107ಕ್ಕೆ ಕಾಲಿಟ್ಟ ಸಿದ್ಧಗಂಗಾ ಶ್ರೀ
ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ಮಂಗಳವಾರ 107ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಸ್ವಾಮೀಜಿಯವರ...
ಕನ್ನಡಪ್ರಭ ವಾರ್ತೆ ತುಮಕೂರು ಏ.1
ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ಮಂಗಳವಾರ 107ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಸ್ವಾಮೀಜಿಯವರ ಜನ್ಮಜಯಂತಿ ಅಂಗವಾಗಿ ನಾಡಿನ ವಿವಿಧ ಮಠಗಳ ಮಠಾಧೀಶರು ಪಾದಪೂಜೆ, ಆರತಿ ಮಾಡಿ ಭಕ್ತಿ ಸಮರ್ಪಿಸಿದರು.
ಹಳೇ ಮಠದಲ್ಲಿ ಬೆಳಗಿನ ಜಾವ ಮೂರರಿಂದಲೇ ಸ್ವಾಮೀಜಿಯವರ ಇಷ್ಟಲಿಂಗ ಪೂಜೆ ನೆರವೇರಿತು. ನೂರಾರು ಭಕ್ತರು ಲಿಂಗಪೂಜೆಯನ್ನು ಸಾಕ್ಷೀಕರಿಸಿದರು. ಬಳಿಕ ಮಠದ ಆವರಣದಲ್ಲಿನ ಉತ್ಸವ ಮಂಟಪಕ್ಕೆ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆತಂದು ಬೆಳ್ಳಿ ಸಿಂಹಾಸನದಲ್ಲಿ ಕುಳ್ಳಿರಿಸಲಾಯಿತು.
ವೇದ ಘೋಷಗಳ ನಡುವೆ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕತೊಟ್ಲುಕೆರೆಯ ಅಟವಿ ಶಿವಲಿಂಗಸ್ವಾಮೀಜಿ ಸೇರಿದಂತೆ ಸಿದ್ಧಗಂಗಾ ಶಾಖಾ ಮಠದ ಸ್ವಾಮಿಗಳು, ವಿವಿಧ ಮಠಗಳ ಪೀಠಾಧ್ಯಕ್ಷರು, ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಿದರು. ಈ ವೇಳೆ, ಭಕ್ತರು 'ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಜಯವಾಗಲಿ' ಎಂದು ಜಯಕಾರ ಹಾಕಿದರು.