ಮೈಸೂರು ಮೃಗಾಲಯದ ಗೋರಿಲ್ಲಾ ಆರೋಗ್ಯ ಕ್ಷೀಣ
ಮೈಸೂರು: ಮೈಸೂರಿನ ಮೃಗಾಲಯದಲ್ಲಿರುವ 41 ವರ್ಷದ ಪೋಲೋ (ಗೋರಿಲ್ಲಾ) ಕಳೆದ ಒಂದು ವಾರದಿಂದ ತನ್ನ ಆಹಾರ ಸೇವನೆಯನ್ನು ಕಡಿಮೆಗೊಳಿಸುತ್ತಾ ಬಂದಿದ್ದು, ದಿನೇ ದಿನೇ ಆರೋಗ್ಯ ಕ್ಷಿಣಿಸುತ್ತಿದೆ. ಪೋಲೋ ಹೆಚ್ಚಿನ ಚಟುವಟಿಕೆಯಿಂದ ಇಲ್ಲದೆ ತನ್ನ ಕೊಠಡಿಯೊಳಗೆ ಇರಲು ಬಯಸುತ್ತಿದ್ದಾನೆ. ನೀರು ಹೆಚ್ಚಾಗಿರುವ ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ಸ್ವಲ್ಪ ಸಮಯ ವಾಯು ವಿಹಾರಕ್ಕೆ ಬರುತ್ತಾನೆ. ಅವನ ವೈದ್ಯೋಪಚಾರವನ್ನು ಬೆಂಗಳೂರಿನ ಪಶುವೈದ್ಯ ಕಾಲೇಜಿನ ಮುಖ್ಯಸ್ಥ ಡಾ.ಯತಿರಾಜ್ ನೋಡಿಕೊಳ್ಳುತ್ತಿದ್ದಾರೆ. ಅವರ ಸಲಹೆಯಂತೆ ಪ್ರಾಣಿಗೆ ಈಗಾಗಲೇ ಪಾಲಿಬಿಯಾನ್ ಸಿರಪ್ ನೀಡಲಾಗುತ್ತಿದೆ. ಆದಾಗ್ಯೂ ಪ್ರಾಣಿಯ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಈಗ ಮೃಗಾಲಯದ ಪಶುವೈದ್ಯಾಧಿಕಾರಿ ಡಾ.ಜೆ. ಸುಂದರರಾಜ್ ನೋಡಿಕೊಳ್ಳುತ್ತಿದ್ದಾರೆ.
ಪೋಲೋವನ್ನು 1973ರಲ್ಲಿ ಲೀಪ್ಜಿಗ್ ಮೃಗಾಲಯಕ್ಕೆ ತರಲಾಗಿತ್ತು. 1992 ರವರೆಗೆ ಲೀಫ್ಜಿಗ್ ಮೃಗಾಯಲದಲ್ಲಿದ್ದ ಪೋಲೋನನ್ನು ಡಬ್ಲಿನ್ ಮೃಗಾಲಯಕ್ಕೆ ನೀಡಲಾಗಿತ್ತು. ಇಇಪಿ ಸಂಸ್ಥೆ ಶಿಫಾರಸಿನಂತೆ ಡಬ್ಲಿನ್ ಮೃಗಾಲಯದವರು ಅದನ್ನು ಮೈಸೂರು ಮೃಗಾಲಯಕ್ಕೆ 1995 ರಲ್ಲಿ ನೀಡಿದರು.