ಮಾಜಿ ಶಾಸಕ ಶಂಕರಲಿಂಗೇಗೌಡ ನಿಧನ
ಮಾಜಿ ಶಾಸಕ ಶಂಕರಲಿಂಗೇಗೌಡ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ..
ಬೆಂಗಳೂರು: ಮಾಜಿ ಶಾಸಕ ಶಂಕರಲಿಂಗೇಗೌಡ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಮೂರು ದಿನದ ಹಿಂದೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ವಿಧಿವಶವಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಶಂಕಲಿಂಗೇಗೌಡ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿಕೊಂಡಿದ್ದರು. ಮೈಸೂರು ಚಾಮರಾಜ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.
ಮಂತ್ರಿಯಾಗಲೇ ಇಲ್ಲ: ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದ ಎಚ್.ಎಸ್. ಶಂಕರಲಿಂಗೇಗೌಡ ಅವರಿಗೆ ಮಂತ್ರಿಯಾಗುವ ಭಾಗ್ಯವೇ ಸಿಗಲಿಲ್ಲ.
ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ರೈತ ಕುಟುಂಬದಲ್ಲಿ 1947ರ ಆಗಸ್ಟ್ 16ರಂದು ಜನಿಸಿದ ಶಂಕರಲಿಂಗೇಗೌಡರು, ಬಿ.ಎಸ್ಸಿ ಪದವೀಧರರು. ಅತ್ಯುತ್ತಮ ವಾಗ್ಮಿ, ನಗರ ಪಾಲಿಕೆಗೆ ಹಲವು ಬಾರಿ ಆಯ್ಕೆಯಾಗಿ, ಮೇಯರ್ ಸ್ಥಾನ ಅಲಂಕರಿಸಿದ್ದ ಶಂಕರಲಿಂಗೇಗೌಡರು, 1989ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಜನತಾದಳದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ನಂತರ ಬಿಜೆಪಿ ಸೇರಿ 1994, 1999, 2004, 2008- ಹೀಗೆ ಸತತ ನಾಲ್ಕು ಬಾರಿ ಬಿಜೆಪಿ ಟಿಕೆಟ್ ಮೇಲೆ ವಿಧಾನಸಭೆಗೆ ಆಯ್ಕೆಯಾಗಿದ್ದರು.