್ ಮಸೂದ್. ಅವರು ವೈದ್ಯಕೀಯ ಸೀಟು ಕೊಡಿಸುವ ಪ್ರಕರಣದಲ್ಲಿ ದೋಷಿಯಾಗಿದ್ದಾರೆ. ಎರಡನೆಯವರು ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಲಾಲು ಯಾದವ್ ಮತ್ತು ಜೆಡಿಯುನ ಸಂಸದ ಜಗದೀಶ್ ಶರ್ಮಾ ಮೂರನೆಯವರಾಗಿದ್ದಾರೆ.

ಅವರ (ಲಾಲು ಯಾದವ್) ವಿರುದ್ಧ ನ್ಯಾಯಾಲಯ ನೀಡಿದ ತೀರ್ಪು ಗೊತ್ತಾಗಿದೆ.ಶಿಕ್ಷೆಯ ಪ್ರಮಾಣ ಪ್ರಕಟಗೊಂಡ ಬಳಿಕ ತೀರ್ಪಿನ ಪ್ರತಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿದ ಬಳಿಕ ಅವರನ್ನು ಅನರ್ಹಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ.
- ಮೀರಾಕುಮಾರ್ ಲೋಕಸಭೆ ಸ್ಪೀಕರ್

ಅನರ್ಹತೆಗೆ ಕ್ಯೂ
ಸುಪ್ರೀಂ ತೀರ್ಪಿನ ಪ್ರಕಾರ ಅನರ್ಹಗೊಳ್ಳಲಿರುವ ಮೊದಲ ಸಂಸದ ರಶೀದ್ ಮಸೂದ್. ಅವರು ವೈದ್ಯಕೀಯ ಸೀಟು ಕೊಡಿಸುವ ಪ್ರಕರಣದಲ್ಲಿ ದೋಷಿಯಾಗಿದ್ದಾರೆ. ಎರಡನೆಯವರು ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಲಾಲು ಯಾದವ್ ಮತ್ತು ಜೆಡಿಯುನ ಸಂಸದ ಜಗದೀಶ್ ಶರ್ಮಾ ಮೂರನೆಯವರಾಗಿದ್ದಾರೆ.

ಏನೇನು ಆರೋಪ
*    ಕ್ರಿಮಿನಲ್ ಸಂಚು
*    ವಂಚನೆ
*    ಅಮೂಲ್ಯ ಭದ್ರತಾ ಪತ್ರಗಳ ನಕಲು, ವರ್ಗಾವಣೆ
*    ನಕಲು ಮಾಡುವುದಕ್ಕಾಗಿಯೇ ಮೋಸ
*    ದಾಖಲೆಗಳನ್ನು ಬಚ್ಚಿಡುವುಡು, ನಾಶ ಮಾಡುವ ಪ್ರಯತ್ನ

56 ಒಟ್ಟು ಆರೋಪಿಗಳು
07 ಅಸುನೀಗಿದವರು
02 ಮಾಫಿ ಸಾಕ್ಷಿಯಾದವರು
01 ತಪ್ಪೊಪ್ಪಿಕೊಂಡವರು
04 ಐಎಎಸ್ ಅಧಿಕಾರಿಗಳು
06 ರಾಜಕಾರಣಿಗಳು

ಮೇವು ಹಗರಣ ಹಿನ್ನೋಟ
* 1996 ಜನವರಿ- ಪಶುಸಂಗೋಪನಾ ಇಲಾಖೆ ಮೇಲೆ ದಾಳಿ ನಡೆಸಿದ ಮೇಲೆ ಹಗರಣ ಬಹಿರಂಗ . ಅಸ್ತಿತ್ವದಲ್ಲಿ ಇಲ್ಲದ ಸಂಸ್ಥೆಗಳ ಹೆಸರಲ್ಲಿ ಹಣ ಪಡೆದುಕೊಂಡ ಅಕ್ರಮ ಬಯಲು
* 1996 ಮಾ.11- ಪಟನಾ ಹೈಕೋರ್ಟ್‌ನಿಂದ ಸಿಬಿಐ ತನಿಖೆಗೆ ಆದೇಶ, ಸುಪ್ರೀಂಕೋರ್ಟ್‌ನಿಂದಲೂ ಸಮ್ಮತಿ
* 1997 ಜೂ.23- ಸಿಬಿಐನಿಂದ ಎಫ್‌ಐಆರ್ ದಾಖಲು
* 1997 ಜು.30- ಸಿಬಿಐ ಕೋರ್ಟ್ ಮುಂದೆ ಲಾಲು ಯಾದವ್ ಶರಣು
* 2000 ಏ.5- ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಆರೋಪಪಟ್ಟಿ ದಾಖಲು
* 2001 ಅ.5- ಹೊಸತಾಗಿ ಜಾರ್ಖಂಡ್ ರಾಜ್ಯ ರಚನೆಯಾದ್ದರಿಂದ ಪ್ರಕರಣಗಳೆಲ್ಲ ಅಲ್ಲಿ ವರ್ಗ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ
* 2002 ಫೆಬ್ರವರಿ- ರಾಂಚಿಯಲ್ಲಿರುವ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ಶುರು
* 2013 ಆ.13- ವಿಶೇಷ ಕೋರ್ಟ್‌ನ ನ್ಯಾಯಾಧೀಶರನ್ನು ವರ್ಗಾಯಿಸಬೇಕೆಂಬ ಲಾಲು ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
* 2013 ಸೆ.17- ತೀರ್ಪು ಕಾಯ್ದಿರಿಸಿದ ಕೋರ್ಟ್
* 2013 ಸೆ.30- ಲಾಲು ಯಾದವ್, ಮಿಶ್ರಾ ಸೇರಿ 45 ಮಂದಿ ದೋಷಿ ಎಂದು ಕೋರ್ಟ್ ತೀರ್ಪು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments