ಹಿರಿಯ ಪತ್ರಕರ್ತ ಎನ್.ವಿ. ಜೋಶಿ ನಿಧನ
'ಸಂಯುಕ್ತ ಕರ್ನಾಟಕ' ಪತ್ರಿಕೆಯ ಮಾಜಿ ಸಂಪಾದಕ ಎನ್.ವಿ. ಜೋಶಿ (78) ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.30-
'ಸಂಯುಕ್ತ ಕರ್ನಾಟಕ' ಪತ್ರಿಕೆಯ ಮಾಜಿ ಸಂಪಾದಕ ಎನ್.ವಿ. ಜೋಶಿ (78) ಅವರು ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ನಿಧರಾದರು. ಹೃದಯ ಸಂಬಂಧಿ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತರಾದ ಜೋಶಿ ಅವರು ಹೃದಯಾಘಾತದಿಂದ ಅಸು ನೀಗಿದ್ದಾರೆ. ತೀವ್ರ ಹೃದಯ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಜೋಶಿ ಅವರಿಗೆ ನಾಲ್ವರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. ಪಾರ್ಥಿವ ಶರೀರದ ಅಂತ್ಯಕ್ರಿಯೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿತು. ಜೋಶಿ ಅವರು ಈ ಹಿಂದೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮೂಲತಃ ಬಾಗಲಕೋಟೆಯ ಮುಧೋಳದವರಾದ ಎನ್.ವಿ. ಜೋಶಿ 1959ರಲ್ಲಿ ಉಪಸಂಪಾದಕರಾಗಿ 'ಸಂಯುಕ್ತ ಕರ್ನಾಟಕ' ಪತ್ರಿಕೆ ಸೇರಿದ್ದರು. ಸುಮಾರು 47 ವರ್ಷಗಳ ಕಾಲ 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಜೋಶಿ ಅವರು ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಉಪಸಂಪಾದಕ ಹುದ್ದೆಯಿಂದ ಸಂಪಾದಕರ ಹುದ್ದೆಯವರೆಗೆ ಜವಾಬ್ದಾರಿ ನಿಭಾಯಿಸಿದ್ದರು.
ಉಪಸಂಪಾದಕ ಹುದ್ದೆಯಿಂದ ಸಂಪಾದಕರವರೆಗೆ
ಉಪಸಂಪಾದಕರಾಗಿ 'ಸಂಯುಕ್ತ ಕರ್ನಾಟಕ' ಸೇರಿದ್ದ ಜೋಶಿ ಅವರು 1992ರಲ್ಲಿ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡರು. ಮುಂದಿನ 14 ವರ್ಷಗಳವರೆಗೆ ಪತ್ರಿಕೆಯ ಸಂಪಾದಕರಾಗಿಯೇ ಜೋಶಿ ಮುಂದುವರಿದಿದ್ದರು. ಸುಮಾರು ನಾಲ್ಕೂವರೆ ದಶಕಗಳ ಪತ್ರಿಕೋದ್ಯಮದಲ್ಲಿ ಸಾಕಷ್ಟು ಯುವ ಪತ್ರಕರ್ತರ ಬೆಳವಣಿಗೆಗೆ ಅವರು ಕಾರಣರಾಗಿದ್ದರು.
