ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬ್ಲ್ಯಾಕ್‌ಮೇಲ್ ಖಂಡಿಸಿ ಪ್ರತಿಭಟನೆ

ದುಷ್ಟಶಕ್ತಿಗಳ ವಿರುದ್ಧ ರಾಮಚಂದ್ರಾಪುರ ಮಠದ ಶಿಷ್ಯವರ್ಗ ಸಿಡಿದೆದ್ದಿದೆ. ಬ್ಲ್ಯಾಕ್‌ಮೇಲ್ ಯತ್ನ ಖಂಡಿಸಿ ಗೋಕರ್ಣದಲ್ಲಿ ಭಾನುವಾರ ಸಂಜೆ...

Mainashree
Updated On : 6 Apr 2014, 10:50 am

ಕಾರವಾರ: ದುಷ್ಟಶಕ್ತಿಗಳ ವಿರುದ್ಧ ರಾಮಚಂದ್ರಾಪುರ ಮಠದ ಶಿಷ್ಯವರ್ಗ ಸಿಡಿದೆದ್ದಿದೆ. ಬ್ಲ್ಯಾಕ್‌ಮೇಲ್ ಯತ್ನ ಖಂಡಿಸಿ ಗೋಕರ್ಣದಲ್ಲಿ ಭಾನುವಾರ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರ ಸಾವಿರ ಭಕ್ತರು ಶ್ರೀಗಳ ಬೆಂಬಲಕ್ಕೆ ನಿಂತರು. ಸಮಾಜಘಾತುಕರ ಸಾತ್ವಿಕ ಸಂಹಾರದ ಪಣ ತೊಟ್ಟರು.
ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್‌ಮೇಲ್ ನಡೆಸಿದ್ದಲ್ಲದೆ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸ್ಥಳೀಯ ದುಷ್ಟಕೂಟದ ವಿರುದ್ಧ ಜನತೆ ಸಿಡಿದೆದ್ದರು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಗಣ್ಯರು, ದೇವಾಲಯದ ಭಕ್ತರು, ಸಾರ್ವಜನಿಕರು, ಸ್ಥಳೀಯರು ದುಷ್ಕೃತ್ಯ ನಡೆಸುತ್ತಿರುವವರ ಜನ್ಮ ಜಾಲಾಡಿದರು. ಭಾನುವಾರ ಇಡೀ ಗೋಕರ್ಣಕ್ಕೆ ಗೋಕರ್ಣವೇ ಕಿಡಿಗೇಡಿಗಳ ವಿರುದ್ಧ ಎದ್ದುನಿಂತಿತು. ಸಮಾವೇಶದಲ್ಲಿ ಮಾತನಾಡಿದ ಕೆಲವರು 'ಗೋಕರ್ಣ ಹಿತರಕ್ಷಣಾ ಸಮಿತಿ' ಹೆಸರಿನಲ್ಲಿ ದುಷ್ಟಕೂಟ ಕಟ್ಟಿಕೊಂಡವರನ್ನು 'ರಾಕ್ಷಸರು' ಎಂದು ಜರಿದರು. ಅಭಿವೃದ್ಧಿ ವಿರೋಧಿಗಳು ಎಂದು ಕಿಡಿಕಾರಿದರು. ಅವರನ್ನು ಬೇರು ಸಹಿತ ಕಿತ್ತುಹಾಕುವುದಾಗಿ ಶಪಥ ಮಾಡಿದರು. ಬೆರಳೆಣಿಕೆಯಷ್ಟು ಜನರು ನಡೆಸುತ್ತಿರುವ ಕುಕೃತ್ಯದ ವಿರುದ್ಧ ಸಿಡಿದೇಳಲು ಕರೆ ನೀಡಿದರು.
ಸಂಜೆ 4ಕ್ಕೆ ಗಣಪತಿ ದೇವಾಲಯ, ಮಾರುತಿ, ಭದ್ರಕಾಳಿ, ತಾಮ್ರ ಗೌರಿ ದೇವಾಲಯಗಳಿಗೆ ಪೂಜೆ ಸಲ್ಲಿಸಿ, ಗೋಕರ್ಣ ಪ್ರವೇಶ ದ್ವಾರದಿಂದ ಅಂದರೆ ಮಾರುತಿ ಕಟ್ಟೆಯಿಂದ ಮೆರವಣಿಗೆ ಆರಂಭವಾದ ಮೆರವಣಿಗೆಯಲ್ಲಿ ಮಹಿಳೆಯರು, ಯುವಕ, ಯುವತಿಯರು, ಹಿರಿಯರು, ವೃದ್ಧರು ಮತ್ತು ನಾಡಿನ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸುಮಾರು ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿ ಸೇರಿದ್ದ ಗೋಕರ್ಣದ ಆತ್ಮಲಿಂಗ, ಮಹಾಬಲೇಶ್ವರ ದೇವರ ಭಕ್ತರು ವಿಶೇಷವಾಗಿ ಗೋಕರ್ಣದ ಅಭಿವೃದ್ಧಿ ಕಂಟಕರ ವಿರುದ್ಧ ಘೋಷಣೆಯನ್ನು ದಾರಿಯುದ್ದಕ್ಕೂ ಕೂಗುತ್ತಾ ಸಾಗಿದರು. ಸಂಜೆ 5ಗಂಟೆಗೆ ಆರಂಭವಾದ ಸಭೆ ಅಧ್ಯಕ್ಷತೆಯನ್ನು ಹಿರಿಯ ಸಾಮಾಜಿಕ ಮತ್ತು ಸಹಕಾರಿ ಧುರೀಣ ಆರ್.ಎಸ್. ಭಾಗ್ವತ್ ವಹಿಸಿದ್ದರು.
ನೋವುಂಟ ಮಾಡಿದೆ: ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಶ್ರೀಗಂಧದಂತೆ ತಮ್ಮನ್ನು ತೇಯ್ದುಕೊಂಡವರು, ದೀಪದಂತೆ ತನ್ನನ್ನು ಉರಿಸಿಕೊಂಡು ಸಮಾಜವನ್ನು ಬೆಳಗುತ್ತಿರುವವರು ರಾಘವೇಶ್ವರ ಭಾರತೀ ಶ್ರೀಗಳವರು. ಗಾಂಧೀಜಿಯವರು ಚರಕದಿಂದ ವಿನೋಬಾಜಿಯವರು ಭೂದಾನದಿಂದ ಪ್ರಪಂಚದಲ್ಲಿ ಗುರುತಿಸಿಕೊಂಡಂತೆ ಗೋಮಾತೆಯ ಮೂಲಕ ದೇಶ ಕಟ್ಟಿ ಸಮಾಜದಲ್ಲಿ ಕ್ರಾಂತಿ ಮಾಡಿದವರು ಶ್ರೀಗಳು. ಅಂತಹ ಶ್ರೀಗಳವರ ಮಹಾನ್ ಉದ್ದೇಶಕ್ಕೆ ಕೆಲವರು ಅಡ್ಡಿಯುಂಟುಮಾಡಿ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದರು.
ಮಾಜಿ ಶಾಸಕ ದಿನಕರ ಶೆಟ್ಟಿ, ದ್ರೌಪದಿಗೆ ಅವಮಾನ ಮಾಡಿದ ಕೀಚಕರು ಸರ್ವನಾಶ ಹೊಂದಿದ ವಿಚಾರ ನಮ್ಮೆಲ್ಲರ ಕಣ್ಣ ಮುಂದಿದೆ. ಹೀಗೇ ಸತ್ಕಾರ್ಯಕ್ಕೆ ಅಡ್ಡಿಯುಂಟು ಮಾಡುವವರೂ ಕೂಡಾ ತಕ್ಕ ಶಾಸ್ತಿಯನ್ನು ಅನುಭವಿಸುತ್ತಾರೆ ಎಂದರು. ಪದ್ಮಶ್ರೀ ವಿಜೇತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಉದ್ಯಮಿ ಮುರಳೀಧರ ಪ್ರಭು, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷರೂ ಮತ್ತು ಸಾಮಾಜಿಕ ಮುಖಂಡರಾದ ಮುಂಡರಗಿಯ ವೈ.ಎನ್. ಗೌಡರ್, ನಿವೃತ್ತ ಶಿಕ್ಷಕ ಬೀರಣ್ಣ ನಾಯಕ್, ಜಿಪಂ ಸದಸ್ಯ ಪ್ರದೀಪ ನಾಯಕ್, ಆರ್.ಎಸ್. ಭಾಗ್ವತ, ಸೂರಜ ನಾಯ್ಕ ಸೋನಿ, ಸುಮನಾ ಗೌಡ, ಸದಾನಂದ ಹರಿಕಂತ್ರ ಮತ್ತಿತರರು ಮಾತನಾಡಿ, ದುಷ್ಕರ್ಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಬ್ಲ್ಯಾಕ್‌ಮೇಲ್ ಘಟನೆ ಸೇರಿದಂತೆ ಮಠದ ವಿರುದ್ಧ ನಡೆಸುತ್ತಿರುವ ಕೃತ್ಯವನ್ನು ಖಂಡಿಸಿದರು. ಶಿವಮೊಗ್ಗದ ಹಿರಿಯ ವಕೀಲ ಎಂ.ಆರ್. ಸತ್ಯನಾರಾಯಣ, ಕ್ಷೇತ್ರದ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿರುವ ದುಷ್ಟಶಕ್ತಿಗಳ ಬಗ್ಗೆ ಎಳೆಎಳೆಯಾಗಿ ವಿವರಿಸಿದರು.

ಭಕ್ತ ಸಮಾವೇಶದ ನಿರ್ಣಯ
ರಾಮಚಂದ್ರಾಪುರ ಮಠದ ವಿರುದ್ಧ ಬ್ಲ್ಯಾಕ್‌ಮೇಲ್ ನಡೆಸಿದ್ದನ್ನು ಸಭೆ ಸರ್ವಾನುಮತದಿಂದ ಖಂಡಿಸಿತು. ಭಕ್ತರು ಮತ್ತು ದೇವರ ನಡುವೆ ಕಂದಕ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ಮಾಡಿದವರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ದೇವಾಲಯ ಆಡಳಿತ ಮಂಡಳಿಗೆ ಒತ್ತಾಯಿಸುವುದು, ದುಷ್ಕತೃ ನಡೆಸುವ ವ್ಯಕ್ತಿ ಮತ್ತು ಅನ್ಯಾಯದ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸುವುದು, ಗೋಕರ್ಣ ಮತ್ತು ಮಹಾಬಲೇಶ್ವರ ದೇವಾಲಯದ ಅಭಿವೃದ್ಧಿಗೆ ಪದೇಪದೆ ಕಂಟಕ ತಂದು ನ್ಯಾಯಪೀಠ ದುರುಪಯೋಗ ಮಾಡುವುದು ಹಾಗೂ ಧರ್ಮಪೀಠಕ್ಕೆ ಬ್ಲ್ಯಾಕ್‌ಮೇಲ್ ಮಾಡುವುದನ್ನು ಸರ್ವಾನುಮತದಿಂದ ಖಂಡಿಸಲಾಯಿತು. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ದುಡಿಯಲು ಭಕ್ತ ಸಂಘಟನೆ ಆರಂಭಿಸಲು ತೀರ್ಮಾನಿಸಲಾಯಿತು. ವ್ಯವಸ್ಥೆಗೆ ಅಡ್ಡಿ ಬರುವ ದುಷ್ಟಶಕ್ತಿ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಲಾಯಿತು. ಸಮಿತಿಯ ಈಗಿನ ರೂಪುರೇಷೆ ಹಾಗೂ ಮುಂದಿನ ನಡೆಯನ್ನು ರೂಪಿಸುವ ಜವಾಬ್ದಾರಿಯನ್ನು ರಾಜೀವ ಗಾಂವಕರ ಅವರಿಗೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement