ಚಿಲಿಯಲ್ಲಿ ಭಾರಿ ಭೂಕಂಪ; ಕರಾವಳಿಗೆ ಅಪ್ಪಳಿಸಿದ ಸುನಾಮಿ
ಸ್ಯಾಂಟಿಯಾಗೋ: ಉತ್ತರ ಚಿಲಿಗೆ ಭಾರಿ ಭೂಕಂಪದ ಆಘಾತ.
ಮಂಗಳವಾರ ರಾತ್ರಿ 8.2 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಚಿಲಿ ಕರಾವಳಿಗೆ 2 ಮೀಟರ್‌ನಷ್ಟು ಎತ್ತರದ ಅಲೆಗಳು ಅಪ್ಪಳಿಸಿವೆ. ಈ ಸಣ್ಣ ಪ್ರಮಾಣದ ಸುನಾಮಿ ಭೀತಿಯಿಂದಾಗಿ ಪೆಸಿಫಿಕ್ ಕರಾವಳಿಯಲ್ಲಿರುವ 9 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಭೂಕಂಪದ ಪರಿಣಾಮ ಆರು ಮಂದಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವೆಡೆ ಭೂಕುಸಿತ ಉಂಟಾಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸಾವಿರಾರು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿಮಾನ ನಿಲ್ದಾಣಕ್ಕೆ ಹಾನಿಯಾಗಿದ್ದು, ಕೆಲವೊಂದು ಕಟ್ಟಡಗಳಿಗೆ ಬೆಂಕಿ ಹತ್ತಿಕೊಂಡಿದೆ.
ಇದೇ ವೇಳೆ, ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆಯೇ ಇಕ್ವಿಕ್ ಎಂಬ ನಗರದ ಮಹಿಳಾ ಜೈಲಿನಿಂದ ಸುಮಾರು 300 ಮಂದಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಪೆರು ಹಾಗೂ ಬೊಲಿವಿಯಾದಲ್ಲಿನ ಕಟ್ಟಡಗಳೂ ನಡುಗಿವೆ. ಭೂಕಂಪದ ಹಿನ್ನೆಲೆಯಲ್ಲಿ ಉತ್ತರ ಚಿಲಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ, ಚಿಲಿ ಭೂಕಂಪದ ಪರಿಣಾಮ ಇಂಡೋನೇಷ್ಯಾದಲ್ಲೂ ಸಣ್ಣ ಪ್ರಮಾಣದಲ್ಲಿ ಸುನಾಮಿ ಅಪ್ಪಳಿಸಬಹುದೆಂದು ಹೇಳಲಾಗಿದೆ.