ಮಸೀದಿ ಧ್ವಂಸ: ಪೂರ್ವ ನಿಗದಿತ ಕೃತ್ಯ ಅಂದಿನ ಪಿಎಂ ರಾವ್ಗೂ ಮಾಹಿತಿ ಇತ್ತು
'1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವಯೋಜಿತ, ಉದ್ದೇಶಪೂರ್ವಕ ನಡೆದ ವಿಧ್ವಂಸಕ ಕೃತ್ಯವೇ ಹೊರತು ಉದ್ರಿಕ್ತ...
ನವದೆಹಲಿ: '1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವಯೋಜಿತ, ಉದ್ದೇಶಪೂರ್ವಕ ನಡೆದ ವಿಧ್ವಂಸಕ ಕೃತ್ಯವೇ ಹೊರತು ಉದ್ರಿಕ್ತ ಜನರ ಗುಂಪು ಮಾಡಿದ ಕೆಲಸವಲ್ಲ'. ಮೊದಲ ಹಂತದ ಮತದಾನಕ್ಕೆ ಇನ್ನು 2 ದಿನ ಬಾಕಿ ಇರುವಾಗಲೇ ಇಂಥ ವಿಷಯ ಸ್ಫೋಟಗೊಂಡಿದೆ. ಕೋಬ್ರಾಪೋಸ್ಟ್.ಕಾಂ ಕುಟುಕು ಕಾರ್ಯಾಚರಣೆ ಈ ಅಚ್ಚರಿ ವಿಚಾರ ಬಹಿರಂಗಪಡಿಸಿದೆ. ಆದರೆ ಇದು ಕಾಂಗ್ರೆಸ್ ಪ್ರೇರಿತ ಎಂದು ಬಿಜೆಪಿ ಆರೋಪಿಸಿದ್ದು, ಇದರ ಪ್ರಸಾರ ತಡೆಯುವಂತೆ ಚು.ಆಯೋಗಕ್ಕೆ ಮನವಿ ಮಾಡಿದೆ.
ಜನ್ಮಭೂಮಿ: ಕೋಬ್ರಾಪೋಸ್ಟ್ನ ಸಹಾಯಕ ಸಂಪಾದಕ ಆಶೀಶ್ 2 ವರ್ಷ 'ಆಪರೇಷನ್ ಜನ್ಮಭೂಮಿ' ಎಂಬ ಹೆಸರಿನಲ್ಲಿ ಈ ಕುಟುಕು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ, ಕೋಬ್ರಾಪೋಸ್ಟ್ ಸಂಪಾದಕ ಅನಿರುದ್ಧ್ ಬೆಹ್ಲ್ ಕಾರ್ಯಾಚರಣೆಯ ವಿವರ ನೀಡಿದ್ದಾರೆ. ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಿಜೆಪಿ, ವಿಎಚ್ಪಿ ಹಾಗೂ ಶಿವಸೇನೆ ನಾಯಕರ ಸಂದರ್ಶನವನ್ನೂ ಪ್ರಸಾರ ಮಾಡಿದ್ದಾರೆ.
ಹಿರಿಯ ನಾಯಕ ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಮತ್ತಿತರರು ಬಾಬ್ರಿ ಧ್ವಂಸವನ್ನು 'ಅತ್ಯಂತ ರಹಸ್ಯ'ವಾಗಿ ಪ್ಲ್ಯಾನ್ ಮಾಡಿದ್ದರು. ವಿಚಾರ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಪ್ರಧಾನಿ ನರಸಿಂಹರಾವ್ ಅವರಿಗೂ ಗೊತ್ತಿತ್ತು ಎಂದು ಕೋಬ್ರಾಪೋಸ್ಟ್ ವರದಿ ಮಾಡಿದೆ.
ನಾವು ಈಗಾಗಲೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದೇವೆ. ಕೋಬ್ರಾಪೋಸ್ಟ್ನ ವರದಿ ಸಾಕ್ಷ್ಯದ ಮೌಲ್ಯವನ್ನೇನೂ ಹೊಂದಿಲ್ಲ.
- ಸಿಬಿಐ