ರಾಜಕೀಯ ವಿಶ್ಲೇಷಣೆಯಲ್ಲಿ ಹೆಸರು ಮಾಡಿದ್ದ ಎನ್.ವಿ. ಜೋಶಿ ಅವರು 'ರಾಜಕೀಯ ರಂಗ' ಅಂಕಣದ ಮೂಲಕ ಖ್ಯಾತರಾಗಿದ್ದರು. ಇದಲ್ಲದೇ ಆರ್ಥಿಕ ವಿಶ್ಲೇಷಣೆ ಹಾಗೂ ಬಜೆಟ್ ಕುರಿತಂತೆ ಅವರು ಪರಿಣತಿ ಹೊಂದಿದ್ದರು. ಕಳೆದ 2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಅವರು, ಮಾಧ್ಯಮ ಅಕಾಡೆಮಿ, ಕಾರ್ಯನಿರತ ಪತ್ರಕರ್ತ ಸಂಘದ ಪಿ.ಆರ್. ರಾಮಯ್ಯ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿದಂತೆ ನಾನಾ ಗೌರವಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪತ್ರಕರ್ತರ ಸಹಕಾರ ಸಂಘದ ಕಾರ್ಯದರ್ಶಿ, ಭಾರತೀಯ ಕಾರ್ಯನಿರತ ಪ್ರತಕರ್ತರ ಒಕ್ಕೂಟದ ಸದಸ್ಯರಾಗಿ ಜೋಶಿ ಸೇವೆ ಸಲ್ಲಿಸಿದ್ದರು. 2002ರಲ್ಲಿ ನಿವೃತ್ತಿಯಾದ ಬಳಿಕ ಮುಂದಿನ 4 ವರ್ಷಗಳ ಮಟ್ಟಿಗೆ ಸೇವೆಯನ್ನು ವಿಸ್ತರಿಸಿ 2006ರವರೆಗೂ ಸಂಪಾದಕರನ್ನಾಗಿ ಪತ್ರಿಕೆ ಅವರನ್ನು ಉಳಿಸಿಕೊಂಡಿತ್ತು. 'ಸಂಯುಕ್ತ ಕರ್ನಾಟಕ' ಪತ್ರಿಕೆಯ ಹುಬ್ಬಳ್ಳಿ ಹಾಗೂ ಬೆಂಗಳೂರು ಆವೃತ್ತಿಯಲ್ಲಿ ಜೋಶಿ ಅವರು ಕೆಲಸ ಮಾಡಿದ್ದರು. ಸಂಪಾದಕ ಹಾಗೂ ಪತ್ರಿಕೆಯ ನಾನಾ ಜವಾಬ್ದಾರಿ ಹೊತ್ತ ಸಂದರ್ಭದಲ್ಲಿ ನೌಕರರ ರಕ್ಷಣೆ ಹಾಗೂ ಕಾರ್ಮಿಕ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.
ಗಣ್ಯರ ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೋಶಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ ಹಾಗೂ ನಾನಾ ಮಾಧ್ಯಮಗಳ ಹಿರಿಯ ಪತ್ರಕರ್ತರು ಅಂತ್ಯಕ್ರಿಯೆ ವೇಳೆ ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು. 'ನಾಲ್ಕೂವರೆ ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಜೋಶಿ ಅವರ ನಿಧನ ತುಂಬಲಾರದ ನಷ್ಟ. ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ರಾಜಕೀಯ ವಿಶ್ಲೇಷಣೆಗಳ ಕುರಿತ ಜೋಶಿ ಅವರ ಬರಹ ಎಲ್ಲರಿಗೂ ಮಾರ್ಗದರ್ಶಿಯಾಗಿತ್ತು. ಇದಲ್ಲದೇ ಯುವ ಪತ್ರಕರ್ತರನ್ನು ರೂಪಿಸುವಲ್ಲಿ ವಿಶೇಷ ಕಾಳಜಿ ಹೊಂದಿದ್ದರು' ಎಂದು ಸಚಿವ ಎಚ್.ಕೆ. ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಬಳಗದ ಹಿರಿಯಣ್ಣ ನರಸಿಂಹ ಜೋಶಿ
'ಸಂಯುಕ್ತ ಕರ್ನಾಟಕ' ದೈನಿಕದ ಸಂಪಾದಕರಾದವರಲ್ಲಿ ದಿವಂಗತ ಎನ್.ವಿ. ಜೋಶಿ ಅವರೂ ಒಬ್ಬರು. ಸಂಪಾದಕರ ಕುರ್ಚಿಯಲ್ಲಿ ಯಾರೇ ಇರಲಿ ಪತ್ರಿಕೆಯ ಸಂಪಾದಕನ ಸಂಪೂರ್ಣ ಹೊಣೆಗಾರಿಕೆ ಎನ್.ವಿ. ಜೋಶಿ ಅವರದ್ದೇ ಆಗಿರುತ್ತಿತ್ತು. ಅಂದರೆ 'ಸಂಯುಕ್ತ ಕರ್ನಾಟಕ'ದಲ್ಲಿ ಅವರು ಸೇರ್ಪಡೆ ಹೊಂದಿದ ಸುಮಾರು 1959ರಿಂದಲೂ ಅವರು ಮಹತ್ತರ ಜವಾಬ್ದಾರಿಗಳನ್ನೇ ನಿರ್ವಹಿಸುತ್ತ ಬಂದಿದ್ದರು.
ನನಗಿಂತ ಸುಮಾರು ನಾಲ್ಕು ವರ್ಷಗಳಷ್ಟು ಹಿರಿಯರಾದ ಜೋಶಿ ಮೊದಲು ಕೆಲವು ವರ್ಷಗಳು ಶಿಕ್ಷಕರಾಗಿ ಕೆಲಸ ಮಾಡಿ ನಂತರ 1959ರಲ್ಲಿ 'ಸಂಯುಕ್ತ ಕರ್ನಾಟಕ'ದ ಬೆಂಗಳೂರು ಆವೃತ್ತಿ ಶುರುವಾದಾಗಿನಿಂದ ಸಂಪಾದಕ ಮಂಡಳಿಗೆ ಸೇರಿಕೊಂಡಿದ್ದರು. ಅದೇ ವರ್ಷ ನಾನು ಹುಬ್ಬಳ್ಳಿ ಆವೃತ್ತಿಯಲ್ಲಿ ವರದಿಗಾರನಾಗಿ ಸೇರಿಕೊಂಡಿದ್ದೆ.
ಜೋಶಿ ಅವರು 'ಸಂಯುಕ್ತ ಕರ್ನಾಟಕ'ದ ಬೆಂಗಳೂರು ಆವೃತ್ತಿ ಸೇರಿದ ತಕ್ಷಣ ಪತ್ರಿಕೆಯ ಎಲ್ಲ ಅಂಗಗಳನ್ನು ಪರಿಚಯಿಸಿಕೊಂಡರು. ಇವರು ತಮ್ಮ ಸಾಧನೆಯಿಂದಾಗಿ ಅಂದಿನಿಂದ ನಿವೃತ್ತಿಯವರೆಗೆ ಅಷ್ಟೇ ಏಕ, ಇಂದಿನವರೆಗೂ 'ಸಂಯುಕ್ತ ಕರ್ನಾಟಕ'ವನ್ನು, ಅದರ ಸಂಪಾದಕೀಯ ಚಟುವಟಿಕೆಗಳನ್ನು ತನ್ಮೂಲಕ ಓದುಗರ ಮನಸ್ಸನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಬೆಂಗಳೂರು ಮತ್ತು ಹುಬ್ಬಳ್ಳಿ ಆವೃತ್ತಿಯಲ್ಲಿ ಕೆಲಸ ಮಾಡುವಾಗ ಸಹೊದ್ಯೋಗಿಗಳನ್ನು, ಏಜೆಂಟ್ರನ್ನು ಆತ್ಮೀಯವಾಗಿ ಮಾತನಾಡಿಸಿ ಅವರ ಕಷ್ಟಸುಖ, ಸಮಸ್ಯೆಗಳನ್ನು ಅರಿತುಕೊಂಡು ಸೂಕ್ತ ಪರಿಹಾರ ಸೂಚಿಸುವ ಹಿರಿಯಣ್ಣನಂತೆ ವರ್ತಿಸುತ್ತಿದ್ದರು.
ಜೋಶಿಯವರು ಕನ್ನಡ ಭಾಷೆಯ ಶಾಸ್ತ್ರಗಳನ್ನು ಚೆನ್ನಾಗಿ ಅರಿತವರಾಗಿದ್ದರಿಂದ ಸುದ್ದಿಗಳಲ್ಲಿ, ಲೇಖನಗಳಲ್ಲಿ ಬಳಕೆಯಾಗುವ ಶಬ್ದಗಳ ಔಚಿತ್ಯವನ್ನು ನನ್ನೊಂದಿಗೆ ಹಲವಾರು ಬಾರಿ ಚರ್ಚಿಸುತ್ತಿದ್ದರು. ಮಿಥೇನ್ ಅನಿಲದ ಬಗ್ಗೆ ಹಾಗೂ ಸಗಣಿ ಗೊಬ್ಬರದಲ್ಲಿ ಅದರ ಅಂಶವಿರುವುದರ ಕುರಿತು ಇಂಗ್ಲಿಷ್ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಿದ್ದೆ. ಆ ಸಂದರ್ಭದಲ್ಲಿ ನಾನು ಮೂವತ್ಮೂರು ಕೋಟಿ ದೇವತೆಗಳ ಅಸ್ತಿತ್ವ ಹೊಂದಿದ ಗೋಮಾತೆಯ ಮೂತ್ರ ದ್ವಾರದಲ್ಲಿ ಮಹಾಲಕ್ಷ್ಮೀ ತನಗೊಂದು ಸ್ಥಾನ ಪಡೆದ ಕಥೆಯನ್ನು ಪ್ರಸ್ತಾಪಿಸಿದ್ದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ವೈಜ್ಞಾನಿಕ ಲೇಖನಕ್ಕೆ ಪೌರಾಣಿಕ ಹಿನ್ನೆಲೆ ಪ್ರಸ್ತಾಪಿಸಿದ್ದು ತುಂಬಾ ಕುತೂಹಲಕಾರಿ ಎಂದಿದ್ದರು. ಇಂಥ ಪ್ರಸ್ತಾಪಗಳಿಂದ ವಿಷಯ ಸಾಮಾನ್ಯರಿಗೆ ಮನದಟ್ಟಾಗುತ್ತದೆಂದಿದ್ದರು.
ಜೋಶಿ ಹಾಗೂ ನನ್ನ ಸಂಬಂಧ ಅತ್ಯಂತ ಆತ್ಮೀಯವಾಗಿತ್ತು. ರಾಜಕೀಯ, ಭಾಷಾಶಾಸ್ತ್ರ, ಕಾವ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಬಿಡುವಿನ ಕಾಲದಲ್ಲಿ ನಮ್ಮಿಬ್ಬರ ನಡುವೆ ಚರ್ಚೆ ಸಾಗುತ್ತಿತ್ತು. ಕೆಲವು ವರ್ಷಗಳಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯವಿಬ್ಬ ಒಬ್ಬ 'ಪತ್ರಿಕೆಯ ಪ್ರತ್ಯಂಗವನ್ನೇ ಅರಿತಿರುವ ಜೋಶಿ ಅವರನ್ನು ಅವರ ಸ್ಥಾನದಿಂದ ಕದಲಿಸುವುದು ಅಸಾಧ್ಯ' ಎಂದು ಹೇಳಿದ್ದು ನನ್ನ ಸ್ಮರಣೆಗೆ ಬರುತ್ತದೆ. ಅನೇಕ ಭಿನ್ನಾಭಿಪ್ರಾಯಗಳನ್ನು ಹೊಂದಿದ ನಾನು ತುಂಬಾ ಸಂಕಷ್ಟದ ಪ್ರಸಂಗಗಳಿಗೆ ಸಿಲುಕಿದಾಗ ನನಗೆ ಏನೂ ಮಾಡಲಿಕ್ಕೂ ಸಾಧ್ಯವಿಲ್ಲ ಎಂದು ಮರುಗಿದ್ದೆ. ಆಗ ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರೆನ್ನುವುದಕ್ಕಿಂತ ಹಿರಿಯಣ್ಣನೇ ಎನಿಸಿದ್ದರೆಂದು ಅವರ ಅಗಲಿಕೆಗೆ ಕಂಬನಿ ಸುರಿಸುತ್ತಿದ್ದೇನೆ.
- ನಾರಾಯಣ ಗಳಗಿ, ಹಿರಿಯ ಪತ್ರಕರ್ತ, ಸಾಹಿತಿ
ನಿಷ್ಠ ಪತ್ರಿಕೋದ್ಯಮದ ಕಳಚಿದ ಕೊಂಡಿ
ಕರ್ನಾಟಕ ಪತ್ರಿಕೋದ್ಯಮದಲ್ಲಿ ಬಿಜಾಪುರ ಜಿಲ್ಲೆಯಿಂದ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ವಲಸೆ ಬಂದ ಬುದ್ಧಿವಂತರೇ ಹೆಚ್ಚಾಗಿದ್ದ ಕಾಲವೊಂದಿತ್ತು. ಆಗಲೇ ಈ ವೃತ್ತಿಯನ್ನು ಕೈಗೊಂಡವರಲ್ಲಿ ಎನ್.ವಿ. ಜೋಶಿಯವರೂ ಒಬ್ಬರು.
ದೇವರ ಹಿಪ್ಪರಗಿಯಿಂದ ಬೆಳಗಾವಿಗೆ ಹೋಗಿ ನಂತರ ಹುಬ್ಬಳ್ಳಿಯಲ್ಲಿ 'ಸಂಯುಕ್ತ ಕರ್ನಾಟಕ'ವನ್ನು ಅಪ್ರತಿಮ ಸ್ಥಾನಕ್ಕೇರಿಸಿದ ಮೊಹರೆ ಹಣಮಂತರಾವ್ ಇವರಿಗೆಲ್ಲ ಪ್ರೇರಕ ಶಕ್ತಿ.
ನರಸಿಂಹ ಜೋಶಿಯವರು ಹುಬ್ಬಳ್ಳಿಯಲ್ಲಿ ನೇಮಕಗೊಂಡು ಅದೇ ಆಗ ಬೆಂಗಳೂರಿನಲ್ಲಿ ಆವೃತ್ತಿ ಆರಂಭಿಸಿದ 'ಸಂಯುಕ್ತ ಕರ್ನಾಟಕ'ವನ್ನು ಸೇರಿದರು. ಇಂದಿನ ಬಾಗಲಕೋಟೆ ಜಿಲ್ಲೆಯ ಮುಧೋಳದ ಕಸಬಾ ಜಂಬಗಿಯವರಾದ ಜೋಶಿಯವರು, ಸಂಸ್ಕೃತ ಪಂಡಿತರಾಗಿದ್ದ ತಂದೆಯ ಪ್ರಭಾವಕ್ಕೆ ಒಳಪಟ್ಟರೂ ಕನ್ನಡವನ್ನು ಮರಾಠಿ ಪ್ರಭಾವಿಕ ಮುಧೋಳದಲ್ಲಿ ಕಲಿತರು. ಕೊನೆಯಲ್ಲಿ ತಮ್ಮ ಭವಿಷ್ಯವನ್ನು ಪತ್ರಿಕೋದ್ಯಮದಲ್ಲಿಯೇ ಅರಸಿಕೊಂಡರು. ಜೋಶಿಯವರಿಗೆ ಮಾರ್ಗದರ್ಶಕರಾಗಿ ಅವರ ವೃತ್ತಿಪರತೆಗೆ ಚುರುಕು ಕೊಟ್ಟವರು, ಆಗ ಅಲ್ಲಿದ್ದ ನುರಿತ ಸುದ್ದಿ ಸಂಪಾದಕರಾಗಿದ್ದ ಎಚ್.ವಿ. ನಾಗೇಶರಾವ್ ಅವರು. ಆಗ ನಾವೆಲ್ಲರೂ ಸುದ್ದಿ ಸಂಸ್ಥೆಗಳಿಂದ ಟೆಲಿಪ್ರಿಂಟರ್ನಲ್ಲಿ ಬರುತ್ತಿದ್ದ ಇಂಗ್ಲಿಷ್ ವಾರ್ತೆಗಳನ್ನು ಸಮರ್ಪಕವಾಗಿ ಭಾಷಾಂತರಿಸಿ ಸುದ್ದಿಯನ್ನು ಸಮಯದ ಮಿತಿ ಗಮನಿಸಿ ಸಂಪಾದಿಸಬೇಕಾಗಿತ್ತು. ಆಗಿನ ಕಾಲದ ಪತ್ರಕರ್ತರು, ಕ್ರಮೇಣ ಭಾಷಾಂತರ ಕಲೆಯನ್ನು ಕಲಿತರು. ಜೋಶಿಯವರು ಅಂಥ ಕೆಲಸದಲ್ಲಿ ಮುಂಚೂಣಿಯಲ್ಲಿದ್ದರು.
