ಭೂಮಾಫಿಯಾ: ಐವರ ಬಂಧನ
ಬೆಳಗಾವಿ: ಭೂಮಾಫಿಯಾ ಜೊತೆಗೂಡಿ ಸಾರ್ವಜನಿಕರಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆಯೊಡ್ಡಿ ಅಮಾಯಕರ ಆಸ್ತಿ ಲಪಟಾಯಿಸುತ್ತಿದ್ದ ಐವರನ್ನು ಭಾನುವಾರ ಬಂಧಿಸಲಾಗಿದೆ.
ಬಂಧಿತರನ್ನು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಸಭಾಗ ನಿವಾಸಿ ಸುರೇಶ ಮೋತಿಲಾಲ ಚಿಂಡಕ(50), ವಡಗಾಂವಿಯ ಸುನೀಲ ವಿಷ್ಣು ನಾಯಕ(49), ಶಾಮ ಅಲಿಯಾಸ್ ಗಂಗಾಧರ ವೈಜನಾಥ ಮುಚ್ಚಂಡಿ(53), ಮಾರ್ಕೆಟ್ ಠಾಣೆ ವ್ಯಾಪ್ತಿಯ ಚವಾಟಗಲ್ಲಿ ನಿವಾಸಿ ಆನಂದ ಅರುಣ ಅಪ್ಟೇಕರ್(30) ಹಾಗೂ ಸುನೀಲ ವಿಜಯ ಜಾಧವ(33) ಗುರುತಿಸಲಾಗಿದೆ.
ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಈಗ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಮಹಾರಾಷ್ಟ್ರದ ಚಂದಗಡ ಕುಖ್ಯಾತ ರೌಡಿ ಡಾ.ಪ್ರಕಾಶ ಬಾಂದೆವಾಡೇಕರ್ ಸಹಚರರು ಬೆದರಿಕೆಯೊಡ್ಡಿ ಬೆಲೆಬಾಳುವ ಭೂಮಿ ಲಪಟಾಯಿಸುತ್ತಿದ್ದರು. ರೌಡಿ ಬಾಂದೆವಾಡೇಕರ್ ಬಂಧನಕ್ಕೆ ಶೋಧ ಮುಂದುವರೆದಿದೆ ಎಂದು ಎಸ್ಪಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.