ನೋಂದಣಿಯಾಗದ ಅರ್ಚಕರ ನಿಷೇಧಿಸಿ
ಗೋಕರ್ಣ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಅಭಿವೃದ್ಧಿ ನೇತೃತ್ವ ವಹಿಸಿದ ರಾಮಚಂದ್ರಾಪುರ ಮಠಕ್ಕೆ ಅಡ್ಡಗಾಲು ಹಾಕುತ್ತಿರುವ ಕೆಲವು ಅರ್ಚಕರ ವಿರುದ್ಧ ಭಕ್ತರೇ ತಿರುಗಿ ಬಿದ್ದಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಕರ್ಣ ಆತ್ಮಲಿಂಗ ಭಕ್ತವೃಂದದ ಪ್ರಮುಖರು, ಉಪಾಧಿವಂತರಾಗಿ ನೋಂದಣಿ ಮಾಡಿಕೊಳ್ಳದ ಅರ್ಚಕರು ಮಹಾಬಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು. ಕೆಲ ಅರ್ಚಕ ಮನೆತನದವರು ರಾಮಚಂದ್ರಾಪುರ ಮಠಕ್ಕೆ ಮತ್ತು ದೇವಾಲಯಕ್ಕೆ ಅಪಚಾರವೆಸಗಿ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಸಾಕಷ್ಟು ಅವಕಾಶಗಳಿದ್ದರೂ ಈವರೆಗೆ ಉಪಾಧಿವಂತರಾಗಿ ನೋಂದಣಿಗೊಳ್ಳದ ಅರ್ಚಕರಿಗೆ ಪೂಜಾ ಕೈಂಕರ್ಯವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ದೇವರು ಮತ್ತು ಭಕ್ತರ ಭಾವನೆಗಳ ಕುರಿತಾಗಿ ಆಟವಾಡುತ್ತಿರುವ ಈ ದುಷ್ಟರ ಬಗ್ಗೆ ಆತ್ಮಲಿಂಗ ಭಕ್ತ ವೃಂದದ ಆಗ್ರಹವನ್ನು ಮೀರಿ ಆಡಳಿತ ಮಂಡಳಿ ಅಂಥವರಿಗೆ ದೇವಾಲಯದಲ್ಲಿ ಪೂಜಾ ವಿಧಿವಿದಾನ ನಡೆಸಲು ಅನುಮತಿ ನೀಡಿದ್ದೇ ಆದಲ್ಲಿ ಆಗ ನಾವು ಆಡಳಿತ ಮಂಡಳಿಯ ಮೇಲೆಯೇ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಭಕ್ತವೃಂದದ ಮುಖಂಡ ಮುರಳೀಧರ ಪ್ರಭು ತಿಳಿಸಿದರು.
ಹೊರದಬ್ಬುವುದು ನಿಶ್ಚಿತ: ಜಿಲ್ಲಾ ಪಂಚಾಯಿತಿ ಸದಸ್ಯ ಪ್ರದೀಪ ನಾಯಕ, ದೇವಾಲಯದ ಅಭಿವೃದ್ಧಿಗೆ ಮಾರಕವಾಗಿರುವ ಕೆಲ ಬ್ರಾಹ್ಮಣ ಕುಟುಂಬದವರು ಉಪಾಧಿವಂತರಾಗಿ ಪರಿವರ್ತನೆಗೊಳ್ಳದೇ ಪೂಜಾ ಕೈಂಕರ್ಯದ ನಿಮಿತ್ತ ದೇವಾಲಯದ ಒಳಹೋಗುವಂತಿಲ್ಲ. ದೇವಾಲಯದ ಆಡಳಿತ ಮಂಡಳಿಯ ನಿಯಮ ನಿಬಂಧನೆಗಳಿಗೆ ಬದ್ಧರಾಗಿ ದೇವಾಲಯ ಪ್ರವೇಶಿಸಬೇಕು. ಈ ಸಂಬಂಧ ಆಡಳಿತ ಮಂಡಳಿಯೂ ಕಾನೂನಿನ ಸಹಕಾರದಿಂದ ಈ ವ್ಯವಸ್ಥೆ ಜಾರಿಗೊಳಿಸಬೇಕು. ಒಂದು ವೇಳೆ ಈ ನಿಯಮವನ್ನು ಆಡಳಿತ ಸಮಿತಿ ಜಾರಿಗೊಳಿಸುವಲ್ಲಿ ವಿಫಲವಾದಲ್ಲಿ ನಿರುಪಾದಿವಂತರನ್ನು ಭಕ್ತ ವೃಂದದವರೇ ಹೊರದಬ್ಬುವದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು. ಹಿರಿಯ ಯಕ್ಷಗಾನ ಕಲಾವಿದ ಅಡಿಗೋಣ ಬೀರಣ್ಣ ಮಾಸ್ತರ, ಉಪನ್ಯಾಸಕರಾದ ಸತ್ಯನಾರಾಯಣ ಶರ್ಮಾ, ಗ್ರಾಪಂ ಸದಸ್ಯ ರಮೇಶ ಪ್ರಸಾದ, ಶೇಖರ ನಾಯ್ಕ, ನಾರಾಯಣ ಗೌಡ ತಲಗೇರಿ, ರಾಜು ನಾಯಕ ತಲಗೇರಿ, ದುರ್ಗು ಹೊಸ್ಕಟ್ಟಾ ಉಪಸ್ಥಿತರಿದ್ದರು.