ಅಸ್ಸಾಂ 76%, ತ್ರಿಪುರಾ 85% ಮತ ಚಲಾವಣೆ
ಅಸ್ಸಾಂನ ಐದು ಮತ್ತು ತ್ರಿಪುರಾದ ಒಂದು ಕ್ಷೇತ್ರಕ್ಕೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆದಿದೆ...
ನವದೆಹಲಿ/ಗುವಾಹಟಿ/ಅಗರ್ತಲಾ:
ಅಸ್ಸಾಂನ ಐದು ಮತ್ತು ತ್ರಿಪುರಾದ ಒಂದು ಕ್ಷೇತ್ರಕ್ಕೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಈ ಮೂಲಕ ಚುನಾವಣೆಯ 9 ಹಂತಗಳ ಪೈಕಿ ಮೊದಲ ಹಂತ ಮುಕ್ತಾಯವಾಗಿದೆ. ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಅಸ್ಸಾಂನಲ್ಲಿ ಶೇ.76 ಮತ್ತು ತ್ರಿಪುರಾದಲ್ಲಿ ಶೇ.85ರಷ್ಟು ಹಕ್ಕು ಚಲಾವಣೆಯಾಗಿದೆ.
ಅಸ್ಸಾಂನಲ್ಲಿ: ಕೇಂದ್ರ ಸಚಿವ ಪವನ್ ಸಿಂಗ್ ಘಟೋವರ್ ಸೇರಿ 51 ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ತರುಣ್ ಗೊಗೋಯ್ ಪುತ್ರ ಗೌರವ್ ಗೊಗೋಯ್ ಕೂಡ ಇದ್ದಾರೆ. ಮುಖ್ಯಮಂತ್ರಿ ಗೊಗೋಯ್ ಮತ್ತು ಕುಟುಂಬದವರು ಕೋಲಿಯಾಬಾರ್ನಲ್ಲಿ ಮತ ಹಾಕಿದರು. ಏ.12ಕ್ಕೆ ಮುಂದಿನ ಹಂತದ ಮತದಾನ ನಡೆಯಲಿದೆ.
301 ಸದಸ್ಯರ ಕುಟುಂಬ: ಅಸ್ಸಾಂನ ತೇಜ್ಪುರ ಜಿಲ್ಲೆಯಲ್ಲಿ 301 ಸದಸ್ಯರ ಕುಟುಂಬವೊಂದು ಸೋಮವಾರ ಹಕ್ಕು ಚಲಾವಣೆ ಮಾಡಿದೆ. ನೇಪಾಳದಿಂದ 1888ರಲ್ಲಿ ಜಿಲ್ಲೆಯ ಫುಲ್ಗುರಿ ನೇಪಾಲಿಯಂ ಗ್ರಾಮಕ್ಕೆ ಈ ಕುಟುಂಬದ ಹಿರಿಯರು ವಲಸೆ ಬಂದಿದ್ದರು. ತೇಜ್ಪುರದಲ್ಲಿರುವ ಚಹಾ ತೋಟಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಈ ಕುಟುಂಬದ 175 ಪುರುಷರು ಮತ್ತು 126 ಮಹಿಳೆಯರು ಹಕ್ಕು ಚಲಾವಣೆ ಮಾಡಿದ್ದಾರೆ. ಇತರ 20 ಮಂದಿ ಗ್ರಾಮದಿಂದ ಹೊರಗಿರುವ ಕಾರಣ ಮತದಾನ ಸಾಧ್ಯವಾಗಿಲ್ಲ.
ತ್ರಿಪುರಾದಲ್ಲಿ: ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಪಶ್ಚಿಮ ತ್ರಿಪುರಾದಲ್ಲಿ ಮತದಾರರು ಉತ್ಸಾಹದಿಂದ ಹಕ್ಕು ಚಲಾವಣೆ ಮಾಡಿದರು. ಈ ಕ್ಷೇತ್ರದಿಂದ ಸಿಪಿಎಂನ ಶಂಕರ ಪ್ರಸಾದ್ ದತ್ತ ಸೇರಿದಂತೆ 13 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎ.12ರಂದು ತ್ರಿಪುರಾ ಪೂರ್ವ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
195 ಕೋಟಿ ವಶ
ಚುನಾವಣೆ ಘೋಷಣೆಯಾದ ಬಳಿಕ ಇದುವರೆಗೆ ದೇಶದ ವಿವಿಧ ಭಾಗಗಳಲ್ಲಿ 11 ಸಾವಿರ ಎಫ್ಐಆರ್ ದಾಖಲಿಸಲಾಗಿದ್ದು, 195 ಕೋಟಿ ವಶಪಡಿಸಿಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ಮದ್ಯ ಜತೆಗೆ ಹೆರಾಯಿನ್ ಅನ್ನು ಈ ಬಾರಿ ವಶಪಡಿಸಿಕೊಳ್ಳಲಾಗಿದೆ ಎನ್ನುವುದು ಗಮನಾರ್ಹ. ಚುನಾವಣಾ ಅಕ್ರಮ ಪತ್ತೆಗಾಗಿ 659 ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮರ್ಥ ತಂಡ ರಚಿಸಲಾಗಿದೆ.