ಬಿಜೆಪಿ ಭರವಸೆಯ ಪಟ್ಟಿ ಇನ್ನೂ ಲೇಟು
ಪಕ್ಷದ ನಾಯಕರು ನಾನಾ ಕಾರಣ ಕೊಟ್ರು; ಅತಿವಿಶ್ವಾಸಕ್ಕೆ ವಿಪಕ್ಷಗಳಿಂದ ಮಾತಿನೇಟು
ನವದೆಹಲಿ: ಲೋಕ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿರುವ ಬಿಜೆಪಿ, ಪ್ರಣಾಳಿಕೆ ರಚನೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ.
ಗುರುವಾರವೇ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತಾದರೂ, 'ಹಿರಿ-ಕಿರಿ'ಯರ ಕದನಕ್ಕೆ ಸಿಕ್ಕು ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಈಗಾಗಲೇ ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆಯಾದರೂ, ಮೋದಿ ತಂಡದ ಮಧ್ಯ ಪ್ರವೇಶದಿಂದ ಬಿಡುಗಡೆಗೆ ತಡೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಪ್ರಣಾಳಿಕೆಯನ್ನು 60 ಪುಟಗಳಷ್ಟು ಮಾಡಲಾಗಿದೆ. ಇದನ್ನು 30 ಪುಟಕ್ಕೆ ಇಳಿಸಲು ಮೋದಿ ತಂಡ ತಯಾರಿ ನಡೆಸಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಬಿಜೆಪಿ ಇಷ್ಟು ತಡವಾಗಿ ಪ್ರಣಾಳಿಕೆ ಸಿದ್ಧಪಡಿಸಿದೆ!
ಆಡ್ವಾಣಿ - ಮೋದಿ
ಶನಿವಾರ ಗಾಂಧಿನಗರ ಕ್ಷೇತ್ರದಲ್ಲಿ ಎಲ್.ಕೆ. ಆಡ್ವಾಣಿ ಅವರು ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮುನ್ನ ನಡೆಯುವ ಪ್ರಚಾರ ಸಭೆಯಲ್ಲಿ ಮೋದಿ - ಆಡ್ವಾಣಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಭರ್ಜರಿ ಸಮಾವೇಶಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಪ್ರಿಯಾಂಕಾ ಬರ್ತಾರಾ?
ಸಕ್ರಿಯ ರಾಜಕಾರಣಕ್ಕೆ ಬರಲು ಪ್ರಿಯಾಂಕಾ ವಾದ್ರಾ ಚಿಂತನೆ ನಡೆಸುತ್ತಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ದ್ವಿವೇದಿ ಸುಳಿವು ನೀಡಿದ್ದಾರೆ.
ಪ್ರಣಾಳಿಕೆಗೆ ಮೋದಿ ಅಡ್ಡಿ
ತಮ್ಮ ತಂಡದ ಅಂಶಗಳನ್ನು ಸೇರಿಸುವ ಸಲುವಾಗಿ ಮೋದಿ ಪ್ರಣಾಳಿಕೆಗಳನ್ನು ಬದಲಿಸಲು ಹೊರಟಿದ್ದಾರೆ. ಹೀಗಾಗಿಯೇ ಭರವಸೆ ಪಟ್ಟಿಗೆ ತಡೆ ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ ಮುರಳಿ ಮನೋಹರ ಜೋಶಿ ಸೇರಿ ಹಿರಿಯ ನಾಯಕರು ಪ್ರಚಾರದಲ್ಲಿ ಬಿಜಿಯಾಗಿರುವ ಕಾರಣ ಪ್ರಣಾಳಿಕೆ ಬಿಡುಗಡೆಯಾಗಿಲ್ಲ ಎನ್ನುವುದು ಇನ್ನೊಂದು ಸುದ್ದಿ. 'ಚುನಾವಣೆ ಆರಂಭಕ್ಕೆ ಇರುವುದು ಇನ್ನು ನಾಲ್ಕೇ ದಿನ. ಮೊದಲ ಹಂತದ ಚುನಾವಣೆ ದಿನವೇ ಬಿಜೆಪಿ ಭರವಸೆಗಳ ಪಟ್ಟಿ ಬಿಡುಗಡೆಗೊಳಿಸಲಿದೆ.