ಒಬ್ಬ ಸಮರ್ಥ ಸುದ್ದಿ ಸಂಪಾದಕನಾಗಿ ನಂತರ ಸಹಾಯಕ ಸಂಪಾದಕನಾಗಿ ಬೆಂಗಳೂರು ಆವೃತ್ತಿಯ ಬೆಳವಣಿಗೆಗೆ ತಮ್ಮ ಉಪಯುಕ್ತ ಸೇವೆ ಸಲ್ಲಿಸಿದರು. ಆಗಲೇ ಬರೆಯತೊಡಗಿದ ಅವರು, ಹಿರಿಯರು ಹಾಕಿಕೊಟ್ಟ ಹಾದಿಯನ್ನು ಆ ಕಾಲದ ನಿರೀಕ್ಷೆಗೆ ತಕ್ಕಂತೆ ಸ್ವಲ್ಪ ಬದಲಾವಣೆ ಮಾಡಿಕೊಂಡರು. ಅವರ ಸುದ್ದಿ ಪ್ರಜ್ಞೆ ಚುರುಕಾಗಿತ್ತು. ತಮ್ಮ ಕೆಲಸದ ಜತೆಯಲ್ಲಿ ಅವರು ತಮ್ಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಬರವಣಿಗೆ ಯಾವಾಗಲೂ ಬಲು ದೀರ್ಘ. 'ರಾಜಕೀಯ ವಿಶ್ಲೇಷಣೆ' ಅಂಕಣದಲ್ಲಿ ಅವರ ಬರವಣಿಗೆ ಈ ವರ್ಗಕ್ಕೆ ಸೇರಿತ್ತು. ಯಾವುದೇ ವಿಚಾರವನ್ನಾದರೂ ಹಿಂಜಿಗಿಂಜಿ ಬರೆಯುತ್ತಿದ್ದರು. ಅವರ ಕಾಲದ ರಾಜಕೀಯ ಅಧ್ಯಯನಕ್ಕೆ ಈ ಶೈಲಿ ಬಹಳ ಅನುಕೂಲವಾಗಿತ್ತು.
ಸಂಪಾದಕರಾಗಿ ಐದಾರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ತಮ್ಮ ಸಾಮರ್ಥ್ಯ ಮೀರಿ ಸಂಚಿಕೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದರು. ಅವರು ಮುಂದೆ ಪತ್ರಿಕೆಯ ಸಲಹೆಗಾರರಾಗಿಯೂ ಶ್ರಮಿಸಿದರು. ಬಿಜಾಪುರದ ಆಡು ಭಾಷೆಯ ಸೊಗಸನ್ನು ಹಳೆ ಮೈಸೂರಿನ ಮೃದು ಭಾಷೆಗೆ ಹೊಂದಿಸಿ ತಮ್ಮದೇ ಆದ ಶೈಲಿಯನ್ನು ನರಸಿಂಹ ಜೋಶಿ ಆವಿಷ್ಕಾರಗೊಳಿಸಿದ್ದರು. ಬಂಡೇಳುವ ಪ್ರವೃತ್ತಿ ಅವರದಲ್ಲ. 'ಸಂಯುಕ್ತ ಕರ್ನಾಟಕ'ದಲ್ಲಿ ಯಾರದೇ ಆಡಳಿತ ಬರಲಿ ಸ್ಥಿತಿಗೆ ಹೊಂದಿಕೊಂಡು ತಮ್ಮ ನಿರ್ದಿಷ್ಟ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು. ಕರ್ನಾಟಕ ಯುನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ನ ಅಧ್ಯಕ್ಷರಾಗಿದ್ದ ಕಾಲದಲ್ಲಿ ತಮ್ಮ ಹೋರಾಟ ಪ್ರವೃತ್ತಿಯ ನಿದರ್ಶನ ನೀಡಿದ್ದರೂ ಶಾಂತಿಯುತ ಸಂಧಾನವನ್ನೇ ಬಯಸುತ್ತಿದ್ದರು. ಅನೇಕ ಪತ್ರಕರ್ತರು ಈ ಪತ್ರಿಕೆಯಲ್ಲಿ ಅನುಭವ ಪಡೆದು ಹೊಸ ಹೊಸ ಹುಲ್ಲುಗಾವಲುಗಳನ್ನು ಅರಸಿಕೊಂಡು ಹೋಗುತ್ತಿದ್ದ ಕಾಲದಲ್ಲಿ ಅವರು ನಿಷ್ಠ ಕಾರ್ಯಕರ್ತನಾಗಿ ಆರಂಭದಿಂದ ಅಂತ್ಯದವರೆಗೂ ಅದೇ ಸಂಸ್ಥೆಯಲ್ಲಿ ಉಳಿದರು. ಒಂದೇ ಪತ್ರಿಕೆಯಲ್ಲಿ ಸುಮಾರು ಅರ್ಧ ಶತಕ ಸೇವೆ ಸಲ್ಲಿಸಿ ನಿವೃತ್ತರಾದರು.
ನರಸಿಂಹ ಜೋಶಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಅವರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯೂ ಸಂದಿದೆ. ನಾಲ್ಕು ವರ್ಷಗಳ ಹಿಂದೆ ಮಾಧ್ಯಮ ಹಾಗೂ ಸಾರ್ವಜನಿಕ ಪ್ರತಿಷ್ಠಾನದ 'ಪಾವೆಂ' ಪ್ರಶಸ್ತಿಯಿಂದಲೂ ಅವರು ಗೌರವಿತರಾಗಿದ್ದರು. ಅದರಂತೆ ಮಾಧ್ಯಮ ಅಕಾಡೆಮಿ ಕೂಡ ಅವರಿಗೆ ಪ್ರಶಸ್ತಿ ನೀಡಿತ್ತು.
ಪತ್ನಿಯ ಮರಣ ನಂತರ ಅವರು ಕ್ರಮೇಣವಾಗಿ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದರೆಂಬ ಭಾವನೆ ಅವರ ಸಹದ್ಯೋಗಿಗಳಿಗೆ ಬಂದಿತ್ತು. 1960ರಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ನಿಷ್ಠ ಪತ್ರಕರ್ತರ ಒಂದೊಂದೇ ಕೊಂಡಿ ಕಳಚಿ ಹೋಗತೊಡಗಿದೆ. ಅವರು ಹಾಕಿಕೊಟ್ಟ ನಿದರ್ಶನಗಳು ಹೊಸಬರಿಗೆ ಪ್ರೇರಕವಾಗಬೇಕು.
- ಶಿವಾನಂದ ಜೋಶಿ, ಹಿರಿಯ ಪತ್ರಕರ್ತ