ಆಪರೇಷನ್ ಜನ್ಮಭೂಮಿ
ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸದ ವೇಳೆ ಹಿಂದೆ ನಿಂತು ತೆರೆ ಎಳೆದವರಾರು?
ಬಾಬ್ರಿ ಮಸೀದಿ ಧ್ವಂಸಕ್ಕೆಂದು ತಿಂಗಳ ಮೊದಲೇ ನೀಡಲಾಗಿತ್ತು ತರಬೇತಿ; ಮೊದಲ ಯೋಜನೆ ವಿಫಲವಾದ್ರೆ, ಡೈನಮೈಟ್ ಇಟ್ಟು ಸ್ಫೋಟಿಸುವ ಪ್ಲ್ಯಾನ್
ನವದೆಹಲಿ: ಡಿ.6, 1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸದ ವೇಳೆ ಹಿಂದೆ ನಿಂತು ತೆರೆ ಎಳೆದವರಾರು? ವರ್ಷಾನುಗಟ್ಟಲೆ ತನಿಖೆ ನಡೆಸಿದರೂ ಸಿಬಿಐಗೆ ಈ ಜಾಲವನ್ನು ಬೇಧಿಸಲು ಸಾಧ್ಯವಾಗಲಿಲ್ಲ ಏಕೆ ಎಂಬೆಲ್ಲ ವಿಷಯಗಳನ್ನೂ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ 'ಆಪರೇಷನ್ ಜನ್ಮಭೂಮಿ' ವರದಿ ಬಹಿರಂಗಪಡಿಸಿದೆ. ವರದಿಯಲ್ಲಿರುವ ಕೆಲ ಅಂಶಗಳನ್ನು ಹಾಗೂ ಸಂದರ್ಶನದಲ್ಲಿ ಪಾಲ್ಗೊಂಡವರು ಹೇಳಿರುವ ಮಾತನ್ನು ಇಲ್ಲಿ ನೀಡಲಾಗಿದೆ.
ತರಬೇತಿ, ಆತ್ಮಾಹುತಿ ದಳವೂ ಸಿದ್ಧ: ಸಂದರ್ಶನ ನೀಡಿರುವ 23 ಮಂದಿಯಲ್ಲಿ ಬಜರಂಗದಳ-ವಿಎಚ್ಪಿ-ಬಿಜೆಪಿಯ 12 ಮಂದಿ, ಶಿವಸೇನೆಯ 5 ಮಂದಿ ಹಾಗೂ ಇತರರು ಹಿಂದೂ ಧಾರ್ಮಿಕ ಸಂಸ್ಥೆಗೆ ಸೇರಿದವರು. ಬಾಬ್ರಿ ಮಸೀದಿ ಧ್ವಂಸ ಮಾಡುವ ತಿಂಗಳಿಗೂ ಮೊದಲೇ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿತ್ತು. ಅಷ್ಟೇ ಅಲ್ಲ ತರಬೇತಿ ಪಡೆದ ಆರೆಸ್ಸೆಸ್ ಕಾರ್ಯಕರ್ತರ ಆತ್ಮಾಹುತಿ ದಳವನ್ನೂ ಸಿದ್ಧಪಡಿಸಲಾಗಿತ್ತು ಎಂದು ಕೋಬ್ರಾಪೋಸ್ಟ್ ತಿಳಿಸಿದೆ. ಬಜರಂಗದಳದ ಕಾರ್ಯಕರ್ತರು ಗುಜರಾತ್ನ ಸುರ್ಕೇಜ್ನಲ್ಲಿ ಹಾಗೂ ಶಿವಸೇನೆಯ ಕಾರ್ಯಕರ್ತರು ಭಿಂಡ್-ಮೊರೇನಾದಲ್ಲಿ ತರಬೇತಿ ಪಡೆದಿದ್ದರು. ವಿಎಚ್ಪಿಯ 1200 ಕಾರ್ಯಕರ್ತರಿಗೆ 'ಲಕ್ಷ್ಮಣ ಸೇನಾ' ಎಂದು ಹೆಸರಿಸಲಾಗಿತ್ತು. ಇದರ ರಹಸ್ಯ ಹೆಸರು 'ಜೈ ಶೇಷಾವತಾರ್' ಎಂದಾಗಿತ್ತು. ಅಯೋಧ್ಯೆಯ ಸ್ಥಳೀಯರನ್ನೊಳಗೊಂಡ ಗುಂಪಿಗೆ 'ಪ್ರತಾಪ್ ಸೇನಾ' ಎಂದು ಹೆಸರಿಡಲಾಗಿತ್ತು. 38 ಮಂದಿ ಬಜರಂಗದಳ ಕಾರ್ಯಕರ್ತರಿಗೆ ನಿವೃತ್ತ ಸೇನಾ ಅಧಿಕಾರಿಗಳಿಂದ ತರಬೇತಿ ನೀಡಲಾಗಿತ್ತು. ಎಷ್ಟೇ ಹಿರಿಯ, ಗೌರವಯುತ ನಾಯಕರಾದರೂ ಅವರ ಮಾತಿಗೆ ಬೆಲೆಕೊಡದೆ ಮಸೀದಿ ಧ್ವಂಸ ಕಾರ್ಯ ಮುಗಿಸಬೇಕು ಎಂದು ಮೊದಲೇ ಸೂಚನೆ ನೀಡಲಾಗಿತ್ತು. ಶಿವಸೇನೆಯ ಬಾಳಾ ಠಾಕ್ರೆ, ರಾಜ್ ಠಾಕ್ರೆ, ಸತೀಶ್ ಪ್ರಧಾನ್, ಮೋರೇಶ್ವರ್ ಸಾವೆ ಮತ್ತಿತರರು ಕಾರ್ಯಕರ್ತರ ತರಬೇತಿಯ ಮೇಲೆ ನಿಗಾ ಇಟ್ಟಿದ್ದರು.
