ನಿಲ್ಲದ ಬೈಗುಳ ಸಾಹಿತ್ಯ
'ಅಕ್ಷರ ಲೋಕ'ದ 'ನಾಯಕ'ರ 'ಟಾಕ್ ವಾರ್'ಬಹಿರಂಗವಾಗಿ ಮುಂದುವರಿದಿದೆ. 'ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ...
ಬೆಂಗಳೂರು: 'ಅಕ್ಷರ ಲೋಕ'ದ 'ನಾಯಕ'ರ 'ಟಾಕ್ ವಾರ್'ಬಹಿರಂಗವಾಗಿ ಮುಂದುವರಿದಿದೆ.
'ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ಸಂಶೋಧಕ ಎಂ. ಚಿದಾನಂದಮೂರ್ತಿ ತಂಡ ಬಿಜೆಪಿ ಬೆಂಬಲಿಸುವ ಮೂಲಕ ಸಾಹಿತಿಗಳು ರಾಜಕೀಯ ಪಕ್ಷಗಳ ಬೆಂಬಲಿಸುವುದು ಸರಿ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅನಂತಮೂರ್ತಿ ಸೇರಿ ತಾವು ಕಾಂಗ್ರೆಸ್ ಬೆಂಬಲಿಸಿರುವುದರಲ್ಲಿ ತಪ್ಪಿಲ್ಲ ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಪ್ರಜ್ಞಾವಂತರಾದ ನಾವು ಹೊರಗೆ ಬಂದು ಮಾತನಾಡುತ್ತೇವೆ. ಮಾತನಾಡಲು ಇಚ್ಛಿಸದವರು ಅಲ್ಲೆ ಇರುವುದು ಒಳ್ಳೆಯದು' ಎಂದಿದ್ದಾರೆ. ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಪ್ರೊ.ಬಿ.ಕೆ. ಗೋವಿಂದರಾವ್ ಸಹ ಇದಕ್ಕೆ ಧ್ವನಿಗೂಡಿಸಿದ್ದಾರೆ.
ಲಿಂಬಾವಳಿ ಕಿಡಿ: ಅನಂತಮೂರ್ತಿ, ಮುಖ್ಯಮಂತ್ರಿ ಚಂದ್ರು ಸೇರಿ ಸಾಹಿತಿಗಳ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ, ಅನಂತಮೂರ್ತಿ ಒಬ್ಬ ಅವಕಾಶವಾದಿ. ಅವರು ಸಾಹಿತ್ಯ ಕ್ಷೇತ್ರ ಬಿಟ್ಟು ರಾಜಕೀಯ ಸೇರುವುದು ಒಳಿತು. ಆಗಾಗ ಬಣ್ಣ ಬದಲಾಯಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಕಪ್ಪು ಮಸಿ ಬಳಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸಾಹಿತಿಗಳನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿರುವ ಕೆಪಿಸಿಸಿ ವಕ್ತಾರ ವಿ.ಆರ್. ಸುದರ್ಶನ್, ಟೀಕಿಸುವ ಧೋರಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.