ಜೀವನಸಂಗಾತಿ ಆಯ್ಕೆ ಮೂಲಭೂತ ಹಕ್ಕು: ದೆಹಲಿ ಹೈಕೋರ್ಟ್ ಅಭಿಮತ
ನವದೆಹಲಿ: ತನ್ನ ಇಚ್ಛೆಯಂತೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಇದು ವ್ಯಕ್ತಿಯ ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗ.
ಹೀಗೆಂದು ಹೇಳಿರುವುದು ದೆಹಲಿ ಹೈಕೋರ್ಟ್. ಬುಧವಾರ 2002ರ ನಿತೀಶ್ ಕಟಾರಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಉತ್ತರಪ್ರದೇಶದ ರಾಜಕಾರಣಿ ಡಿ.ಪಿ. ಯಾದವ್ ಪುತ್ರ ವಿಕಾಸ್ ಯಾದವ್ ಸೇರಿದಂತೆ ಕಟಾರಿಯಾ ಕೊಲೆ ಪ್ರಕರಣದ ಎಲ್ಲ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 2008ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿಯಿತು.
ಕಟಾರಿಯಾ ಹತ್ಯೆಯು ಮರ್ಯಾದಾ ಹತ್ಯೆಯ ವ್ಯಾಪ್ತಿಗೆ ಬರುತ್ತದೆ ಎಂದ ಕೋರ್ಟ್, ಸಮಾಜದ ಉನ್ನತ ಸ್ತರದಲ್ಲೂ ಇಂತಹ ಜಾತಿ ವ್ಯವಸ್ಥೆ, ಮರ್ಯಾದಾ ಹತ್ಯೆಗಳು ನಡೆಯುತ್ತಿರುವುದು ವಿಷಾದನೀಯ ಎಂದಿತು. ವ್ಯಕ್ತಿಯೊಬ್ಬನ ಜೀವನ ಸಂಗಾತಿಯ ಆಯ್ಕೆ ಹಾಗೂ ಮದುವೆ ಸಂವಿಧಾನ ನೀಡುವ ಜೀವಿಸುವ ಹಕ್ಕಿನಲ್ಲಿರುವ ಅವಿಭಾಜ್ಯ ಅಂಗಗಳು. ಹೀಗಾಗಿ ಸಂಗಾತಿಯ ಆಯ್ಕೆಯೂ ಆತನ ಮೂಲಭೂತ ಹಕ್ಕಾಗುತ್ತದೆ ಎಂದಿತು ಕೋರ್ಟ್.