ನಂದಿದ ಬೆಳಕಿನ ರೇಖೆ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಸಿನಿಮಾ ಛಾಯಾಗ್ರಾಹಕ ವಿ.ಕೆ. ಮೂರ್ತಿ (91) ಸೋಮವಾರ ನಿಧನರಾಗಿದ್ದಾರೆ...
ಬೆಂಗಳೂರು: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಸಿನಿಮಾ ಛಾಯಾಗ್ರಾಹಕ ವಿ.ಕೆ. ಮೂರ್ತಿ (91) ಸೋಮವಾರ ನಿಧನರಾಗಿದ್ದಾರೆ.
ಸೋಮವಾರ ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಶಂಕರಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ವಿ.ಕೆ. ಮೂರ್ತಿ, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ವಿ.ಕೆ. ಮೂರ್ತಿ ಅವರ ಪತ್ನಿ ನಿಧನರಾದ ಮೇಲೆ ಮುಂಬೈಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ತಮ್ಮ ಪುತ್ರಿ ಛಾಯಾ ಮೂರ್ತಿ ಅವರ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದರು.
ಚಿತ್ರರಂಗದಲ್ಲಿ ವಿ.ಕೆ. ಮೂರ್ತಿ ಎಂದೇ ಪ್ರಸಿದ್ಧರಾಗಿದ್ದ ವೆಂಕಟರಾಮ ಪಂಡಿತ ಕೃಷ್ಣಮೂರ್ತಿ 1923, ನವೆಂಬರ್ 26ರಂದು ಮೈಸೂರಿನಲ್ಲಿ ಜನಿಸಿದರು. ಮೂರ್ತಿ ಅವರು ಕನ್ನಡದವರಾದರೂ ಛಾಯಾಗ್ರಹಣದಲ್ಲಿ ಹೆಚ್ಚು ಸದ್ದು ಮಾಡಿದ್ದು ಮಾತ್ರ ಹಿಂದಿ ಚಿತ್ರಜಗತ್ತಿನಲ್ಲಿ. ವಿಶೇಷ ಅಂದರೆ ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ ಕನ್ನಡದ 'ಹೂವು ಹಣ್ಣು' ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದರು.
ಉಳಿದಂತೆ ಹಿಂದಿಯಲ್ಲಿ 'ಬಾಜಿ', 'ಜಾಲ್', 'ಚೌದವಿ ಕಾ ಚಾಂದ್', 'ಪ್ಯಾಸಾ', 'ಕಾಗಜ್ ಕೀ ಫೂಲ್', 'ಸಾಹಿಬ್ ಬೀಬಿ ಔರ್ ಗುಲಾಮ್', 'ಸಿಐಡಿ', 'ಆರ್ಪಾರ್', '12 ಓ ಕ್ಲಾಕ್' ಹಾಗೂ 'ಜಿದ್ದಿ' ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. 'ದೀದಾರ್' ಮೂರ್ತಿ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ.
ಹಿಂದಿಯ ನಟ ಮತ್ತು ನಿರ್ದೇಶಕ ಗುರುದತ್ ಅವರ ಚಿತ್ರಗಳಿಗೆ ಹೆಚ್ಚು ಛಾಯಾಗ್ರಹಣ ಮಾಡಿದ್ದರು.
ಕನ್ನಡಿಗರಾದರೂ ಭಾರತೀಯ ಚಿತ್ರರಂಗದ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು ಮೂರ್ತಿ ಅವರ ಹೆಗ್ಗಳಿಕೆ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಸಂಗತಿ. ತೆರೆ ಮೇಲಿನ ದೃಶ್ಯ ಶ್ರೀಮಂತಿಕೆಯನ್ನು ಅದ್ಭುತವಾಗಿ ಕಟ್ಟಿಕೊಡುತ್ತಿದ್ದ ಅಪರೂಪದ ಛಾಯಾಗ್ರಾಹಕ. 'ಚೌದವಿ ಕಾ ಚಾಂದ್' ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಪ್ರೇಕ್ಷಕರ ಗಮನ ಸೆಳೆದ ಮೂರ್ತಿ, ಭಾರತದ ಮೊದಲ ಸಿನಿಮಾ ಸ್ಕೋಪ್ 'ಕಾಗಜ್ ಕೀ ಫೂಲ್' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು.
ಬೆಂಗಳೂರಿನ ಎಸ್ಜೆಪಿ ಕಾಲೇಜಿನ 1943- 46ನೇ ಸಾಲಿನ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿದ್ದವರು. 'ಪ್ರಶಸ್ತಿ ಫಲಕಗಳು, ಸನ್ಮಾನಗಳು ಕೆಲಸ ಕೊಡಲ್ಲ. ನಮ್ಮ ಶ್ರಮ, ಪ್ರತಿಭೆ ಇದ್ದರೆ ಮಾತ್ರ ನಮಗೆ ಕೆಲಸ ಸಿಗುತ್ತದೆ' ಎನ್ನುತ್ತಿದ್ದ ವಿ.ಕೆ. ಮೂರ್ತಿ, ಕೇವಲ ಸಿನಿಮಾ ಛಾಯಾಗ್ರಾಹಕರಾಗಿ ಉಳಿದುಕೊಂಡಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೈಲುವಾಸ ಅನುಭವಿಸಿದ್ದರು.
2008ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ನಟ ಡಾ. ರಾಜ್ಕುಮಾರ್ ಅವರ ನಂತರ ಈ ಪ್ರಶಸ್ತಿ ಪಡೆದ ಮತ್ತೊಬ್ಬ ಮೇರು ಕನ್ನಡಿಗ ವಿ.ಕೆ. ಮೂರ್ತಿ. ಛಾಯಾಗ್ರಹಣಕ್ಕಾಗಿ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗ. ತಮ್ಮ ಛಾಯಾಗ್ರಹಣದ ಎರಡು ಚಿತ್ರಗಳಿಗೆ ಫಿಲ್ಮ್ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.
ಸಂತಾಪ: ಪ್ರಸಿದ್ಧ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಹಿರಿಯ ನಟ ಶ್ರೀನಾಥ್, ಗೀತಸಾಹಿತಿ ಜಯಂತ್ ಕಾಯ್ಕಿಣಿ, ಹಿರಿಯ ಛಾಯಾಗ್ರಾಹಕ ಬಸವರಾಜ್ ಹಾಗೂ ಕರ್ನಾಟಕ ಟೆಲಿವಿಷನ್ ಆಂಡ್ ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸೇರಿದಂತೆ ಇಡೀ ಚಿತ್ರೋದ್ಯಮ ವಿ.ಕೆ. ಮೂರ್ತಿ ಅವರ ನಿಧನಕ್ಕೆ ಕಂಬನಿ ಮಿಡಿದಿದೆ.
ಒಬ್ಬ ಕನ್ನಡಿಗ ಭಾರತೀಯ ಚಿತ್ರದ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಹಾಗೆ ಹಿಂದಿಯ ಗುರುದತ್ ಯುಗದ ಕೊನೇ ಕೊಂಡಿ ವಿ.ಕೆ. ಮೂರ್ತಿ ಅವರ ನಿಧನದಿಂದ ಭಾರತೀಯ ಚಿತ್ರೋದ್ಯಮದ ಮಹತ್ವದ ಯುಗವೊಂದು ಅಂತ್ಯಗೊಂಡಂತಾಗಿದೆ. ಒಬ್ಬ ತಂತ್ರಜ್ಞನಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ತೆಗೆದುಕೊಂಡಿದ್ದು ಅವರ ಪ್ರತಿಭೆಗೆ ಸಾಕ್ಷಿ. ಆದರೆ, ಕನ್ನಡಿಗನಾಗಿ ಕನ್ನಡ ಚಿತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಾಗಲಿಲ್ಲ ಎನ್ನುವುದು ಬೇಸರದ ವಿಷಯ.
- ಪಿ. ಶೇಷಾದ್ರಿ, ನಿರ್ದೇಶಕ