ವಿಳಂಬ ರಾಜಕೀಯ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಆಗುತ್ತಿರುವ ವಿಳಂಬ ಈಗ ಹೊಸ ವಿವಾದ ಸೃಷ್ಟಿಸಿದೆ...
ರೇವಾ(ಮ.ಪ್ರ.): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಆಗುತ್ತಿರುವ ವಿಳಂಬ ಈಗ ಹೊಸ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಕಾಪ್ಟರ್ ಹಾರಾಟ ವಿಳಂಬವಾಗುವಂತೆ ನೋಡಿಕೊಳ್ಳುತ್ತಿದೆ. ಇದೊಂದು ವ್ಯವಸ್ಥಿತ ಪಿತೂರಿ. ಇದರ ವಿರುದ್ಧ ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಮೋದಿ ಆಗ್ರಹಿಸಿದ್ದಾರೆ.
ವಾಯು ಸುರಕ್ಷತೆ ಅನುಮತಿ ಸಿಕ್ಕಿರಲಿಲ್ಲ
ರಾಯ್ಬರೇಲಿಯ ಏರ್ಪೋರ್ಸ್ ಕೇಂದ್ರದಲ್ಲಿ ಮೋದಿ ಕಾಪ್ಟರ್ಗೆ ಏರ್ಡಿಫೆನ್ಸ್ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ ಎಂದು ವಾಯುಯಾನ ಪ್ರಾಧಿಕಾರದ ಮೂಲಗಳು ಹೇಳಿವೆ. ಮೋದಿ ಅವರಿಗೆ ಕಾಪ್ಟರ್ ಅನ್ನು ಬಾಡಿಗೆಗೆ ನೀಡಿದ ಖಾಸಗಿ ಕಂಪನಿಯು ಟೇಕಾಫ್ಗಿಂತ ಕೆಲ ನಿಮಿಷಗಳ ಮೊದಲಷ್ಟೇ ಹಾರಾಟದ ಕುರಿತು ಮಾಹಿತಿ ನೀಡಿತ್ತು. ಇದು ಕೂಡ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.
ಬಿಜೆಪಿಯಿಂದ ದೂರು
ಮೋದಿ ಅವರ ಕಾಪ್ಟರ್ ಪ್ರಯಾಣಕ್ಕೆ ಸಂಬಂಧಿಸಿ ಆಗುತ್ತಿರುವ ವಿಳಂಬಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಎಲ್ಲ ಪಕ್ಷಗಳ ಸ್ಟಾರ್ ಪ್ರಚಾರಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮೋದಿ ಅವರ ಕಾರ್ಯಕ್ರಮಕ್ಕೆ ತೊಂದರೆ ಕೊಡಲು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ಟಾರ್ ಪ್ರಚಾರಕರಿಗೆ ಯಾವುದೇ ತೊಂದರೆ ಆಗದಂತೆ ಮುತುವರ್ಜಿ ವಹಿಸುವಂತೆ ವಿಮಾನಯಾನ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಒತ್ತಾಯಿಸಿದೆ.
ಕಾಪ್ಟರ್ ಪ್ರಯಾಣಕ್ಕೆ ಅವಕಾಶ ಇಲ್ಲ ಎನ್ನಿ
ಒಂದು ವೇಳೆ ಯುಪಿಎ ಸರ್ಕಾರಕ್ಕೆ ನನ್ನನ್ನು ಕಂಡು ಹೆದರಿಕೆಯಾಗುತ್ತಿದ್ದರೆ ಈ ಚುನಾವಣೆ ಅವಧಿಯಲ್ಲಿ ಮೋದಿ ಅವರಿಗೆ ಕಾಪ್ಟರ್ನಲ್ಲಿ ಸಂಚರಿಸಲು ಬಿಡಲ್ಲ ಎಂದು ಘೋಷಿಸಲಿ ಎಂದು ಮೋದಿ ಟಾಂಗ್ ನೀಡಿದ್ದಾರೆ. ಚುನಾವಣೆಯಲ್ಲಿ ಚುನಾವಣಾ ಆಯೋಗದ್ದು ಅಂಪೈರ್ನ ಕೆಲಸ. ಆಯೋಗವು ಯಾವುದೇ ರಾಜಕೀಯ ಪಕ್ಷಗಳಿಗೆ ತಾರತಮ್ಯವಾಗದಂತೆ ನೋಡಿಕೊಳ್ಳಬೇಕು. ಹಾಗಾಗಿ ನನ್ನ ಕಾಪ್ಟರ್ ಪ್ರಯಾಣದಲ್ಲಿ ಆದ ಮೂರು ಗಂಟೆ ವಿಳಂಬಕ್ಕೆ ಸಂಬಂಧಿಸಿ ಆಯೋಗವು ತನಿಖೆ ನಡೆಸಬೇಕು. ಈ ಪಿತೂರಿಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ ಮೋದಿ. ಇದೇ ವೇಳೆ, ಹೆಲಿಕಾಪ್ಟಪ್ ಟೇಕಾಫ್ ಆಗುತ್ತೋ ಇಲ್ವೋ ಗೊತ್ತಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರವಂತೂ ಗಂಟು ಮೂಟೆ ಕಟ್ಟಲಿರುವುದು ಖಚಿತ ಎಂದಿದ್ದಾರೆ ಮೋದಿ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ರ್ಯಾಲಿಯಲ್ಲೂ ಕಾಪ್ಟರ್ ವಿಳಂಬದ ಕುರಿತು ಮೋದಿ ಪ್ರಸ್ತಾಪಿಸಿದ್ದರು. ಬೆಳಗ್ಗೆ 9.30ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕೂತಿದ್ದೆ. ಆದರೆ, ಕಾಪ್ಟರ್ ಹಾರಾಟಕ್ಕೆ ಅನುಮತಿಯನ್ನೇ ನೀಡಲಿಲ್ಲ ಎಂದಿದ್ದರು.
ಸಿಎಂ ಆದ ನಂತರ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿದೆ: ನರೇಂದ್ರ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚಾನೆಲ್ವೊಂದಕ್ಕೆ ಏಕಪಕ್ಷೀಯ ಸಂದರ್ಶನ ನೀಡಿದ್ದಾರೆ. ಅಂದರೆ ಇಲ್ಲಿ ಮೋದಿ ಅವರನ್ನು ಪ್ರಶ್ನಿಸಲು ಸಂದರ್ಶಕ ಇರಲಿಲ್ಲ, ಬದಲಾಗಿ ಮೋದಿ ಅವರ ಸ್ವಗತ ಸಂದರ್ಶನ ಇದಾಗಿತ್ತು. ಗುಜರಾತ್ನಲ್ಲಿ ಪುಸ್ತಕವೊಂದಕ್ಕೆ ಸಂಬಂಧಿಸಿ ಸಂಶೋಧನೆ ಮಾಡುವುದಕ್ಕಾಗಿ ಪತ್ರಕರ್ತ ಮಧು ಕಿಶ್ವಾರ್ ಅವರು ಏರ್ಪಡಿಸಿದ್ದ ಸಂದರ್ಶನ ಇದು. ಇಲ್ಲಿ ಮೋದಿ ಅವರು ತಮ್ಮ ಬಗ್ಗೆ ಮಾತನಾಡಿದ್ದರೂ, ಈ ಸಂದರ್ಶನದ ಸ್ವರೂಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದಂತೂ ಸತ್ಯ.
ಸಂದರ್ಶನದಲ್ಲಿ ಮೋದಿ ಹೇಳಿದ್ದೇನು?
ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದಾಗ ಮಾಧ್ಯಮಗಳು ನನ್ನನ್ನು ಶತ್ರುವಿನಂತೆ ಕಂಡವು. ಕೇಶುಭಾಯಿ ಅವರನ್ನು ಲೂಟಿ ಮಾಡಿ, ತನ್ನ ಪ್ರಭಾವ ಬಳಸಿ ಮೋದಿ ಸಿಎಂ ಗದ್ದುಗೆಗೆ ಏರಿದರು ಎಂಬ ಭಾವನೆಯೇ ಇದಕ್ಕೆ ಕಾರಣ. ನನ್ನ ವಿರುದ್ಧದ ನೇತ್ಯಾತ್ಮಕ ಪ್ರಚಾರ ಕಾಂಗ್ರೆಸ್ಗೆ ಸರಿಯಾಗಿ ಅನ್ವಯಿಸುತ್ತಿತ್ತು.
ನನಗಿಂತ ಹಿರಿಯವರಾದ ಮುಖ್ಯ ಕಾರ್ಯದರ್ಶಿ ಸುಬ್ಬರಾವ್ ಅವರು ನನ್ನನ್ನು 'ಸಾಹೇಬ್' ಎಂದು ಕರೆದರು. ಇದು ನನಗೆ ಇಷ್ಟವಾಗಲಿಲ್ಲ. ಸರಳ ಹಿನ್ನಲೆಯಿಂದ ಬಂದ ನನ್ನನ್ನು ಜನ 'ಭಾಯಿ', 'ನರೇಂದ್ರಜೀ' ಎಂದು ಕರೆಯುವದನ್ನಷ್ಟೇ ಕೇಳಿದ್ದೆ.
ಸಿಎಂ ಆಗಿ 100 ದಿನಗಳಾಗುತ್ತಿದ್ದಂತೆ ನನ್ನ ಕ್ರಿಯೆಯಿಂದಲೇ ನನ್ನ ಪ್ರಾಮಾಣಿಕತೆ ಎಲ್ಲರ ಅರಿವಿಗೆ ಬಂತು.
ಸಬಲೀಕರಣವೇ ನನ್ನ ಮೊದಲ ಆದ್ಯತೆ. ಮೇಲಿನ ಅಧಿಕಾರಿಯಿಂದ ಅನುಮತಿ ಸಿಗುವವರೆಗೆ ಕಾಯುವ ಬದಲು ಕೆಳಮಟ್ಟದ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುವಂತೆ ಅವರನ್ನು ಸಬಲೀಕರಣಗೊಳಿಸಿದೆ. ಇದು ಭುಜ್ ದುರಂತದ ಬಳಿಕ ಹೆಚ್ಚಿನ ಪ್ರಭಾವ ಬೀರಿತು.
ಮುಖ್ಯಮಂತ್ರಿ ಆದ ಬಳಿಕ ನಾನು ಐಐಎಂಗೆ ತೆರಳಿ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿದೆ.