ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜೀವ್ಗೆ ಹಿನ್ನಡೆ, ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತ್ಯಧಿಕ ಸ್ಥಾನಗಳಿಸಿ ಹೆಗ್ಗಳಿಕೆ ಮೆರೆದ ರಾಜೀವ್ಗಾಂಧಿ, ಒಂಬತ್ತನೇ ಚುನಾವಣೆಯಲ್ಲಿ ಅದರ..

Rashmi Kasaragodu
Updated On : 5 Apr 2014, 12:49 pm

ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತ್ಯಧಿಕ ಸ್ಥಾನಗಳಿಸಿ ಹೆಗ್ಗಳಿಕೆ ಮೆರೆದ ರಾಜೀವ್ಗಾಂಧಿ, ಒಂಬತ್ತನೇ ಚುನಾವಣೆಯಲ್ಲಿ ಅದರ ವೈಫಲ್ಯವನ್ನೂ ಮೆರೆದರು. ತಮ್ಮ ಆಡಳಿತ ಅವಧಿಯಲ್ಲಿನ ಬೋಫೋರ್ಸ್ ಹಗರಣ ಸೇರಿದಂತೆ ಇತರೆ ವಿಷಯಗಳು ಕಾಂಗ್ರೆಸ್ ಅನ್ನು ನಲುಗಿಸಿದವು. ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗುವ ಜತೆಗೆ ಎರಡನೇ ಬಾರಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಎಂಟನೇ ಲೋಕಸಭೆ ಐದು ವರ್ಷದ ಅವಧಿ ಮುಗಿಸಿದರೂ ಅದರ ಪ್ರತಿಫಲವನ್ನು ಒಂಬತ್ತನೇ ಲೋಕಸಭೆ ಚುನಾವಣೆಯಲ್ಲಿ ಪಡೆದುಕೊಳ್ಳಲು ವಿಫಲವಾಯಿತು. ಅಷ್ಟೇ ಅಲ್ಲ, ಯಾವುದೇ ಪಕ್ಷಕ್ಕೂ ಬಹುಮತವಿಲ್ಲದೆ, ಅತಂತ್ರ ಲೋಕಸಭೆ ಎದುರಾಯಿತು. ಅಷ್ಟೇ ಅಲ್ಲ, ಸ್ವಾತಂತ್ರ್ಯ ನಂತರ ಪ್ರಥಮ ಅಲ್ಪಮತದ ಸರ್ಕಾರವೂ ಅಸ್ತಿತ್ವಕ್ಕೆ ಬಂದಿತು.
ಒಂಬತ್ತನೇ ಲೋಕಸಭೆಗೆ 1989ರ ನವೆಂಬರ್ನಲ್ಲಿ ಚುನಾವಣೆ ನಡೆಯಿತು. ಸಾಕಷ್ಟು ಹಿಂಸಾಚಾರ ನಡೆದಿದ್ದರಿಂದ 14 ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡಲಾಯಿತು. 543 ಕ್ಷೇತ್ರಗಳಲ್ಲಿ 529 ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆಯಿತು. ಇದರಲ್ಲಿ 78 ಕ್ಷೇತ್ರಗಳು ಎಸ್ಸಿ ಹಾಗೂ 39 ಸ್ಥಾನಗಳು ಎಸ್ಟಿಗೆ ಮೀಸಲಾಗಿದ್ದವು. 26,20,45,142 ಪುರುಷರು, 23,68,60,987 ಮಹಿಳೆಯರು ಸೇರಿದಂತೆ 49,89,06,129 ಮತದಾರರಿದ್ದರು. ಇವರಲ್ಲಿ 30,90,50,495 ಮತದಾರರು ಹಕ್ಕು ಚಲಾಯಿಸಿ ಶೇ. 61.95ರಷ್ಟು ಮತದಾನ ದಾಖಲಿಸಿದ್ದರು. ಶೇ.2.68 ಮತಗಳು ಕುಲಗೆಟ್ಟಿದ್ದವು. ರಾಷ್ಟ್ರೀಯ ಪಕ್ಷಗಳಿಂದ 1378, ರಾಜ್ಯ ಪಕ್ಷಗಳಿಂದ 143, ಮಾನ್ಯತೆರಹಿತ ಪಕ್ಷಗಳಿಂದ 926 ಹಾಗೂ 3713 ಪಕ್ಷೇತರರು ಸೇರಿದಂತೆ ದಾಖಲೆಯ 6160 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ರಾಷ್ಟ್ರೀಯ ಪಕ್ಷಗಳ 421, ರಾಜ್ಯ ಪಕ್ಷಗಳ 42, ಮಾನ್ಯತೆರಹಿತ ಪಕ್ಷಗಳ 868 ಹಾಗೂ 3672 ಪಕ್ಷೇತರರು ಸೇರಿದಂತೆ 5003 ಮಂದಿ ಠೇವಣಿ ಕಳೆದುಕೊಂಡರು. ಅತಿಹೆಚ್ಚು ಮಹಿಳೆಯರು ಈ ಬಾರಿ ಕಣದಲ್ಲಿದ್ದರು. 198 ಮಹಿಳೆಯರಲ್ಲಿ 29 ಮಂದಿ ಗೆಲವು ಸಾಧಿಸಿದರೆ, 115 ಮಹಿಳೆಯರು ಠೇವಣಿ ಕಳೆದುಕೊಂಡರು.
ಕಾಂಗ್ರೆಸ್ 510 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 197 ಕ್ಷೇತ್ರಗಳಲ್ಲಿ ಜಯ ಸಾಧಿಸಿ, 5ರಲ್ಲಿ ಠೇವಣಿ ನಷ್ಟ ಮಾಡಿಕೊಂಡಿತ್ತು. ಶೇ.39.53ರಷ್ಟು ಮತಗಳಿಸಿತ್ತು. ಜನತಾಪಕ್ಷದಿಂದ ವಿಭಜನೆಗೊಂಡು ಸ್ಥಾಪನೆಯಾದ ಜನತಾದಳ 244 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 143 ಸ್ಥಾನದಲ್ಲಿ ಗೆಲವು ಸಾಧಿಸಿತು. 29 ಮಂದಿ ಠೇವಣಿ ಕಳೆದುಕೊಂಡರು. ಶೇ.17.79 ಮತ ಗಳಿಸಿತ್ತು. ಬಿಜೆಪಿ 225 ಸ್ಥಾನದಲ್ಲಿ 85ರಲ್ಲಿ, ಸಿಪಿಐ 50ರಲ್ಲಿ 12, ಸಿಪಿಎಂ 64ರಲ್ಲಿ 33, ಐಸಿಎಸ್ 14ರಲ್ಲಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದವು. ಜನತಾಪಕ್ಷ 155 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದು ಜಯ ಸಾಧಿಸಲಿಲ್ಲ. ಬದಲಿಗೆ 149ರಲ್ಲಿ ಠೇವಣಿ ಕಳೆದುಕೊಂಡಿತು. ಲೋಕದಳ 116ರಲ್ಲಿ 116 ಸ್ಥಾನಗಳಲ್ಲೂ ಠೇವಣಿ ನಷ್ಟ ಮಾಡಿಕೊಂಡಿತ್ತು. ರಾಜ್ಯ ಪಕ್ಷಗಳು 143ರಲ್ಲಿ ಸ್ಪರ್ಧಿಸಿ 27ರಲ್ಲಿ ಜಯಸಾಧಿಸಿದರೆ, ಮಾನ್ಯತೆರಹಿತ ಪಕ್ಷಗಳು 926ರಲ್ಲಿ 19 ಜಯ ಕಂಡವು. ಪಕ್ಷೇತರರು 12ರಲ್ಲಿ ಮಾತ್ರ ವಿಜಯ ಸಾಧಿಸಿದ್ದರು. ಹೀಗಾಗಿ ಒಂಬತ್ತನೇ ಲೋಕಸಭೆ ಅತಂತ್ರವಾಯಿತು.
ಬಹುಮತ ಸಾಧಿಸಲು 273 ಸ್ಥಾನಗಳು ಅಗತ್ಯವಿತ್ತು. ಕಾಂಗ್ರೆಸ್ ತಟಸ್ಥವಾಗಿ ಉಳಿಯಿತು. ಈ ಸಂದರ್ಭದಲ್ಲಿ ಜನತಾದಳ ಸರ್ಕಾರ ರಚನೆಗೆ ಮುಂದಾಯಿತು. ಅಚ್ಚರಿ ಬೆಳವಣಿಗೆಯಲ್ಲಿ ರಾಜೀವ್ಗಾಂಧಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ, ಅಲ್ಲಿನ ಹಗರಣಗಳಿಗೆ ವಜಾಗೊಂಡಿದ್ದ ವಿ.ಪಿ. ಸಿಂಗ್, ಜನತಾದಳದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದರು. ರಾಜೀವ್ಗಾಂಧಿಯಿಂದ ಉಚ್ಛಾಟನೆಗೆ ಒಳಗಾದ ವಿ.ಪಿ. ಸಿಂಗ್ ಅವರೇ ತಿರುಗೇಟು ನೀಡಲು ಸೂಕ್ತ ಎಂದು ಅಂದು ಪ್ರಧಾನಿ ರೇಸ್ನಲ್ಲಿ ಮುಂಚೂಣಿಯಲ್ಲಿದ್ದ ದೇವಿಲಾಲ್ ಕೂಡ ಭಾವಿಸಿದ್ದರು. ಹೀಗಾಗಿ, 1989ರ ಡಿಸೆಂಬರ್ 2ರಂದು ವಿ.ಪಿ. ಸಿಂಗ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿ ಹಾಗೂ ಎಡಪಕ್ಷಗಳು ಬಾಹ್ಯ ಬೆಂಬಲ ಸೂಚಿಸಿದ್ದವು. ಅಲ್ಪಮತದ ಸರ್ಕಾರ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ಬಂದಿತು. ಇದಾಗಿ ಒಂದು ವರ್ಷದೊಳಗೆ ಜನತಾದಳ ಇಬ್ಭಾಗವಾಯಿತು. ಚಂದ್ರಶೇಖರ್ ನೇತೃತ್ವದಲ್ಲಿ 64 ಸಂಸದರೊಂದಿಗೆ ಹೊರಹೋಗಿ, ರಾಷ್ಟ್ರೀಯ ಸಮಾಜವಾದಿ ಜನತಾಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಈ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರಿಂದ ವಿ.ಪಿ.ಸಿಂಗ್ ಕೆಳಗಿಳಿಯಬೇಕಾಯಿತು. ಹೀಗಾಗಿ, ಚಂದ್ರಶೇಖರ್ ಅವರು ವ್ಯಕ್ತಿಯಾಗಿ 8 ಹಾಗೂ ಅವಧಿಯಲ್ಲಿ 14ನೇ ಪ್ರಧಾನಿಯಾಗಿ 1990ರ ನವೆಂಬರ್ 10ರಂದು ಪ್ರಮಾಣವಚನ ಸ್ವೀಕರಿಸಿದರು. ಕೆಲವೇ ತಿಂಗಳಲ್ಲಿ ಕಾಂಗ್ರೆಸ್ನ ಸಖ್ಯ ಮುರಿಯಿತು. ರಾಜೀವ್ಗಾಂಧಿ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆಪಾದನೆಯನ್ನು ಕಾಂಗ್ರೆಸ್ ಮಾಡಿತು. ಬೆಂಬಲ ಹಿಂಪಡೆಯಿತು. ಕೇವಲ 64 ಸಂಸದರಿದ್ದ ಕಾರಣ ಚಂದ್ರಶೇಖರ್ ಅವರು 1991ರ ಮಾರ್ಚ್ 6ರಂದು ರಾಜಿನಾಮೆ ನೀಡಿದರು. ಒಂಬತ್ತನೇ ಲೋಕಸಭೆ ಇಬ್ಬರು ಪ್ರಧಾನಿಗಳನ್ನು ಕಂಡರೂ ಪೂರ್ಣಾವಧಿ ಪೂರೈಸಲಿಲ್ಲ.



- ಕೆರೆ ಮಂಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement