ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬುದ್ಧಿ ಪ್ರಶ್ನಿಸಿದ್ದಕ್ಕೆ ಎದ್ದು ಹೋದ ಜೀವಿಗಳು!

ರಾಜ್ಯದಲ್ಲಿ ಇತರೆ ಪಕ್ಷಗಳಿದ್ದರೂ ಕಾಂಗ್ರೆಸ್ ಪರವಾಗಿಯೇ ನಿಮ್ಮ ಪ್ರಚಾರವೇಕೆ? ಕಾಂಗ್ರೆಸ್ ಪರ ಭಟ್ಟಂಗಿತನವೇ? ಕಾರ್ನಾಡರು ನಿಲೇಕಣಿ...

Rashmi Kasaragodu
Updated On : 4 Apr 2014, 1:07 am

ಬೆಂಗಳೂರು: ರಾಜ್ಯದಲ್ಲಿ ಇತರೆ ಪಕ್ಷಗಳಿದ್ದರೂ ಕಾಂಗ್ರೆಸ್ ಪರವಾಗಿಯೇ ನಿಮ್ಮ ಪ್ರಚಾರವೇಕೆ? ಕಾಂಗ್ರೆಸ್ ಪರ ಭಟ್ಟಂಗಿತನವೇ? ಕಾರ್ನಾಡರು ನಿಲೇಕಣಿ ಪರ ಪ್ರಚಾರಕ್ಕಿಳಿದಿರುವುದು ಸ್ವಜಾತಿ ಪ್ರೇಮದಿಂದಲೇ?
ಬೆಂಗಳೂರು ದಕ್ಷಿಣ ಹಾಗೂ ಉತ್ತರ ಸೇರಿ ಹಲವೆಡೆ ಕಾಂಗ್ರೆಸ್ ಪರ ಬಹಿರಂಗ ಪ್ರಚಾರಕ್ಕಿಳಿದಿರುವ ಸಾಹಿತಿ ಯು.ಆರ್. ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರಸಾಹಿತಿಗಳ ತಂಡ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಂದ ಇರುಸುಮುರುಸಿಗೆ ಒಳಗಾಗಿದ್ದಲ್ಲದೇ, ಸಿಟ್ಟಾಗಿ ಎದ್ದು ಹೋದ ಪ್ರಸಂಗ ನಡೆಯಿತು.
ಆರಂಭದಲ್ಲಿ ಮಾತನಾಡಿದ ಕಾರ್ನಾಡ್, ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಕೊಡುಗೆ ಏನೂ ಇಲ್ಲ. ಅವರ ಸಾಧನೆ ಉತ್ತರ ಕುಮಾರನ ಪೌರುಷ. ನಿಲೇಕಣಿ, ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಅಂಥವರು ರಾಜಕೀಯಕ್ಕೆ ಬರಬೇಕಿದೆ ಎಂದರು.
ಈ ಹಂತದಲ್ಲಿ ಪತ್ರಕರ್ತರಿಂದ ಪ್ರಶ್ನೆಗಳು ತೂರಿ ಬಂದವು. ನಿಲೇಕಣಿ ಪರ ಪ್ರಚಾರಕ್ಕಿಳಿದಿರುವುದು ಸ್ವಜಾತಿ ಪ್ರೇಮವೇ ಎಂಬುದಕ್ಕೆ ಕಾರ್ನಾಡ್ ಮುಖ ಕೆಂಪು ಮಾಡಿ, 'ನನ್ನ ಜೀವನದಲ್ಲಿ ಜಾತಿ ನೋಡಿಲ್ಲ. ಅಂಥ ಮೋಹ ನನಗಿಲ್ಲ'ಎನ್ನುವಷ್ಟರಲ್ಲಿ ಸುಸ್ತಾದರು.
ಅಮ್ ಆದ್ಮಿ ಸೇರಿ ಇತರೆ ಪಕ್ಷಗಳಿದ್ದರೂ ಕಾಂಗ್ರೆಸ್ ಪರವೇ ಪ್ರಚಾರವೇಕೆ? ಇದು ಕಾಂಗ್ರೆಸ್ನ ಭಟ್ಟಂಗಿ ತನವಲ್ಲವೇ? ಎಂಬ ಪ್ರಶ್ನೆಗೆ ಅನಂತಮೂರ್ತಿ ತಡಬಡಿಸಿದರು. ಸಾಹಿತಿ ಡಾ. ಮರುಳಸಿದ್ದಪ್ಪ ಮಧ್ಯಪ್ರವೇಶಿಸಿ, ಹಾಗಾದರೆ, ಮೋದಿ ವೈಭವೀಕರಿಸುತ್ತಿರುವವರು ಯಾರು ಎಂದುಆಕ್ರೋಶ ವ್ಯಕ್ತಪಡಿಸಿದರು. ಕೇವಲ ಆರೆಸ್ಸೆಸ್ ಪುಸ್ತಕಗಳನ್ನು ಓದಿಕೊಂಡವರು ಈ ರೀತಿ ಪ್ರಶ್ನಿಸಬಲ್ಲರು ಎಂದು ಮೂರ್ತಿ ಸಿಟ್ಟಾದರು. ನಿಮ್ಮದೇ ಪುಸ್ತಕಗಳನ್ನು ಓದಿಯೇ ನಿಮ್ಮ ನಿಲುವು ಪ್ರಶ್ನಿಸುತ್ತಿದ್ದೇವೆಂದು ಹೇಳಿದಾಗ ಮೂರ್ತಿ ಸುಮ್ಮನಾದರು. ಸಾಹಿತಿಗಳಾದ ಪ್ರೊ.ಜಿ.ಕೆ. ಗೋವಿಂದರಾವ್, ಡಾ. ವಸುಂದರಾ ಭೂಪತಿ, ಮುಖ್ಯಮಂತ್ರಿ ಚಂದ್ರು, ಎಸ್.ಜಿ. ಸಿದ್ದರಾಮಯ್ಯ, ಮಾವಳ್ಳಿ ಶಂಕರ್ ಹಾಜರಿದ್ದರು.


ಮೋದಿ ಒಬ್ಬ ಸರ್ವಾಧಿಕಾರಿ. ಆತ ಅಧಿಕಾರಕ್ಕೆ ಬಂದರೆ ದೇಶದ ನಾಗರಿಕತೆಯೇ ನಾಶವಾಗುವ ಭಯ ಇದೆ. ನಾವ್ಯಾರೂ ಕಾಂಗ್ರೆಸ್ ಸದಸ್ಯರಲ್ಲ. ಸ್ವಜಾತಿ ಪ್ರೇಮಿಗಳೂ ಅಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ಮೋದಿಯಂಥ ಏಕ ವ್ಯಕಿ,್ತ ಏಕ ಧರ್ಮ, ಏಕ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿರುವ ವ್ಯಕ್ತಿ ಪ್ರಧಾನಿಯಾಗಬಾರದು.
-ಸಾಹಿತಿ ಯು.ಆರ್. ಅನಂತಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement