ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಧಾನಿ ಲೇವಡಿ ಮಾಡಿದ್ರೆ ಹುಷಾರ್

ಪ್ರಧಾನಿ ಮನಮೋಹನಸಿಂಗ್ ಅವರನ್ನು ಲೇವಡಿ ಮಾಡಬೇಡಿ. ನಾವು ಅವರೊಂದಿಗೆ ಇದ್ದೇವೆ...ಇದು ಎಐಸಿಸಿ ಅಧ್ಯಕ್ಷೆ...

Vishwanath S
Updated On : 1 Oct 2013, 11:44 am

ಕನ್ನಡಪ್ರಭ ವಾರ್ತೆ,  ಮಂಡ್ಯ,  ಸೆ.30-
ಪ್ರಧಾನಿ ಮನಮೋಹನಸಿಂಗ್ ಅವರನ್ನು ಲೇವಡಿ ಮಾಡಬೇಡಿ. ನಾವು ಅವರೊಂದಿಗೆ ಇದ್ದೇವೆ...
ಇದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನೀಡಿದ ಎಚ್ಚರಿಕೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರದ ಮರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಪ್ರತಿಪಕ್ಷಗಳು ನಮ್ಮ ಪಕ್ಷ ಹಾಗೂ ಪ್ರಧಾನಿ ಮನಮೋಹನಸಿಂಗ್ ಅವರನ್ನು ಗೇಲಿ ಮಾಡುತ್ತಿವೆ. ಆದರೆ ನೆನಪಿಡಿ ನಾವು ಪ್ರಧಾನಿಯವರ ಜತೆಗಿದ್ದೇವೆ. ರಾಷ್ಟ್ರದ ಉದ್ದಗಲಕ್ಕೂ ಹರಡಿರುವ ಪಕ್ಷ ಪ್ರಧಾನಿಯವರ ಬೆಂಬಲಕ್ಕಿದೆ. ಯಾವ ಸರ್ಕಾರದ ಅವಧಿಯಲ್ಲೂ ಮಾಡಲಾಗದ ಸಾಧನೆಯನ್ನು ಯುಪಿಎ ಸರ್ಕಾರದ ಮೂಲಕ ಅವರು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಮೂಲಕ ಯುಪಿಎ ಸರ್ಕಾರ ಪಾಸ್ ಮಾಡಿರುವ ಸುಗ್ರೀವಾಜ್ಞೆಯನ್ನು ಟೀಕಿಸಿದ್ದ ಎಐಸಿಸಿ ಉಪಾ ಧ್ಯಕ್ಷ ರಾಹುಲ್‌ಗಾಂಧಿ ಹೇಳಿಕೆಯಿಂದ ಉಂಟಾಗಿರುವ ವಿವಾದದ ಮೇಲೆ ಇದೇ ಮೊದಲ ಬಾರಿಗೆ ತಿಪ್ಪೆ ಸಾರಿಸಲು ಯತ್ನಿಸಿರುವ ಅವರು, ಕಾಂಗ್ರೆಸ್ ಪಕ್ಷ ಪ್ರಧಾನಿಯವರ ಕೈ ಬಿಡುವುದಿಲ್ಲ ಎಂದರು.  ಕಾಂಗ್ರೆಸ್‌ಗೆ ಭವ್ಯ ಇತಿಹಾಸವಿದೆ. ಗಾಂಧಿಜೀ, ನೆಹರೂ, ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಅವರು ನೀಡಿದ ಆಡಳಿತಾತ್ಮಕ ಪರಂಪರೆ ಇದೆ. ಆದರೆ ಬಿಜೆಪಿಗೆ ಇದ್ಯಾವುದೂ ಇಲ್ಲ.  ಪ್ರಜೆಗಳನ್ನು ಒಡೆದು ಆಳುವುದಷ್ಟೇ ಆ ಪಕ್ಷದ ತಂತ್ರ ಎಂದರು.     
ದೇಶದಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಅವರ ನೆರವಿಗೆ ಕಾಂಗ್ರೆಸ್ ಆಹಾರ ಭದ್ರತಾ ಕಾಯಿದೆ ಮೂಲಕ ಧಾವಿಸಿದೆ. ಇದೊಂದು ಐತಿಹಾಸಿಕ ಕಾಯಿದೆ. ಬಡವರಿಗೆ ಅನ್ನ ನೀಡುವ ಈ ಯೋಜನೆಯಲ್ಲೂ ಬಿಜೆಪಿ ತಪ್ಪು ಹುಡುಕುತ್ತಿದೆ. ಲೋಕಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಗದಂತೆ ಮಾಡಲು ಸಾಕಷ್ಟು ಯತ್ನಿಸಿದ ಬಿಜೆಪಿ ಈಗ ಸಲ್ಲದ ವದಂತಿಯನ್ನು ಬಿತ್ತಲು ಪ್ರಯತ್ನಿಸುತ್ತಿದೆ. ರೈತರಿಗೆ ಆಹಾರ ಭದ್ರತಾ ಕಾಯಿದೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಪುಕಾರನ್ನು ರಾಷ್ಟ್ರವ್ಯಾಪಿ ಹಬ್ಬಿಸಲಾಗುತ್ತಿದೆ. ಆದರೆ ಒಂದಂತು ನೆನಪಿಡಿ, ಕಾಂಗ್ರೆಸ್ ರೂಪಿಸುವ ಎಲ್ಲ ಯೋಜನೆಗಳ ಕೇಂದ್ರ ಬಿಂದು ರೈತರು. ಅವರ ಹಿತ ಕಾಯುವುದಕ್ಕೆ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮ ಭವಿಷ್ಯವಿದೆ ಎಂಬ ವಿಶ್ವಾಸ ಹಾಗೂ ಭರವಸೆ ನನಗೆ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ ಮತದಾರ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ರಮ್ಯಾ ಹಾಗೂ ಡಿ.ಕೆ.ಸುರೇಶ್ ಅವರಿಗೆ ಹರಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಸೇತರ ಶಕ್ತಿಗಳ ಸಮಯ ಸಾಧಕ ಹೊಂದಾಣಿಕೆಯನ್ನು ತಿರಸ್ಕರಿಸಲಾಗಿದೆ. ಮೂಲಭೂತವಾದದ ಮೂಲಕ ಅಲ್ಪಸಂಖ್ಯಾತರು ಹಾಗೂ ಭಾಷಾ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಬಿತ್ತಿದವರಿಗೆ ಉತ್ತಮ ಆಡಳಿತದ ಮೂಲಕ ಸಿದ್ದರಾಮಯ್ಯನವರು ನಿಯಂತ್ರಣ ಹೇರಲಿದ್ದಾರೆ ಎಂದರು. ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿದ ಮತದಾರನಿಗೆ ಅನಂತ ಧನ್ಯವಾದ. ನೀವು ನಮ್ಮ ಜತೆ ಕೈ ಸೇರಿಸಿ. ಸಮೃದ್ಧ ರಾಷ್ಟ್ರವನ್ನು ಕಟ್ಟೋಣ. ಪಕ್ಷ ಹಾಗೂ ಸರ್ಕಾರ ರಾಜ್ಯದಲ್ಲಿ ಒಟ್ಟಿಗೆ ಸಾಗುವ ಮೂಲಕ ಕಾಂಗ್ರೆಸ್ ಆಶಯವನ್ನು ಸಾಕಾರಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement