ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಚು'ಮಂತ್ರ; ಎಂಡೋ ಸಂತ್ರಸ್ತರು ಅತಂತ್ರ

Mainashree
Updated On : 2 Apr 2014, 9:53 am

ಬೆಂಗಳೂರು: ಎಂಡೋಸಲ್ಫಾನ್ ಪೀಡಿತರಿಗೂ ಚುನಾವಣೆ ಬಿಸಿ ತಟ್ಟಿದೆ.
ಚುನಾವಣೆಗೂ ಎಂಡೋಸಲ್ಫಾನ್ ಪೀಡಿತರಿಗೂ ಎತ್ತಣಿಂದೆತ್ತ ಸಂಬಂಧ ಎನ್ನಬೇಡಿ. ಸಂತ್ರಸ್ತರಿಗೆ 'ಮಾಸಾಶನ ಆದೇಶ ಪತ್ರ' ತಲುಪದಿರಲು ಚುನಾವಣೆಯೇ ಕಾರಣ ಎಂಬ ನೆಪ ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ನಿರತರಾಗಿದ್ದು, ಸಂತ್ರಸ್ತರ ಕೈಗೆ ಸಿಗುತ್ತಿಲ್ಲ. ಇದರಿಂದ ಆದೇಶ ಪತ್ರವೂ ದೊರೆಯುತ್ತಿಲ್ಲ. ಸಾಕಷ್ಟು ಸಂತ್ರಸ್ತರಿಗೆ ಈ ಆದೇಶ ಪತ್ರ ತಲುಪದ ಕಾರಣ ಸಂತ್ರಸ್ತರ ಸಂಬಂಧಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಪತ್ರ ನೀಡುವವರು ಮಾತ್ರ ಕೈಗೆ ಸಿಗುತ್ತಿಲ್ಲ ಎಂಬುದು ಸಂತ್ರಸ್ತರ ಆರೋಪ.
ಮತ್ತೊಂದೆಡೆ ಎಂಡೋಸಲ್ಫಾನ್ ಪೀಡಿತರಿಗೆ ನೆರವಾಗಬೇಕಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಪೀಡಿತರನ್ನು ಮತ್ತಷ್ಟು ಪೀಡಿಸುತ್ತಿದ್ದಾರೆ. ಮಾರ್ಚ್ 1ರ ನಂತರ ಪ್ರತಿಯೊಬ್ಬ ಎಂಡೋಸಲ್ಫಾನ್ ಪೀಡಿತರಿಗೂ ಮಾಸಾಶನ ನೀಡಬೇಕೆಂಬ ಹೈಕೋರ್ಟ್ ಆದೇಶದ ಜತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳದ್ದು ಮತ್ತೊಂದು ಕಾನೂನು.
ರಾಷ್ಟ್ರೀಕೃತ ಬ್ಯಾಂಕ್‌ನಲ್ಲೇ(ಎಸ್‌ಬಿಎಂ) ಎಂಡೋಸಲ್ಫಾನ್ ಪೀಡಿತರು ಖಾತೆ ಹೊಂದಿರಬೇಕು. ಇಲ್ಲವಾದಲ್ಲಿ ಹಣವನ್ನು ಅವರ ಖಾತೆಗೆ ಜಮಾ ಮಾಡುವುದಿಲ್ಲ ಎಂಬ ಅಧಿಕಾರಿಗಳ ಹೊಸ ಆದೇಶ ಪೀಡಿತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಧಿಕಾರಿಗಳ ಈ ಧೋರಣೆಯಿಂದ ಇದುವರೆಗೂ ಕೇವಲ ಶೇ.30ರಷ್ಟು ಎಂಡೋಸಲ್ಫಾನ್ ಪೀಡಿತರಿಗೆ ಹಣ ತಲುಪಿದೆ.
ಇತ್ತ ಮತ್ತೊಂದು ಖಾತೆ ಮಾಡಿಸಬೇಕೆಂದಲ್ಲಿ ಹಾಗೂ ಹಣ ತರಲು ಹತ್ತಾರು ಮೈಲಿ ದೂರ ಹೋಗಬೇಕು. ಹತ್ತಿರವಿರುವ ಹಾಗೂ ನಮ್ಮ ಖಾತೆ ಇರುವ ಬ್ಯಾಂಕ್‌ಗೆ ಹಣ ಜಮಾ ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬದವರ ಮನವಿ. ಆದರೆ, ಸರ್ಕಾರಿ ಕಚೇರಿಗಳ ವಹಿವಾಟು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಡೆಯುವುದರಿಂದ ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ಇರುವವರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಸಂತ್ರಸ್ತರ ಲೆಕ್ಕವಿಲ್ಲ: ಆರೋಗ್ಯ ಇಲಾಖೆ ಪ್ರಕಾರ ರಾಯಚೂರು, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದಲ್ಲಿ 6079ಕ್ಕೂ ಅಧಿಕ ಎಂಡೋಸಲ್ಫಾನ್ ಪೀಡಿತರಿದ್ದು, ಅವರಿಗೆಲ್ಲ ಮಾಸಾಶನ ನೀಡಲು ಇಲಾಖೆ ಸೂಚಿಸಿದೆ. ಸದ್ಯ ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸಮೀಕ್ಷೆ ಅಪೂರ್ಣವಾಗಿರುವ ಕಾರಣ ಮತ್ತು ಅಲ್ಲಿ ಸಮೀಕ್ಷೆ ನಡೆಸುತ್ತಿರುವ ಕಾರಣ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಹಾಗಾಗಿ ಸ್ಮಾರ್ಟ್ ಕಾರ್ಡ್ ಇರುವವರಿಗೆ ಮಾತ್ರ ಹಣ ಜಮಾ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಉಳಿದವರಿಗೆ ಹಣ ಜಮಾ ಮಾಡುವ ವಿಷಯ ಗೊಂದಲವಾಗಿ ಪರಿಣಮಿಸಿದೆ ಎನ್ನುತ್ತಾರೆ ಅಧಿಕಾರಿಗಳು.
ಹಣ ವಾಪಸ್‌ಗೆ ಅರ್ಜಿ: ಎಂಡೋಸಲ್ಫಾನ್ ಪೀಡಿತರಲ್ಲದಿದ್ದಲ್ಲಿ ಮಾಸಾಶವನ್ನು ವಾಪಸ್ ನೀಡುತ್ತೇವೆ ಎಂದು ಮಾಸಾಶನ ಪಡೆಯುವ ಪ್ರತಿಯೊಬ್ಬರಿಂದಲೂ ಆರೋಗ್ಯ ಇಲಾಖೆ ಅಧಿಕಾರಿಗಳು ಮುಚ್ಚಳಿಕೆ ಬರೆಸಿಕೊಂಡು ಸಹಿ ಹಾಕಿಸಿ ಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಈ ರೀತಿಯ ಮುಚ್ಚಳಿಕೆ ಬರೆಸಿಕೊಳ್ಳಲು ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಅಲ್ಲದೆ, ಅವರು ಕೊಡುವ ರು. 3 ಸಾವಿರ ಹಣ ಅವರ ಆಸ್ಪತ್ರೆ ಹಾಗೂ ಔಷಧಕ್ಕೆ ಸಾಲುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಮಾಸಾಶನ ಹೆಚ್ಚಿಸುವ ಬದಲು ಅಧಿಕಾರಿಗಳು ನೊಂದವರಿಗೆ ಮತ್ತಷ್ಟು ಅವಮಾನ ಮಾಡುತ್ತಿದ್ದಾರೆ.
ಈ ನಡುವೆ ಎಂಡೋಸಲ್ಫಾನ್‌ನಿಂದ ಬಂಜೆತನ, ಕಿವುಡುತನ ಸೇರಿದಂತೆ ವಿವಿಧ ತೊಂದರೆ ಎದುರಿಸುತ್ತಿರುವವರಿಗೂ ಮಾಸಾಶನ ನೀಡಬೇಕು ಎಂಬ ಸಂತ್ರಸ್ತರ ಕೂಗಿಗೆ ಸರ್ಕಾರ ಕಿವಿಕೊಟ್ಟಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ತಾತ್ಕಾಲಿಕ ಮಾಸಾಶನ
ಅಂಗವೈಕಲ್ಯ ಸೇರಿ ವಿವಿಧ ತೊಂದರೆ ಎದುರಿಸುತ್ತಿರುವ ಎಂಡೋಸಲ್ಫಾನ್ ಪೀಡಿತರು ನಿಜಕ್ಕೂ ಎಂಡೋಸಲ್ಫಾನ್ ಪೀಡಿತರೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಸಂಬಂಧ ವಿಜ್ಞಾನಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ. ಒಂದು ವೇಳೆ ಇದು ಎಂಡೋಸಲ್ಫಾನ್‌ನಿಂದ ಬಂದಿಲ್ಲ ಎಂದಾದಲ್ಲಿ ಮಾಸಾಶನ ತಡೆಹಿಡಿಯಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ನೊಂದವರಿಗೆ ನ್ಯಾಯಯುವತವಾಗಿ ಹಣ ನೀಡಬೇಕಾದ ಸರ್ಕಾರ ಕೊಡುವ ಮೂರು ಸಾವಿರವನ್ನು ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಒಪ್ಪಿಸಿದೆ. ಎರಡೂ ಇಲಾಖೆಗಳೂ ಅರ್ಧರ್ಧ ಹಣ ನೀಡುತ್ತವೆ. ಈ ನಡುವೆ ಬ್ಯಾಂಕ್‌ನ ತಕರಾರು ಅಧಿಕಾರಿಗಳದ್ದು.
- ಶ್ರೀಧರ್ ಕೊಕ್ಕಡ, ಎಂಡೋಸಲ್ಫಾನ್ ಪೀಡಿತ ಹೋರಾಟಗಾರರ ಸಂಘದ ಅಧ್ಯಕ್ಷ
ನ್ಯಾಯಾಲಯದ ಆದೇಶದಂತೆ ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನ ನೀಡಲು ಸಂಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಇಂತಹ ಸಂತ್ರಸ್ತರು ಇಂತಹುದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು ಎಂಬ ನಿಯಮವಿಲ್ಲ. ಹತ್ತಿರದ ಬ್ಯಾಂಕ್‌ನಲ್ಲಿ ಖಾತೆ ಇರಬೇಕು.
-ಗೀತಾ ನ್ಯಾಮೇಗೌಡರ್, ನಿರ್ದೇಶಕರು, ಆರೋಗ್ಯ ಇಲಾಖೆ


-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement