ದೇಶದ ಮತ ಮಹಾ ಸಮರಕ್ಕೆ ಮುನ್ನುಡಿ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಜಾತ್ರೆಗೆ ಸೋಮವಾರ ಅಧಿಕೃತ ಚಾಲನೆ ಸಿಗಲಿದೆ.
ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಜಾತ್ರೆಗೆ ಸೋಮವಾರ ಅಧಿಕೃತ ಚಾಲನೆ ಸಿಗಲಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರಮುಖವಾದ ಅಸ್ಸಾಂನ ಐದು ಮತ್ತು ತ್ರಿಪುರಾದ ಒಂದು ಕ್ಷೇತ್ರದಲ್ಲಿ 16ನೇ ಲೋಕಸಭೆಯ ಮೊದಲ ಹಂತದ ಚುನಾವಣೆ ನಡೆಯಲಿದೆ.
ಚುನಾವಣೆ ವೇಳೆ ಸದಾ ಒಂದಿಲ್ಲೊಂದು ಸಮಸ್ಯೆ ಎದುರಿಸುವ ಈ ರಾಜ್ಯಗಳಲ್ಲಿ ಹಿಂದಿನಂತೆ ಈ ಬಾರಿ ಉಲ್ಫಾ ಉಗ್ರರದ್ದಾಗಲಿ ಅಥವಾ ಬಂಡುಕೋರರದ್ದಾಗಲಿ ಸಮಸ್ಯೆ ಇಲ್ಲ. ಚುನಾವಣೆ ಬಹಿಷ್ಕಾರದ ಕಿರಿಕಿರಿಯೂ ಇಲ್ಲ. ಹಾಗಾಗಿ ಈ ಬಾರಿ ಚುನಾವಣಾ ಆಯೋಗ ಶಾಂತಿಯುತ ಮತದಾನದ ನಿರೀಕ್ಷೆಯಲ್ಲಿದೆ.
51 ಅಭ್ಯರ್ಥಿಗಳು
ಈ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ತೃಣಮೂಲ ಕಾಂಗ್ರೆಸ್, ಎಐಯುಡಿಎಫ್, ಎಜಿಪಿ, ಎಎಪಿ, ಎಸ್‌ಯುಸಿಐ, ಸಿಪಿಐ(ಎಂ), ಎಐಎಫ್‌ಬಿ ಮತ್ತು ಎಸ್ಪಿ ಮತ್ತಿತರ ಪಕ್ಷಗಳ ಒಟ್ಟು 66 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಕೇಂದ್ರ ಸಚಿವ ರಣೀ ನಾರಾಹ್ ಮತ್ತು ಪ್ರಭೂನ್ ಸಿಂಗ್ ಘಾಟೋವರ್, ಕೇಂದ್ರದ ಮಾಜಿ ಸಚಿವ ಬಿಜೋಯ್ ಕೃಷ್ಣ ಹಂಡಿಕ್, ಮುಖ್ಯಮಂತ್ರಿ ತರುಣ್ ಗೊಗೋಯ್ ಅವರ ಪುತ್ರ ಗೌರವ್ ಗೊಗೋಯ್ ಮತ್ತು ಭುಪೇನ್ ಕುಮಾರ್ ಬೋರಾ ಪ್ರಮುಖರು. ಬಿಜೆಪಿಯಿಂದ ರಾಜ್ಯಘಟಕಗಳ ಅಧ್ಯಕ್ಷರಾದ ಸೊಬಾನಂದ ಸೋನೋವಾಲ್ ಮತ್ತು ಕಾಮಾಖ್ಯ ಪ್ರಸಾದ್ ತಸಾ ಕಣದಲ್ಲಿದ್ದಾರೆ.
ಎರಡನೇ ಹಂತ
ಎರಡು, ಮೂರನೇ ಹಂತದ ಚುನಾವಣೆ ಏ.9 ಮತ್ತು 10ಕ್ಕೆ ನಡೆಯಲಿದೆ. ಒಟ್ಟು 18 ರಾಜ್ಯಗಳ 93 ಕ್ಷೇತ್ರಗಳಲ್ಲಿ ಮತದಾನ. ಏ.9ಕ್ಕೆ 5 ರಾಜ್ಯಗಳ 7 ಕ್ಷೇತ್ರಗಳು ಮತ್ತು ಏ.10ರಂದು 13 ರಾಜ್ಯಗಳ 86 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಭದ್ರತೆ: ಮೊದಲ ಮೂರು ಹಂತದ ಚುನಾವಣೆ ಬಂಡುಕೋರರ ಭೀತಿ ಇರುವ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇಂದು ಬಿಜೆಪಿ ಪ್ರಣಾಳಿಕೆ
ನವದೆಹಲಿ: ಮೊದಲ ಹಂತದ ಮತ ದಿನವಾದ ಸೋಮವಾರವೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಪ್ರಣಾಳಿಕೆಗೆ ಚುನಾವಣಾ ಆಯೋಗ ಷರತ್ತುಬದ್ಧ ಒಪ್ಪಿಗೆ ಸೂಚಿಸಿವ ಮೂಲಕ ಉಂಟಾ ಗಿದ್ದ ಬಿಕ್ಕಟ್ಟು ನಿವಾರಣೆಯಾದಂತಾಗಿದೆ. ಪ್ರಣಾಳಿಕೆ ಬಿಡುಗಡೆ ಮಾಡಬಹುದು. ಆದರೆ, ಮತದಾನದ ರಾಜ್ಯಗಳಲ್ಲಿ ಕಾರ್ಯಕ್ರಮವನ್ನಾಗಲೀ, ಪ್ರಣಾ ಳಿಕೆಯ ಅಂಶಗಳನ್ನಾಗಲೀ ಪ್ರಸಾರ ಮಾಡುವಂತಿಲ್ಲ.
ಇದೇ ವೇಳೆ, ಪ್ರಣಾಳಿಕೆ ಬಿಡುಗಡೆ ಸಮಯ ನಿಗದಿ ಪಡಿಸಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಮತದಾನದ 48 ಗಂಟೆಗಳೊಳಗೆ ಪ್ರಣಾಳಿಕೆ ಬಿಡುಗಡೆ ಪ್ರಸಾರ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಹಾಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆಯೋಗ ನಿರ್ಬಂಧ ವಿಧಿಸಿತ್ತು.
ಎಲ್ಲೆಲ್ಲೆ ಚುನಾವಣೆ?
5 ಕ್ಷೇತ್ರ ಅಸ್ಸಾಂ
ತೇಜ್‌ಪುರ
ಕಾಲಿಯಾಬೊರ್
ಜೋರ್ಹಾಟ್
ದಿಬರುಗಡ
ಲಖಿಂಪುರ್
1 ಕ್ಷೇತ್ರ ತ್ರಿಪುರಾ
ತ್ರಿಪುರಾ