ಮಹಿಳೆಯರನ್ನು ರಕ್ಷಿಸುವ ಕೈ ಇಲ್ಲ
ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ..
ಚಂದರ್ಪುರ/ಬಲಾನ್ಗಿರ್: ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೀಗ ಮಹಿಳೆಯರ ಭದ್ರತೆ ವಿಚಾರಕ್ಕೆ ಸಂಬಂಧಿಸಿ ಯುಪಿಎ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿದ್ದುಕೊಂಡು ದೇಶದ ಮಹಿಳೆಯರ ದಾರಿ ತಪ್ಪಿಸಿದ್ದಾರೆ ಎಂದು ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಶುಕ್ರವಾರ ನಡೆಸಿದ ರ್ಯಾಲಿಯಲ್ಲಿ ಆರೋಪಿಸಿದ್ದಾರೆ.
ರಾಷ್ಟ್ರೀಯ ಅಪರಾಧ ಬ್ಯುರೋದ ಅಂಕಿ- ಅಂಶಗಳ ಪ್ರಕಾರ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿರುವ 10 ರಾಜ್ಯಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ಸೋನಿಯಾ ಅವರೇ ನೀವೊಬ್ಬ ಮಹಿಳೆಯಾಗಿದ್ದುಕೊಂಡು ದೇಶದ ಮಹಿಳೆಯರ ದಾರಿ ತಪ್ಪಿಸುತ್ತಿದ್ದೀರಿ. ನಿಮ್ಮ ಸರ್ಕಾರಾವಧಿಯಲ್ಲಿ ಮಹಿಳೆಯರ ಮೇಲೆ ಎಷ್ಟು ದೌರ್ಜನ್ಯ ಎಸಗಲಾಯಿತು ಎನ್ನುವುದನ್ನು ದೇಶ ತಿಳಿಯ ಬಯಸುತ್ತದೆ
ಕಾಂಗ್ರೆಸ್ನಲ್ಲಿ ಮಹಿಳಾ ಕಾರ್ಯಕರ್ತರಿಗೇ ಭದ್ರತೆ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಪಕ್ಷ ಆಡಳಿತವಿರುವೆಡೆ ಮಹಿಳೆಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ?
ನಿರ್ಭಯಾ ನಿಧಿಗಾಗಿ ತೆಗೆದಿಟ್ಟ ಹಣವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ.
ದೆಹಲಿಯಲ್ಲಿ ಅಮಾಯಕ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಯಿತು. ಈ ಪ್ರಕರಣದಿಂದಾಗಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಯಿತು. ಮಹಿಳೆಯರು ತಂದೂರ್ನಿಂದ ಲಾತೂರ್ವರೆಗೆ ಸುರಕ್ಷಿತವಾಗಿಲ್ಲ.
ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಈ ಕುರಿತು ತಲೆಕೆಡಿಸಿಕೊಳ್ಳುತ್ತಲೇ ಇಲ್ಲ.
ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ಕುರಿತು ಮಾತನಾಡುವಾಗ ಕಾಂಗ್ರೆಸ್ನ ಹೆಸರು ತನ್ನಿಂತಾನೆ ಬಂದು ಬಿಡುತ್ತದೆ.