ರೆಡಿಯಾಗಿತ್ತು ಬಿ ಪ್ಲ್ಯಾನ್: ಒಂದು ವೇಳೆ ಮಸೀದಿ ಧ್ವಂಸ ಯೋಜನೆ ವಿಫಲವಾದರೆ ಏನು ಮಾಡಬೇಕು ಎಂಬುದನ್ನೂ ಮೊದಲೇ ಯೋಜಿಸಲಾಗಿತ್ತು. ಅದೇನೆಂದರೆ, ಡೈನಮೈಟ್ ಇಟ್ಟು ಮಸೀದಿಯನ್ನು ಸ್ಫೋಟಿಸುವುದು. ಡೈನಮೈಟ್ ಸ್ಫೋಟವೂ ಸಾಧ್ಯವಾಗದಿದ್ದರೆ ಪೆಟ್ರೋಲ್ ಬಾಂಬ್ ಬಳಸಿ ಮಸೀದಿ ಧ್ವಂಸ ಮಾಡಲು ಚಿಂತಿಸಲಾಗಿತ್ತು. ಬಜರಂಗದಳದ ಬಿಹಾರ ಘಟಕ ಈ ಅಪಾಯಕಾರಿ ಕೆಲಸಕ್ಕೆ ಮುಂದಾಗಿತ್ತು. ಧ್ವಂಸಕ್ಕೂ ಮುನ್ನ ಎಲ್ಲ ರಾಮಭಕ್ತರೂ ಬಾಬ್ರಿ ಮಸೀದಿ ಧ್ವಂಸಗೈದು, ರಾಮಮಂದಿರ ನಿರ್ಮಿಸುವ ಸಂಕಲ್ಪವನ್ನೂ ತೊಟ್ಟಿದ್ದರು.
ರಾಮ್ ಲಾಲಾ ಉದ್ಭವಿಸಲು ಹೇಗೆ ಸಾಧ್ಯ? ರಾಮನನ್ನು ಉದ್ಭವಿಸುವಂತೆ ಮಾಡಲಾಯಿತು. ಅದೆಲ್ಲ ಮಹಾರಾಜ ರಾಮಚಂದ್ರ ಪರಮಹಂಸರ ಕೈಚಳಕ. ನಾನು ಅದನ್ನು ಕಣ್ಣಾರೆ ನೋಡಿದ್ದೇನೆ. ನಾನು ವಾರಂಟ್ ಅಧಿಕಾರಿಯಾಗಿ ಸೇನಾ ಪೊಲೀಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಠಾಕೂರ್ ಗುರು ದತ್ ಸಿಂಗ್ ಮತ್ತು ನಯ್ಯರ್ ಅವರು ರಾಮವಿಗ್ರಹವನ್ನು ಪ್ರತಿಷ್ಠಾಪಿಸಲು ನೆರವಾದರು.
-ವೈಕುಂಠ್ ಲಾಲ್ ಶರ್ಮಾ, 2 ಬಾರಿಯ ಬಿಜೆಪಿ ಸಂಸದ
ಈ ಬಿಜೆಪಿ, ಆರೆಸ್ಸೆಸ್ ನಾಯಕರು ನಮ್ಮನ್ನು ಮೂರ್ಖರನ್ನಾಗಿಸಿದರು. ಮಸೀದಿ ಧ್ವಂಸಗೈಯ್ಯುವಂತೆ ಪ್ರೇರೇಪಿಸಿದರು. ಎಲ್ಲ ಕೆಲಸ ಮುಗಿದ ನಂತರ 'ತಂಬಾಕು ತಿಂದು ಉಗುಳಿದಂತೆ' ನಮ್ಮನ್ನು ಯಾರೂ ಕ್ಯಾರೇ ಮಾಡಲಿಲ್ಲ.
ಟಿ ಧರ್ಮೇಂದ್ರ ಸಿಂಗ್ ಗುರ್ಜರ್, ಬಜರಂಗದಳ ನಾಯಕ
ಧ್ವಂಸಗೈದ ಮಸೀದಿಯ ಮೇಲೆ ಧ್ವಜ ಹಾರಿಸಿದ್ದು ಕೊಠಾರಿ ಸಹೋದರರಲ್ಲ. ಅದು ಕರಸೇವಕ ವಾಸುದೇವ್ ಭಂಡಾರಿ. ನಾವು ಮಸೀದಿಯಿಂದ 500 ಮೀ. ದೂರದ ವೇದಿಕೆಯಲ್ಲಿ ನಿಂತಿದ್ದೆವು. ಮಸೀದಿ ಧ್ವಂಸಕ್ಕೆ ಯಾವುದೇ ಯೋಜನೆ ರೂಪಿಸಿರಲಿಲ್ಲ. ಅದನ್ನು ಯಾರು ಮಾಡಿದರೆಂದೂ ಇಂದಿಗೂ ಗೊತ್ತಾಗುತ್ತಿಲ್ಲ.
- ಉಮಾಭಾರತಿ, ಬಿಜೆಪಿ ಮಾಜಿ ಸಂಸದೆ