ಆಯೋಗಕ್ಕೆ ದೂರು
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತು ಜಾಮಾ ಮಸೀದಿಯ ಇಮಾಮ್ ಸಯೀದ್ ಅಹಮದ್ ಬುಖಾರಿ ನಡುವಿನ ಭೇಟಿ ಸಂಬಂಧ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಅಲ್ಪಸಂಖ್ಯಾತ ಮತಗಳು ಇಬ್ಭಾಗವಾಗದಂತೆ ಎಚ್ಚರವಹಿಸಿ ಎಂದು ಸೋನಿಯಾ ಭೇಟಿ ವೇಳೆ ಹೇಳಿದ್ದರು. ಇದಕ್ಕೆ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕೆ ಮಾಡಿದ್ದರು.
ಡಬ್ಬಲ್ ಕೈ ಮುರಿತ
ಕಾಂಗ್ರೆಸ್ ಪಾಲಿಗೆ ಗುರುವಾರ ದುರಾದೃಷ್ಟದ ದಿನ. ಕೇಂದ್ರ ಜವಳಿ ಖಾತೆ ಸಚಿವ ಕೆ. ಸಾಂಬಶಿವರಾವ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಆಂಧ್ರ ವಿಭಜನೆ ಸಂದರ್ಭ ಕಾಂಗ್ರೆಸ್ ನಿರ್ವಹಣೆ ಸರಿಇಲ್ಲ ಎಂಬುದು ಪಕ್ಷ ಬಿಟ್ಟ ವೇಳೆಯ ಹೇಳಿಕೆ.
ಟಿಕೆಟ್ ಗಿಟ್ಟಿಸಿ ಬಿಟ್ಟರು: ಉತ್ತರ ಪ್ರದೇಶದಲ್ಲೂ ಶಿವಾನಂದನಾಯ್ಕ ಪ್ರಕರಣ ದಾಖಲಾಗಿದೆ! ಗೌತಮಬುದ್ಧ ನಗರದ ಕಾಂಗ್ರೆಸ್ ಅಭ್ಯರ್ಥಿ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಶರ್ಮಾಗೆ ಬೆಂಬಲ ಸೂಚಿಸಿದ್ದಾರೆ. ವಿಚಿತ್ರವೆಂದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ.
ಟಿ ಪೋಸ್ಟರ್ ಗಲಾಟೆ
ವಡೋದರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಮಧುಸೂದನ್ ಮಿಸ್ತ್ರಿ ಪೋಸ್ಟರ್ಗಾಗಿ ಗಲಾಟೆ ಮಾಡಿದ್ದಾರೆ. ಮೋದಿ ಪೋಸ್ಟರ್ ತೆಗೆದು ತಮ್ಮ ಪೋಸ್ಟರ್ ಹಾಕಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.
ನನಗೆ ಆಡಳಿತ ಮತ್ತು ನಿರ್ವಹಣೆಯಲ್ಲಿ ಅಪಾರ ಅನುಭವವಿದೆ ಎಂದ ಪಕ್ಷ ಮತ್ತು ಪಕ್ಷದ ನಾಯಕರಿಗೆ ಇನ್ನೂ ಚುನಾವಣಾ ಪ್ರಣಾಳಿಕೆ ಹೊರತರಲು ಸಾಧ್ಯವಾಗಿಲ್ಲ.
- ಪ್ರಿಯಾಂಕ್ ಚತುರ್ವೇದಿ, ಕಾಂಗ್ರೆಸ್ ವಕ್ತಾರ