ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜ್ಞಾನಪೀಠಿಗಳ ಫೋಟೋಕ್ಕೆ ಕೈ ಹಾಕಿದ ನೀತಿ

ರಾಜಕೀಯ ಪಕ್ಷಗಳೊಂದಿಗೆ ಬಹಿರಂಗವಾಗಿ 'ಕೈ' ಕುಲುಕಿದ ಅಕ್ಷರ ಲೋಕದ ಇಬ್ಬರು 'ಜ್ಞಾನಪೀಠ...

Mainashree
Updated On : 7 Apr 2014, 11:17 am

ಬೀದರ್: ರಾಜಕೀಯ ಪಕ್ಷಗಳೊಂದಿಗೆ ಬಹಿರಂಗವಾಗಿ 'ಕೈ' ಕುಲುಕಿದ ಅಕ್ಷರ ಲೋಕದ ಇಬ್ಬರು 'ಜ್ಞಾನಪೀಠ' ನಾಯಕರ ಭಾವಚಿತ್ರಗಳು ಶಾಲಾ-ಕಾಲೇಜು ಹಾಗೂ ಬಸ್ ನಿಲ್ದಾಣಗಳಲ್ಲಿ ರಾರಾಜಿಸುತ್ತ ನೀತಿ ಸಂಹಿತೆಯನ್ನೇ ಅಣಕಿಸುವಂತಿವೆ!
ಇಂದಿನ ಯುವ ಪೀಳಿಗೆ ನಮ್ಮ ಸಾಹಿತ್ಯ ಲೋಕದ ಕಣ್ಮಣಿಗಳನ್ನು ಅರಿತುಕೊಳ್ಳಲಿ ಎಂದು ಬಸ್ ನಿಲ್ದಾಣ, ಶಾಲಾ-ಕಾಲೇಜುಗಳ ಆವರಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಆದರೆ ಈ ಪೈಕಿ ಕೆಲವು ಸಾಹಿತಿಗಳು ನಾವೂ 'ನಾಯಕ'ರೆಂದು ಬಹಿರಂಗಪಡಿಸಿದ್ದು ಇಂಥದ್ದೊಂದು ಚಿಂತನೆಗೆ ಕಾರಣವಾಗಿದೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿತವಾಗುತ್ತಿದ್ದ ಅಂದಿನ ಮತ್ತು ಇಂದಿನ ರಾಜಕೀಯ ಮುಖಂಡರ ಫೋಟೋಗಳನ್ನು ತೆರವುಗೊಳಿಸುವುದು ನಿಯಮ. ಅದರಂತೆ ಇದೀಗ ಸಾಹಿತ್ಯ ಲೋಕದಲ್ಲಿ ಮಿಂಚಿದ ಕಣ್ಮಣಿಗಳು ಎನಿಸಿಕೊಂಡವರಿಗೂ ರಾಜಕೀಯದ ನಂಟು ಆವರಿಸಿದ್ದು ಅವರ ಭಾವಚಿತ್ರಗಳ ತಾತ್ಕಾಲಿಕ ತೆರವಿನ ಪ್ರಶ್ನೆ ಉದ್ಭವಿಸಿದೆ.
'ಕೈ' ಪರ ಮತ ಯಾಚಿಸಿದ್ರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್. ಅನಂತಮೂರ್ತಿ ಹಾಗೂ ಗಿರೀಶ ಕಾರ್ನಾಡ್ ಅವರು ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬಹಿರಂಗವಾಗಿ ಬಿಜೆಪಿಯನ್ನು ತೆಗಳಿ ಕಾಂಗ್ರೆಸ್ ಪರ ಮತಯಾಚಿಸಿದ್ದರು. ಸಾಹಿತಿಗಳು ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗಿರಬೇಕು, ಯಾವುದೇ ಒಂದು ರಾಜಕೀಯ ಪಕ್ಷದ ಪರವಾಗಿ ನಿಂತು ಪ್ರಚಾರ ಮಾಡುವುದು ಸರಿಯಲ್ಲ ಎಂದು ವಿವಿಧ ರಾಜಕೀಯ ಪಕ್ಷಗಳು ಹಾಗೂ ಹಿರಿಯ ಸಾಹಿತಿಗಳು 'ಬುದ್ಧಿ'ವಾದ ಹೇಳಿದ್ದರು. ಆದರೂ ಇದಾವುದಕ್ಕೂ ಜಗ್ಗದ 'ಜ್ಞಾನಪೀಠ' ಪುರಸ್ಕೃತ ಈ ಸಾಹಿತಿಗಳು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಮತದಾರನ ಮೇಲೆ ಪ್ರಭಾವ: ಜ್ಞಾನಪೀಠ ಪುರಸ್ಕೃತ ಕನ್ನಡಿಗ ಸಾಹಿತಿಗಳ ಭಾವಚಿತ್ರಗಳು ಬಹುತೇಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ರಾರಾಜಿಸುತ್ತಿವೆ. ಅಲ್ಲದೆ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಂತೂ ಪ್ರತಿಯೊಬ್ಬ ಪ್ರಯಾಣಿಕನನ್ನು ಆಕರ್ಷಿಸುವಂಥ ಬೃಹತ್ ಭಾವಚಿತ್ರಗಳನ್ನು ಅಳವಡಿಸಲಾಗಿದೆ.
ಅಲ್ಲದೆ, ಶಾಲಾ- ಕಾಲೇಜುಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆ ನಡೆಯುವ ಸ್ಥಳದಲ್ಲೂ ಅಳವಡಿಸಲಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ನಾಯಕರ ಭಾವಚಿತ್ರ ತೆಗೆಯುವ ಚುನಾವಣಾ ಆಯೋಗ ಈಗ ಸಾಹಿತಿಗಳ ಫೋಟೋ ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸುವುದು ಮಾತ್ರ ಬಾಕಿ ಇದೆ.

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ತೆರಳುವೆ ಎಂದು ಹಿಂದೆ ಹೇಳಿದ್ದೆ. ಅದು ಭಾವಾವೇಶದ ಮಾತು. ಆದರೆ ನಾನು ದೇಶ ಬಿಡುವುದಿಲ್ಲ. ಏಕೆಂದರೆ ಈ ದೇಶ ಬಿಟ್ಟು ಹೋಗಲು ನನಗೆ ಸಾಧ್ಯವೇ ಇಲ್ಲ. ಆದರೆ ಮೋದಿ ಅಧಿಕಾರಕ್ಕೇರಿದರೆ ನಾಗರಿಕತೆಯಲ್ಲಿ ಬದಲಾವಣೆಯಾಗಲಿದೆ.
ಡಾ.ಯು.ಆರ್.ಅನಂತಮೂರ್ತಿ, ಸಾಹಿತಿ (ನವದೆಹಲಿಯಲ್ಲಿ ಸೋಮವಾರ )



ಅಪ್ಪಾರಾವ್ ಸೌದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement