ನಿನ್ನೆ ವಿಷವಾದ ಇಂದು ವಿಷಾದ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ...
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ 'ದೇವೇಗೌಡರು ನೂರ್ಕಾಲ ಬಾಳಲಿ' ಎಂದು ಹಾರೈಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆಯ ಕನ್ನಡ ಅವತರಣಿಕೆ 'ನಿಮ್ಮ ಧ್ವನಿ, ನಮ್ಮ ಪ್ರತಿಜ್ಞೆ' ಬಿಡುಗಡೆಗೊಳಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದ್ದಾರೆ.
ನಾನು ದೇವೇಗೌಡರ ವಿರುದ್ಧ ಕಟುವಾದ ಶಬ್ದಗಳನ್ನು ಬಳಸಿಲ್ಲ. ಹಿಂದಿನ ಚುನಾವಣೆ ಸಂದರ್ಭದಲ್ಲಿ ಅವರೇ ನೀಡಿದ್ದ ಹೇಳಿಕೆ ಜನರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇದೆ ಎಂದಿದ್ದೆ. ಆದರೆ ಮಾತಿನ ಬರದಲ್ಲಿ ವ್ಯಂಗ್ಯ ಮಾಡುವಾಗ ಈ ರೀತಿ ಹೇಳಿದ್ದೇನೆಯೇ ವಿನಾ, ದೇವೇಗೌಡರ ಮೇಲಿನ ಅಗೌರವದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಮೊದಲಿನಿಂದಲೂ ದೇವೇಗೌಡರ ಬಗ್ಗೆ ಗೌರವ ಹೊಂದಿದ್ದೇನೆ. ದೇಶದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ ಮೊದಲ ಕನ್ನಡಿಗರು ಎಂಬ ಗೌರವ ನನಗಿದೆ. ನಾನು ಕೆಟ್ಟದೃಷ್ಟಿಯಿಂದ ಈ ಹೇಳಿಕೆ ನೀಡಿಲ್ಲ. ಇದಕ್ಕಾಗಿ ನಾನು ಅವರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಮಾತ್ರವಲ್ಲ ದೇವೇಗೌಡರು ನೂರು ಕಾಲ ಬಾಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ನಾನು ಈ ಹೇಳಿಕೆಯನ್ನು ನೀಡಿದ ನಂತರ ಮಾಧ್ಯಮಗಳಲ್ಲಿ ವ್ಯಕ್ತವಾದ ಟೀಕೆಗಳನ್ನು ಗಮನಿಸಿದ್ದೇನೆ. ಅಷ್ಟು ಮಾತ್ರವಲ್ಲ ನನ್ನನ್ನು ತಿದ್ದಿಕೊಳ್ಳುತ್ತೇನೆ. ನಾನು ಮೊದಲಿನಿಂದಲೂ ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಸ್ವಯಂ ನಿಯಂತ್ರಣ ಬೇಕು ಎಂದು ಪ್ರತಿಪಾದಿಸುತ್ತಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಆರ್ಎಸ್ಎಸ್ ಹೊಗಳಿಲ್ಲ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಆರ್ಎಸ್ಎಸ್ನ್ನು ಹೊಗಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅವರು ಹೊಗಳಿಲ್ಲ. ಚುನಾವಣೆ ಸಂದರ್ಭದಲ್ಲಿ ಅವರು ಮಾಡುವ ಕೆಲಸವನ್ನು ನಾವು ಕಲಿತುಕೊಳ್ಳಬೇಕು ಎಂದಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಎಂದರು.
ಅದೇ ರೀತಿ ರೈತ ವಿಠಲ ಅರಬಾವಿ ಅವರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.
ರಾಹುಲ್ ಆಗಮನ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಏಪ್ರಿಲ್ 4ಕ್ಕೆ ಬಳ್ಳಾರಿ ಮತ್ತು ಮಂಗಳೂರಿಗೆ ಆಗಮಿಸಲಿದ್ದಾರೆ. ಏಪ್ರಿಲ್ 7ರಂದು ಚಿಕ್ಕೋಡಿ ಮತ್ತು ರಾಯಚೂರಿನಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಭಾಗವಹಿಸುವರು. ಅದೇ ದಿನ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಮೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಅವರು ಮಾತನಾಡಲಿದ್ದಾರೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಏ 8ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಕೋಲಾರ ಮತ್ತು ಧಾರವಾಡದಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಹಿರಿಯ ಮುಖಂಡ ಜಾಫರ್ ಷರೀಫ್ ಮೆಕ್ಕಾ ಯಾತ್ರೆ ಮುಗಿಸಿ ವಾಪಸ್ ಆಗಿದ್ದಾರೆ. ಅವರು ನನಗೆ ಇದುವರೆಗೆ ರಾಜಿನಾಮೆ ಪತ್ರ ಕಳುಹಿಸಿಲ್ಲ. ಅವರು ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಕಾರ್ಯದರ್ಶಿಗಳಾದ ಜಿ.ಸಿ. ಚಂದ್ರಶೇಖರ್, ಹುಸೇನ್, ಮಾಜಿ ಸಚಿವೆ ರಾಣಿ ಸತೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಆರ್. ಸುದರ್ಶನ ಉಪಸ್ಥಿತರಿದ್ದರು.