ಮುಗ್ಧ ಮುಸ್ಲಿಮರ ಬಂಧನ ಬೇಡ: ರಾಜ್ಯಗಳಿಗೆ ಶಿಂದೆ ಪತ್ರ
'ಯಾವನೇ ಅಮಾಯಕನೂ ಅನಗತ್ಯ ಕಿರುಕುಳ ಎದುರಿಸಬಾರದು. ಹಾಗಾಗಿ ಭಯೋತ್ಪಾದನೆಯ ಹೆಸರಿನಲ್ಲಿ ಅಮಾಯಕ ಮುಸ್ಲಿಂ...
ನವದೆಹಲಿ: 'ಯಾವನೇ ಅಮಾಯಕನೂ ಅನಗತ್ಯ ಕಿರುಕುಳ ಎದುರಿಸಬಾರದು. ಹಾಗಾಗಿ ಭಯೋತ್ಪಾದನೆಯ ಹೆಸರಿನಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸದಂತೆ ಕ್ರಮ ಕೈಗೊಳ್ಳಿ'.
ಹೀಗೆಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಕಾನೂನು ಜಾರಿ ಸಂಸ್ಥೆಗಳು ಅಮಾಯಕರನ್ನು ಬಂಧಿಸಿ ಹಿಂಸಿಸುತ್ತಿದೆ ಎಂದು ಆರೋಪಿಸಿ ಅನೇಕ ದೂರುಗಳು ಬಂದಿವೆ.
ನಮ್ಮನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಹಾಗೂ ನಮ್ಮ ಮೂಲಭೂತ ಹಕ್ಕನ್ನು ಕಸಿಯಲಾಗುತ್ತಿದೆ ಎಂಬ ಭೀತಿ ಅಲ್ಪಸಂಖ್ಯಾತ ಯುವಕರನ್ನು ಕಾಡುತ್ತಿದೆ. ಹಾಗಾಗಿ ಅಮಾಯಕರನ್ನು ಬಂಧಿಸದಂತೆ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಶಿಂದೆ ಪತ್ರದಲ್ಲಿ ತಿಳಿಸಿದ್ದಾರೆ.
ತ್ವರಿತಗತಿ ಕೋರ್ಟ್ ಸ್ಥಾಪಿಸಿ: ಇದೇ ವೇಳೆ, ಭಯೋತ್ಪಾದನಾ ಸಂಬಂಧಿ ಪ್ರಕರಣಗಳ ವಿಚಾರಣೆಗಾಗಿ ಸಂಬಂಧಪಟ್ಟ ಹೈಕೋರ್ಟ್ನ ಸಲಹೆ ಪಡೆದು ತ್ವರಿತಗತಿ ಕೋರ್ಟ್ ಸ್ಥಾಪಿಸುವಂತೆಯೂ ರಾಜ್ಯಗಳಿಗೆ ಶಿಂದೆ ಸೂಚಿಸಿದ್ದಾರೆ. ಇಂತಹ ಕೇಸುಗಳ ಇತ್ಯರ್ಥ ಬೇಗನೆ ನಡೆಯುವಂತೆ ಮಾಡಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗಳನ್ನೂ ನೇಮಿಸುವಂತೆ ಅವರು ಹೇಳಿದ್ದಾರೆ.
ಶಿಂದೆ ವಜಾಗೊಳಿಸಿ: ಶಿಂದೆ ಆದೇಶಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಸಂವಿಧಾನ ವಿರೋಧಿ ಹಾಗೂ ಜಾತ್ಯತೀತವಿರೋಧಿ ಹೇಳಿಕೆ ಎಂದಿರುವ ಬಿಜೆಪಿ, ಶಿಂದೆ ಅವರನ್ನೂ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದೆ.