ಪೇಪರ್ ಟ್ರಯಲ್ ದೂರು ನೀಡಬಹುದು
ನವದೆಹಲಿ: ಒಂದು ವೇಳೆ ಮತದಾರ ಚಲಾಯಿಸಿದ ಮತ ಮತಯಂತ್ರದಿಂದ ಹೊರಬಂದ ದೃಢೀಕರಣ (ಪೇಪರ್ ಟ್ರಯಲ್) ಚೀಟಿ ನಡುವೆ ವ್ಯತ್ಯಾಸ ಕಂಡು ಬಂದರೆ ದೂರು ನೀಡಲು ಅವಕಾಶವಿದೆ. ಹಾಗಂತ ಸುಳ್ಳು ದೂರುಗಳನ್ನು ನೀಡುವಂತಿಲ್ಲ. ಸುಳ್ಳು ದೂರು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ. ಈ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಪ್ರಾಯೋಗಿಕವಾಗಿ ಕೆಲ ಆಯ್ದ ಕ್ಷೇತ್ರಗಳಲ್ಲಿ ಪೇಪರ್ ಟ್ರಯಲ್ ಅನ್ನು ಪರಿಚಯಿಸುತ್ತಿದೆ. ಒಂದು ವೇಳೆ ತಾವು ಹಾಕಿದ ಮತ ಬೇರೆ ಪಕ್ಷಕ್ಕೆ ಬಿದ್ದಿದ್ದರೆ ಮತದಾರರು ಚುನಾವಣಾ ಅಧಿಕಾರಿಗೆ ಈ ಸಂಬಂಧ ದೂರು ಸಲ್ಲಿಸಬಹುದಾಗಿದೆ. ಸುಳ್ಳು ದೂರನ್ನೇನಾದರೂ ನೀಡಿದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಸುಳ್ಳು ಮಾಹಿತಿ ನೀಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಆಯೋಗ ತಿಳಿಸಿದೆ. ಮತದಾರರಿಗೆ ನೀಡಲಾದ ಸೌಲಭ್ಯ ದುರುಪಯೋಗ ಆಗದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.